ಗ್ರಾಹಕನ ಸಿಬಿಲ್ ಸ್ಕೋರ್ ನಲ್ಲಿ ಲೋಪದೋಷ: 45 ಸಾವಿರ ರೂ. ದಂಡ ಕಟ್ಟಲು ಬ್ಯಾಂಕಿಗೆ ಆದೇಶ

ಬೆಂಗಳೂರು: ಕ್ರೆಡಿಟ್ ಸ್ಕೋರ್ ಕಳಪೆಯಾಗಿದೆ ಎಂದು ಹಣಕಾಸು ಸಂಸ್ಥೆಯೊಂದು ಮನೆ ಸಾಲ ನೀಡಲು ನಿರಾಕರಿಸಿದ್ದಕ್ಕೆ ಸಿಂಡಿಕೇಟ್ ಬ್ಯಾಂಕ್ ದಂಡ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ. ಸಿಬಿಲ್ (CIBIL)ನ್ನು ತಿಳಿಸುವ ಕೆಲಸದ ನಿರ್ವಹಿಸುವಲ್ಲಿ ಸಿಂಡಿಕೇಟ್ ಬ್ಯಾಂಕ್ ವಿಫಲವಾಗಿದ್ದು ಹೊಣೆಗೇಡಿತನದಿಂದ ವರ್ತಿಸಿದೆ ಎಂದು ದಂಡ ಹಾಕಲಾಗಿದೆ.

ಅಲ್ಲದೆ ಮನೆ ಸಾಲಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 40 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಬೆಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ ಆದೇಶಿಸಿದೆ. ಗ್ರಾಹಕರಿಗೆ ಸರಿಯಾದ ಸೇವೆ ನೀಡುವಲ್ಲಿ ಬ್ಯಾಂಕ್ ಸಿಬ್ಬಂದಿಯ ಬೇಜವಾಬ್ದಾರಿತನ ಇದರಲ್ಲಿ ಎದ್ದು ಕಾಣುತ್ತಿದ್ದು ವ್ಯಾಜ್ಯ ವೆಚ್ಚವಾಗಿ 5 ಲಕ್ಷ ರೂಪಾಯಿ ಮೊತ್ತ ದಂಡವನ್ನು ಸಹ ಹಾಕಲಾಗಿದೆ.

ನಡೆದ ಘಟನೆಯೇನು?:ಉದಯನಗರ ನಿವಾಸಿ ಪಿ ಎನ್ ರಾಘವೇಂದ್ರ ರಾವ್ ಬೆಂಗಳೂರಿನ ಪ್ಯಾಲೆಸ್ ಗುಟ್ಟಹಳ್ಳಿ ಸಿಂಡಿಕೇಟ್ ಬ್ಯಾಂಕ್ ಶಾಖೆಯಿಂದ ಸೆಪ್ಟೆಂಬರ್ 2014ರಲ್ಲಿ ಒಂದೂವರೆ ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು. ಮರುವರ್ಷ ನವೆಂಬರ್ 2015ರಲ್ಲಿ ಅದನ್ನು ಬ್ಯಾಂಕಿಗೆ ಹಿಂತಿರುಗಿಸಿದ್ದರು. ನಂತರ 2016ರಲ್ಲಿ ಡಿಎಚ್ ಎಲ್ಎಫ್ ಹಣಕಾಸು ಸಂಸ್ಥೆಗೆ ಹೋಗಿ 12 ಲಕ್ಷ ಮನೆ ಸಾಲ ಬೇಕೆಂದು ಕೇಳಿದ್ದರು. ಆದರೆ ಅವರ ಸಿಬಿಲ್ ಸ್ಕೋರ್ ನಲ್ಲಿ 1ಲಕ್ಷದ 41 ಸಾವಿರದ 357 ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ ಎಂದು ತೋರಿಸಿತ್ತು. ಹೀಗಾಗಿ ಅವರಿಗೆ ಡಿಎಚ್ ಎಲ್ಎಫ್ ಸಾಲ ಕೊಡಲಿಲ್ಲ.

ತಕ್ಷಣವೇ ಅವರು ಸಿಂಡಿಕೇಟ್ ಬ್ಯಾಂಕಿಗೆ ಹೋಗಿ ತಮ್ಮ ಸಾಲವನ್ನು ಕಳೆದ ವರ್ಷವೇ ಹಿಂತಿರುಗಿಸಿದ್ದೆ, ಆದರೆ ಸಾಲ ಬಾಕಿಯಿದೆ ಎಂದು ತೋರಿಸುತ್ತಿದೆಯಲ್ಲಾ ಎಂದು ಕೇಳಿದಾಗ ಆಗಿರುವ ಪ್ರಮಾದ ಅರ್ಥವಾಗಿ ಬ್ಯಾಂಕ್ ಸಿಬ್ಬಂದಿ ಅದನ್ನು ಸರಿಪಡಿಸಿದರು.
ಇದಾದ ಬಳಿಕ ತಮಗೆ ಸಮಯ ಮತ್ತು ಹಣ ವೆಚ್ಚವಾಗಿದೆ ಎಂದು ರಾಘವೇಂದ್ರ ರಾವ್ ಗ್ರಾಹಕ ವ್ಯಾಜ್ಯಗಳ ಪರಿಹಾರ ಕೇಂದ್ರಕ್ಕೆ ದೂರು ನೀಡಿದರು. ವಿಚಾರಣೆ ನಡೆಸಿದ ಕೇಂದ್ರ, ಬ್ಯಾಂಕುಗಳು ಸಾಲ ಹಿಂಪಡೆಯುವಲ್ಲಿ ತೋರಿಸುವ ಆಸಕ್ತಿ, ಶ್ರದ್ಧೆ, ಉತ್ಸಾಹವನ್ನು ಗ್ರಾಹಕರ ಹಿತ ರಕ್ಷಣೆ ಮಾಡುವಲ್ಲಿ ನೋಡುತ್ತಿಲ್ಲ ಎಂದು ಹೇಳಿದೆ.

ಏನಿದು ಸಿಬಿಲ್ ಸ್ಕೋರ್?:CIBIL(Credit information Bureau(India)Limited), ಸಿಬಿಲ್ ಸ್ಕೋರ್ ಗ್ರಾಹಕರ ಕ್ರೆಡಿಟ್ ಇತಿಹಾಸ, ರೇಟಿಂಗ್ ಮತ್ತು ವರದಿಯ 3-ಅಂಕಿಯ ಸಂಖ್ಯಾ ಸಾರಾಂಶವಾಗಿದೆ. ಇದು 300 ರಿಂದ 900 ರವರೆಗೆ ಇರುತ್ತದೆ. ನಿಮ್ಮ ಸ್ಕೋರ್ 900 ಕ್ಕೆ ಹತ್ತಿರವಾಗಿದ್ದರೆ, ನಿಮ್ಮ ಕ್ರೆಡಿಟ್ ರೇಟಿಂಗ್ ಉತ್ತಮವಾಗಿದೆ ಎಂದರ್ಥ.

ನಿಮಗೆ ಸಾಲ ಬೇಕಾದಾಗ ಸಿಬಿಲ್ ಸ್ಕೋರ್ ಎಷ್ಟು ಎಂದು ನೋಡಿಕೊಂಡು ಬ್ಯಾಂಕುಗಳು ನೀವು ಸಾಲ ಪಡೆಯಲು ಅರ್ಹರೇ ಎಂದು ನಿರ್ಧಾರ ಮಾಡುತ್ತದೆ. ಸಾಲಗಾರನು ಸಾಲಗಳನ್ನು ಮರುಪಾವತಿಸಿದ ದಾಖಲೆ ಸಿಬಿಲ್ ಸ್ಕೋರ್ ನಲ್ಲಿರುತ್ತದೆ. ಕ್ರೆಡಿಟ್ ವರದಿಯು ಬ್ಯಾಂಕುಗಳು, ಕ್ರೆಡಿಟ್ ಕಾರ್ಡ್ ಕಂಪನಿಗಳು, ಸಂಗ್ರಹ ಏಜೆನ್ಸಿಗಳು ಮತ್ತು ಸರ್ಕಾರಗಳು ಸೇರಿದಂತೆ ಹಲವಾರು ಮೂಲಗಳಿಂದ ಸಾಲಗಾರನ ಕ್ರೆಡಿಟ್ ಇತಿಹಾಸವನ್ನು ದಾಖಲಿಸಿಕೊಂಡಿರುತ್ತದೆ.

Leave a Reply

Your email address will not be published. Required fields are marked *

error: Content is protected !!