ಬಿಜೆಪಿ ಕಾರ್ಯಕರ್ತರಿಂದ ದೆಹಲಿ ಸಿಎಂ ಮನೆ ಮೇಲೆ ದಾಳಿ: ಕೇಜ್ರೀವಾಲ್ ಕೊಲೆ ಯತ್ನ ಎಂದ ಆಪ್
ನವದೆಹಲಿ: ಪಂಜಾಬ್ ಚುನಾವಣಾ ಸೋಲಿನ ನಂತರ ಭಾರತೀಯ ಜನತಾ ಪಕ್ಷವು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು “ಕೊಲ್ಲಲು” ಬಯಸಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಬುಧವಾರ ಆರೋಪಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ದೆಹಲಿ ಸಿಎಂ ಮನೆ ಮೇಲೆ ದಾಳಿ ಮಾಡಿದ ನಂತರ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಸಿಸೋಡಿಯಾ ಅವರು, ಬಿಜೆಪಿ ಕಾರ್ಯಕರ್ತರು ಸಿಸಿಟಿವಿ ಕ್ಯಾಮೆರಾಗಳು ಮತ್ತು ಬ್ಯಾರಿಕೇಡ್ ಗಳನ್ನು ಹಾನಿಗೊಳಿಸಿದ್ದಾರೆ ಎಂದರು.
ಪಂಜಾಬ್ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಲು ಸಾಧ್ಯವಾಗದ ಕಾರಣ, ಬಿಜೆಪಿ ಈಗ ಅವರನ್ನು ಕೊಲ್ಲಲು ಬಯಸಿದೆ. ಇಂದು ಮುಖ್ಯಮಂತ್ರಿ ಮನೆ ಮೇಲೆ ನಡೆದ ದಾಳಿಯು ಪೊಲೀಸರ ಸಹಾಯದಿಂದ ಕೇಜ್ರಿವಾಲ್ ಅವರನ್ನು ಕೊಲ್ಲಲು ಬಯಸಿದೆ ಎಂಬುದನ್ನು ತೋರಿಸುತ್ತದೆ. ಇದರ ವಿರುದ್ಧ ನಾವು ಔಪಚಾರಿಕ ದೂರು ನೀಡುತ್ತೇವೆ’’ ಎಂದು ಸಿಸೋಡಿಯಾ ಹೇಳಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಿಧಾನಸಭೆಯಲ್ಲಿ ನೀಡಿದ ಹೇಳಿಕೆ ಖಂಡಿಸಿ ಬಿಜೆಪಿ ನಾಯಕರು ಬುಧವಾರ ದೆಹಲಿ ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಿದ್ದು, ಈ ವೇಳೆ ಮನೆಯ ಮುಂದಿನ ಬ್ಯಾರಿಕೇಡ್ ಹಾಗೂ ಸಿಸಿಟಿವಿಗಳನ್ನು ನಾಶಗೊಳಿಸಿದ್ದಾರೆ.
ಪ್ರತಿಭಟನೆಯ ನೇತೃತ್ವವನ್ನು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ವಹಿಸಿದ್ದರು. ಶನಿವಾರ ಮತ್ತು ಸೋಮವಾರ ಪ್ರತಿಭಟನೆ ನಡೆಸಿದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿಯ ಮೂರನೇ ಪ್ರತಿಭಟನೆ ಇದಾಗಿದೆ. “ದೇಶದ ಹಿಂದೂಗಳನ್ನು ಅವಮಾನಿಸಿದ್ದಕ್ಕಾಗಿ ಕೇಜ್ರಿವಾಲ್ ಕ್ಷಮೆಯಾಚಿಸಬೇಕು ಮತ್ತು ಅವರು ಕ್ಷಮೆಯಾಚಿಸುವವರೆಗೂ ಬಿಜೆಪಿ ಯುವ ಮೋರ್ಚಾ ಅವರನ್ನು ಬಿಡುವುದಿಲ್ಲ” ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
ಕೇಜ್ರಿವಾಲ್ ಅವರ ನಿವಾಸವನ್ನು ಬಿಜೆಪಿ ಧ್ವಂಸ ಮಾಡಿದೆ ಎಂದು ಆಮ್ ಆದ್ಮಿ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್ ಆರೋಪಿಸಿದೆ. ಟ್ವೀಟ್ ನಲ್ಲಿ “ಬಿಜೆಪಿಯಿಂದ ಸಿಎಂ ಕೇಜ್ರಿವಾಲ್ ಮನೆ ಮೇಲೆ ದಾಳಿ! ಮುರಿದುಬಿದ್ದ ಸಿಸಿಟಿವಿ ಕ್ಯಾಮೆರಾಗಳು, ಮನೆಯ ಗೇಟ್ ನಾಶಗೊಂಡಿದೆ, ಬಿಜೆಪಿಯ ದೆಹಲಿ ಪೊಲೀಸರಿಂದ ಸಂಪೂರ್ಣ ಬೆಂಬಲದೊಂದಿಗೆ ಧ್ವಂಸಗೊಂಡಿದೆ ಎಂದು ಹೇಳಿದ್ದಾರೆ.