| ಕುಂದಾಪುರ ಎ.7: ಉಡುಪಿ ಜಿಲ್ಲಾ ಕರಾವಳಿಯಲ್ಲಿ ಮತ್ಸ್ಯಕ್ಷಾಮ ಉಂಟಾಗಿದ್ದು ಮೀನುಗಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದೀಗ ಮೊದಲೇ ಡೀಸೆಲ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಮೀನುಗಾರರಿಗೆ ಮತ್ಸ್ಯಕ್ಷಾಮದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದರಿಂದ ನಷ್ಟದ ಸುಳಿಯಲ್ಲಿ ಸಿಲುಕಿರುವ ಮೀನುಗಾರರು ಗಂಗೊಳ್ಳಿ, ಮಲ್ಪೆ, ಮರವಂತೆ, ಕೊಡೇರಿ, ಶಿರೂರು, ಉತ್ತರ ಕನ್ನಡ ಸಹಿತ ಬಹುತೇಕ ಎಲ್ಲಾ ಕಡೆಗಳಲ್ಲಿ ಮೀನುಗಾರಿಕೆಯನ್ನೇ ಸ್ಥಗಿತಗೊಳಿಸಿದ್ದಾರೆ. ಇದರಿಂದ ಮತ್ಸ್ಯ ಭೋಜನ ಪ್ರಿಯರಿಗೆ ಮೀನುಗಳ ದರ ಏರಿಕೆಯ ಬಿಸಿ ತಟ್ಟಲಿದೆ. ಯಾಕೆಂದರೆ ಬಹುತೇಕ ಮೀನುಗಾರಿಕೆ ಸ್ಥಗಿತಗೊಂಡಿರುವುದರಿಂದ ಎಲ್ಲಾ ಬಗೆಯ ಮೀನುಗಳ ಬೆಲೆ ಏರಿಕೆಯಾಗಲಿದೆ. ಇದೀಗ ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಗೆ ಮೀನು ಕೂಡಾ ಸೇರ್ಪಡೆಗೊಂಡಿದ್ದು, ನೂರರ ಆಸುಪಾಸಿನಲ್ಲಿದ್ದ 1 ಕೆ.ಜಿ. ಬಂಗುಡೆಗೆ ಈಗ 110-140 ರೂ. ತಲುಪಿದೆ. ಅಂಜಲ್ 700 ರೂ.ಗಿಂತ ಹೆಚ್ಚಿದ್ದು, ಪಾಂಪ್ಲೆಟ್ ಹರಾಜು ಕೇಂದ್ರದಲ್ಲಿಯೇ 900 ರೂ. ಗೆ ಹಾಗೂ ಮಾರುಕಟ್ಟೆಯಲ್ಲಿ 1,100 ರೂ.ಗಿಂತಲೂ ಹೆಚ್ಚಿದೆ. ಇದರೊಂದಿಗೆ ಸಿಗಡಿ ದರ ಕೂಡಾ 400 ರೂ. ಆಸುಪಾಸಿನಲ್ಲಿದೆ.
ಮೀನುಗಾರರಿಗೆ ಮಾರ್ಚ್, ಎಪ್ರಿಲ್ ಸಮೃದ್ಧವಾಗಿ ಮೀನು ಸಿಗುವ ಸೀಸನ್. ಮೇ ಅಂತ್ಯದಿಂದ ಯಾಂತ್ರಿಕೃತ ಮೀನುಗಾರಿಕೆಗೆ ರಜೆ, ಮತ್ತೆ 60 ದಿನ ಮೀನುಗಾರಿಕೆ ನಡೆಯುವುದಿಲ್ಲ. ಅದಕ್ಕೆ ಮುನ್ನ ಒಂದಷ್ಟು ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದ ಮೀನುಗಾರರಿಗೆ ಸೀಸನ್ನಲ್ಲೇ ಭಾರೀ ಹೊಡೆತ ಬಿದ್ದಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈವರೆಗಿನ ಒಟ್ಟಾರೆ ಸೀಸನ್ ಉತ್ತಮವಾಗಿದ್ದು, ಒಂದಷ್ಟು ಲಾಭ ತಂದಿತ್ತು. ಆದರೆ ಈಗ ಮತ್ಸ್ಯಕ್ಷಾಮ ಸಂಕಷ್ಟ ತಂದೊಡ್ಡಿದೆ.ಗಂಗೊಳ್ಳಿ, ಮಲ್ಪೆ ಸಹಿತ ಹಲವು ಬಂದರುಗಳಲ್ಲಿ ಒಂದು ವಾರದಿಂದ ಮೀನುಗಾರಿಕೆಗೆ ತೆರಳಿದ ಬೋಟು, ದೋಣಿ ಗಳು ಬರಿಗೈಯಲ್ಲಿ ವಾಪಾಸಾಗುತ್ತಿವೆ. ಇದರಿಂದ ಬಹುತೇಕ ಮೀನುಗಾರರು ಮೀನುಗಾರಿಕೆ ಸ್ಥಗಿತ ಗೊಳಿಸಿದ್ದಾರೆ. ಮೀನುಗಾರಿಕೆಗೆ ತೆರಳಿದರೂ ಸಿಗುವ ಮೀನಿನಲ್ಲಿ ಡೀಸೆಲ್, ಸೀಮೆಎಣ್ಣೆಯ ಖರ್ಚು ಕೂಡ ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ಮೀನುಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಉಡುಪಿಯಲ್ಲಿ 1,600 ಮತ್ತು ದ.ಕ ಜಿಲ್ಲೆಯಲ್ಲಿ 953 ಡೀಸೆಲ್ ಸಬ್ಸಿಡಿಯುಕ್ತ ಬೋಟುಗಳಿದ್ದು, ದ.ಕ., ಉಡುಪಿ ಮತ್ತು ಉ. ಕನ್ನಡ ಜಿಲ್ಲೆಗಳ 5 ಸಾವಿರಕ್ಕೂ ಅಧಿಕ ಯಾಂತ್ರೀಕೃತ ಮೀನುಗಾರರು ಇದರ ಫಲಾನುಭವಿಗಳಾಗಿದ್ದಾರೆ. ಮಂಗಳೂರಿನಿಂದ ಕಾರವಾರದ ವರೆಗೆ 9,900ಕ್ಕೂ ಅಧಿಕ ದೋಣಿಗಳಿದ್ದು, 25 ಸಾವಿರಕ್ಕೂ ಅಧಿಕ ನಾಡ ದೋಣಿ ಮೀನುಗಾರರಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಿಂದಾಗಿ ಮಲ್ಪೆ, ಗಂಗೊಳ್ಳಿ, ಕಾರವಾರ ಸಹಿತ ಬಹುತೇಕ ಕಡೆಗಳಲ್ಲಿ ಪರ್ಸಿನ್ ಬೋಟುಗಳು ಮೀನುಗಾರಿಕೆಯನ್ನು ಸ್ಥಗಿತಗೊಳಿಸಿವೆ. ನಾಡದೋಣಿಗಳು ಕೂಡ ಬಹುತೇಕ ದಿನಗಳಲ್ಲಿ ಮೀನುಗಾರಿಕೆ ನಡೆಸುತ್ತಿಲ್ಲ. ಈಗ ಸ್ವಲ್ಪ ಮಟ್ಟಿಗೆ ಮೀನುಗಾರಿಕೆಯಲ್ಲಿ ಟ್ರಾಲ್ ಹಾಗೂ ತ್ರಿಸೆವೆಂಟಿ ಬೋಟುಗಳು ಮಾತ್ರ ನಿರತವಾಗಿದ್ದಾರೆ ಆದರೂ ಅವರಿಗೂ ಅಷ್ಟೇನೂ ಮೀನು ಸಿಗುತ್ತಿಲ್ಲ. ಆದ್ದರಿಂದ ಮಂಗಳೂರಿನಲ್ಲಿ ಮಾತ್ರ ಪರ್ಸಿನ್ ಬೋಟುಗಳು ಮೀನುಗಾರಿಕೆ ನಡೆಸುತ್ತಿದೆ.
ಮಲ್ಪೆಯಲ್ಲಿ ಪರ್ಸಿನ್, ನಾಡದೋಣಿಗಳು ಬಹುತೇಕ ನಿಲ್ಲಿಸಿವೆ. ಟ್ರಾಲ್- ತ್ರಿಸೆವೆಂಟಿ ಶೇ. 70ರಷ್ಟು ಮಾತ್ರ ಹೋಗುತ್ತಿದ್ದು, ಸಾಧಾರಣ ಮೀನು ಸಿಗುತ್ತಿವೆ. ನಿರೀಕ್ಷೆಯಷ್ಟು ಮೀನು ಸಿಗುತ್ತಿಲ್ಲ. ಡೀಸೆಲ್ ಬೆಲೆಯೂ ಏರಿಕೆ ದುಬಾರಿಯಾಗುತ್ತಿದೆ. ಇದರಿಂದಲೇ ಬಹುತೇಕರು ಕಡಲಿಗಿಳಿಯುತ್ತಿಲ್ಲ ಎಂದು ಮೀನುಗಾರ ಮುಖಂಡರಾದ ನಾರಾಯಣ ಅಮೀನ್ ಮಲ್ಪೆ ಹೇಳುತ್ತಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಗಂಗೊಳ್ಳಿಯ ಮೀನುಗಾರ ರಮೇಶ್ ಕುಂದರ್ ಅವರು, ಮೀನುಗಾರಿಕೆಗೆ ಹೋದರೂ ಮೀನು ಸಿಗುತ್ತಿಲ್ಲ. ಬೋಟಿಗೆ ಒಂದು ಟ್ರಿಪ್ಗೆ 5-6 ಸಾವಿರ ಲೀ. ಡೀಸೆಲ್ ಅಗತ್ಯವಿದೆ. ಒಮ್ಮೆ ಹೊರಟರೆ 10 ದಿನ ಮೀನು ಗಾರಿಕೆಯಲ್ಲಿರುತ್ತದೆ. ಈ 10 ದಿನಗಳಲ್ಲಿ ಡೀಸೆಲ್ ಬೆಲೆ 5-10 ರೂ. ಏರಿಕೆಯಾದರೆ ಕನಿಷ್ಠ 5 ಸಾವಿರ ಲೀ.ಗೆ 50 ಸಾವಿರ ರೂ. ಹೆಚ್ಚಳವಾಗಿರುತ್ತದೆ. ಡೀಸೆಲ್ ಬೆಲೆ, ಖರ್ಚು ಹುಟ್ಟುವಷ್ಟು ಕೂಡ ಮೀನು ಸಿಗುತ್ತಿಲ್ಲ ಎಂದು ಹೇಳಿದ್ದಾರೆ. | |