ಹಣ ಕಳೆದು ಹಾಕಿದ ಮಗನನ್ನೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ತಂದೆ

ಬೆಂಗಳೂರು, ಎ.7: 12 ಸಾವಿರ ಹಣ ಕಳೆದುಕೊಂಡ ಎಂಬ ಕಾರಣಕ್ಕೆ ಸ್ವಂತ ಮಗನನ್ನೇ  ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಅಮಾನವೀಯ ಘಟನೆ ಬೆಂಗಳೂರಿನ ಆಝಾದ್‍ ನಗರದಲ್ಲಿ‌ ನಡೆದಿದೆ.

ಅಝಾದ್ ನಗರ ನಿವಾಸಿ ಅರ್ಪಿತ್ ತಂದೆಯಿಂದ ಕೊಲೆಯಾದ ನತದೃಷ್ಟ ಮಗ. ಸುರೇಂದ್ರ ಕ್ಷುಲ್ಲಕ ಕಾರಣಕ್ಕೆ ಮಗನನ್ನೇ ಕೊಂದ ಪಾಪಿ ತಂದೆ. ಎ.1ರಂದು ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಅರ್ಪಿತ್  12 ಸಾವಿರ ರೂ. ನಗದು ಕಳೆದುಕೊಂಡಿದ್ದರಿಂದ ಸಿಟ್ಟಿಗೆದ್ದ ಆರೋಪಿ ತಂದೆ ಮಗನ ಮೇಲೆ ಪೆಟ್ರೋಲ್ ಸುರಿದಿದ್ದಾನೆ ಎನ್ನಲಾಗಿದೆ. ಬಳಿಕ ಬೆಂಕಿ ಕಡ್ಡಿ ಗೀರಲು ಆತ ಯತ್ನಿಸುತ್ತಿದ್ದಂತೆ ಮನೆಯಿಂದ ಹೊರ ಬಂದ ಅರ್ಪಿತ್ ನ ಹಿಂದೆಯೇ ಹೊರಬಂದ ಸುರೇಂದ್ರ ಬೆಂಕಿ ಕಡ್ಡಿ ಗೀರಿ ಮಗನ ಮೇಲೆ ಎಸೆದಿದ್ದಾನೆ. ಬೆಂಕಿ ಮೈಮೇಲೆ ಆವರಿಸುತ್ತಿದ್ದಂತೆ ರಸ್ತೆಯಲ್ಲಿ ಬೊಬ್ಬೆ ಹೊಡೆಯುತ್ತಾ ಓಡಾಡಿದ ಅರ್ಪಿತ್ ರನ್ನು ಬಳಿಕ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಸುಟ್ಟ ಗಾಯಗಳೊಂದಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅರ್ಪಿತ್ ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿ ಆರೋಪಿ ಸುರೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.ಈ ಬಗ್ಗೆ ಡಿಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಇದೀಗ ಘಟನೆ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *

error: Content is protected !!