ಈ ಸರ್ಕಾರ ದಲಿತರಿಗೆ ನಯಾಪೈಸೆ ದುಡ್ಡು ಕೊಟ್ಟಿಲ್ಲ- ಸಿಎಂ ಮುಂದೆಯೇ ಬಾಬು ಜಗಜೀವನ್ ರಾಂ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ!
ಬೆಂಗಳೂರು: ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ: ಬಾಬು ಜಗಜೀವನ್ ರಾಮ್ ರವರ 115ನೇ ಜನ್ಮಜಯಂತಿ ಹಾಗೂ ಡಾ ಬಾಬು ಜಗಜೀವನ್ ರಾಂ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಇಂದು ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಲಾಗಿತ್ತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಂಪುಟದ ಹಲವು ಸಚಿವರು, ಗಣ್ಯರು ಭಾಗಿಯಾಗಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕಾರ್ಯಕ್ರಮಕ್ಕೆ ಬಂದಿದ್ದ ವೇದಿಕೆಯ ಮುಂಭಾಗ ಕುರ್ಚಿಯಲ್ಲಿ ಆಸೀನರಾಗಿದ್ದವರು ಕಾರ್ಯಕ್ರಮ ಸರಿಯಾಗಿ ನಡೆಸುತ್ತಿಲ್ಲ ಎಂದು ಆರೋಪಿಸಿ ಗದ್ದಲ, ಗಲಾಟೆ ಎಬ್ಬಿಸಿದರು.
ಬಾಬು ಜಗಜೀವನರಾಂ ಹೆಸರಲ್ಲಿ ಸಣ್ಣ ಜಾಹೀರಾತು ಕೊಟ್ಟಿದ್ದಾರೆ. ಜನರಿಗೆ ಆಹ್ವಾನ ಕೊಟ್ಟಿಲ್ಲ, ಖಾಲಿ ಖುರ್ಚಿಗಳಿಗೆ ಭಾಷಣ ಮಾಡ್ತಿದ್ದಾರೆ ಎಂದು ಕರ್ನಾಟಕ ಆದಿ ಜಾಂಬವ ಸಂಘದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಆಕ್ರೋಶ ಹೊರಹಾಕುತ್ತಿದ್ದ ಕಾರ್ಯಕರ್ತರನ್ನು ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಹೊರಗೆ ಎಳೆದೊಯ್ದರು.
ಈ ಸರ್ಕಾರಕ್ಕೆ ದೀನದಲಿತರು, ಹಿಂದುಳಿದವರ ಬಗ್ಗೆ ಕಾಳಜಿಯೇ ಇಲ್ಲ, ದಲಿತರ ಅಭಿವೃದ್ಧಿಗೆ ನಯಾಪೈಸೆ ಹಣವನ್ನು ಕೊಟ್ಟಿಲ್ಲ ಎಂದು ಸಿಎಂ ಬೊಮ್ಮಾಯಿಯವರ ಮುಂದೆಯೇ ಆಕ್ರೋಶ ಹೊರಹಾಕಿದರು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಭಾಷಣ ಮಾಡಲು ಮುಂದಾದಾಗ ಮಿನಿಸ್ಟರ್ ಭಾಷಣ ನಿಲ್ಸಿ, ನಿಮ್ಮಿಂದ ದಲಿತರು ಬೀದಿಪಾಲಾಗಿದ್ದಾರೆ ಎಂದು ಗಲಾಟೆ ಎಬ್ಬಿಸಿದರು.