ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನ: ಬಂಗುಡೆ ಮೀನಿನ ಚಿನ್ನದ ಸರ ಸಮರ್ಪಣೆ

ಕಾಪು ಎ.7: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ರಥೋತ್ಸವ ಮತ್ತು ನಾಗಮಂಡಲೋತ್ಸವ ನಡೆಯುತ್ತಿದ್ದು, ದೇವಸ್ಥಾನದಲ್ಲಿ ದೇವಿಗೆ ನಿನ್ನೆ ಮಂಗಳೂರಿನ ಯಾಂತ್ರಿಕ ಮೀನುಗಾರರ ಸಹಕಾರಿ ಸಂಘ ನಿ.ಸೌತ್ ವಾರ್ಫ್ ಮಂಗಳೂರು ಇದರ ವತಿಯಿಂದ ಚಿನ್ನದ ಬಂಗುಡೆ ಸರವನ್ನು ಸೇವಾ ರೂಪದಲ್ಲಿ ಸಮರ್ಪಿಸಲಾಯಿತು. 

ಮೊಗವೀರ ಸಮಾಜದ ಪ್ರಧಾನ ಆರಾಧನ ಕ್ಷೇತ್ರವಾದ ಉಚ್ಚಿಲ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿ ವಿದ್ವಾನ್ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ, ಕ್ಷೇತ್ರದ ಹಿರಿಯ ಆರ್ಚಕ ವೆಂಕಟ ನರಸಿಂಹ ಉಪಾಧ್ಯಾಯ, ರಾಘವೇಂದ ಉಪಾಧ್ಯಾಯ ಮತ್ತು ವಾಸ್ತುತಜ್ಞ ವಿದ್ವಾನ್ ಸುಬ್ರಹ್ಮಣ್ಯ ಭಟ್, ಜ್ಯೋತಿಷಿ ಪಯ್ಯನ್ನೂರು ಮಾಧವನ್ ಪೊದುವಾಳ್ ಅವರ ಉಪಸ್ಥಿತಿಯಲ್ಲಿ ಆಗಮ ತಂತ್ರವರೇಣ್ಯರು, ವೇದಜ್ಞ ಋತ್ವಿಜರ ಯತ್ನಿಸಿದ ಸಹಕಾರದೊಂದಿಗೆ ಬಿಂಬ ಪುನರ್ ಪ್ರತಿಷ್ಠಾಪನ ಧಾರ್ಮಿಕ ವಿಧಿ ವಿಧಾನ ಗಳೊಂದಿಗೆ ಸ್ವರ್ಣ ಶಿಖರ ಪ್ರತಿಷ್ಠೆ, ಶ್ರೀಮಹಾಲಕ್ಷ್ಮೀ ದೇವಿಯ ಬಿಂಬ ಪ್ರತಿಷ್ಠೆ, ಪ್ರಸನ್ನ ಗಣಪತಿ ಮತ್ತು ಭದ್ರಕಾಳಿ ದೇವಿಯ ಬಿಂಬ ಪ್ರತಿಷ್ಠೆ ಸಂಪನ್ನಗೊಂಡವು.

ಕ್ಷೇತ್ರದ ಸನ್ನಿಧಿಯಲ್ಲಿ ನಿನ್ನೆ ಬೆಳಿಗ್ಗೆ 5.30ಕ್ಕೆ ಸ್ವರ್ಣ ಶಿಖರ ಪ್ರತಿಷ್ಠೆ ನಡೆದು, 6.50ಕ್ಕೆ ಶ್ರೀ ಮಹಾಲಕ್ಷ್ಮೀ ದೇವಿಯ ಬಿಂಬ ಪ್ರತಿಷ್ಟಾಪನೆಗೊಂಡಿತು. ಬಳಿಕ ಶ್ರೀ ಪ್ರಸನ್ನ ಗಣಪತಿ ದೇವರು, ಶ್ರೀ ಭದ್ರಕಾಳಿ ಅಮ್ಮನವರ ಬಿಂಬ ಪುನರ್ ಪ್ರತಿಷ್ಠಾಪಿಸಲಾಯಿತು. 

ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಬ್ರಹ್ಮಕಲಶ ಪುಣ್ಯೋತ್ಸವ ಸಮಿತಿ ಅಧ್ಯಕ್ಷ ಡಾ| ಜಿ.ಶಂಕರ್, ದಕ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ದ.ಕ. ಮೊಗವೀರ ಮಹಾಜನ ಮುಂಬಯಿ ಸಮಿತಿಯ ಅಧ್ಯಕ್ಷ ಬಿ.ಜೆ. ಶ್ರೀಯಾನ್, ದ.ಕ. ಮೊಗವೀರ ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಅಪ್ಪಿಎಸ್ ಸಾಲ್ಯಾನ್,  ಶಾಸಕ ಲಾಲಾಜಿ ಮೆಂಡನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಯು.ಆರ್. ಸಭಾಪತಿ, ಗಣ್ಯರಾದ ಯಶ್ಪಾಲ್ ಸುವರ್ಣ, ಆನಂದ ಸಿ. ಕುಂದರ್, ಶ್ರೀಪತಿ ಭಟ್ ಉಚ್ಚಿಲ, ನಯನಾ ಯು. ಗಣೇಶ್ ಹಾಗೂ ವಿವಿಧ ಸಮಿತಿಗಳ ಪದಾಕಾರಿಗಳು ಸಮಾಜದ ಮುಖಂಡರು, ಸಮಾಜ ಬಾಂಧವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!