ಮೋದಿ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರ ನಿರ್ಮೂಲನೆಯಾಗಿ ಉತ್ತಮ ಆಡಳಿತದ ಭರವಸೆ ಹುಸಿಯಾಗಿದೆ- ಡಿ.ಕೆಂಪಣ್ಣ

ಬೆಂಗಳೂರು, ಮಾ.27: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಉತ್ತಮ ಆಡಳಿತವನ್ನು ನೀಡುತ್ತಾರೆಂಬ ಭರವಸೆ ಹುಸಿಯಾಗಿದೆ ಎಂದು ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಡಿ. ಕೆಂಪಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. 

ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಇನ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್ ಟೆಕ್ನಾಲಾಜಿಸ್ಟ್ ನಲ್ಲಿ ಜಾಗೃತ ಕರ್ನಾಟಕ ವತಿಯಿಂದ ನಡೆದ ‘ಶೇ.40 ಕಮಿಷನ್ ಯಾರಿಗೂ ಆಘಾತ ತರದ ಭಾರೀ ಹಗರಣ ಕರ್ನಾಟಕಕ್ಕೇನು ಕಾದಿದೆ?’ ಎಂಬ ವಿಷಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರಕಾರಿ ಕಾಮಗಾರಿಗಳ ಗುತ್ತಿಗೆಗಳಲ್ಲಿ ಕಮಿಷನ್ ವ್ಯವಹಾರ ಮೊದಲಿನಿಂದಲೂ ಇತ್ತು, ಆದರೆ 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಉತ್ತಮ ಆಡಳಿತವನ್ನು ನೀಡುತ್ತಾರೆಂಬ ಭರವಸೆ ಇತ್ತು. ಆದರೆ ಅದೆಲ್ಲಾ ಇಂದು ಹುಸಿಯಾಗಿದೆ.

ಪ್ರತಿ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ವ್ಯವಹಾರ ನಡೆಯುತ್ತಿರುವ ವಿಷಯ ತಿಳಿದಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಹಾಗೂ ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇ.40 ಕಮಿಷನ್ ವ್ಯವಹಾರ ಜನರಿಗೆ, ಮಾಧ್ಯಮಗಳಿಗೆ, ವಿಪಕ್ಷಕ್ಕೆ ಪ್ರಮುಖ ಅನಿಸುತ್ತಿಲ್ಲ. ಮುಖ್ಯಮಂತ್ರಿಗಳು ಕಮಿಷನ್ ವ್ಯವಹಾರದ ಕುರಿತು ದಾಖಲೆಗಳನ್ನು ಕೇಳಿದರೆ, ಅದನ್ನು ಸಲ್ಲಿಸಲು ಹೇಗೆ ಸಾಧ್ಯ? ಹಾಗಾಗಿ ಸ್ವತಂತ್ರ ತನಿಖೆಗೆ ಆದೇಶಿಸಬೇಕಾಗಿದೆ. ಈ ನಿಟ್ಟಿನಲ್ಲಿ ತನಿಖೆಗೆ ಆದೇಶಿಸದ ಹೊರತು ಹೋರಾಟವನ್ನು ಕೈಬಿಡುವುದಿಲ್ಲ. ಬರುವ ತಿಂಗಳು ಗುತ್ತಿಗೆದಾರರು ಬೃಹತ್ ಹೋರಾಟವನ್ನು ಮಾಡಲಿದ್ದಾರೆ’ ಎಂದು ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದರು.

‘2018ರಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ವ್ಯವಹಾರವನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತರಲಾಯಿತು. ಕಮಿಷನ್ ವ್ಯವಹಾರ ನಡೆಯುತ್ತಿರುವ ಕಾರಣ ಕಳಪೆ ಕಾಮಗಾರಿಗಳು ನಡೆಯುತ್ತಿವೆ ಎಂದು ಅವರಿಗೆ ಮನವರಿಕೆ ಮಾಡಿಕೊಡಲಾಯಿತು. ಆದರೆ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹಾಗಾಗಿ ಪ್ರಧಾನಿ ಮೋದಿ ಅವರಿಗೆ ಪತ್ರವನ್ನು ಬರೆಯಲಾಯಿತು. ಆದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಧ್ಯಮಗಳಲ್ಲಿ ಚರ್ಚೆಯಾದ ಬಳಿಕ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಕಮಿಷನ್ ವ್ಯವಹಾರದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿವರಿಸಲಾಯಿತು. ರಾಜ್ಯಪಾಲರಿಗೂ ದೂರು ಸಲ್ಲಿಸಲಾಯಿತು. ಆದರೆ ರಾಜ್ಯ ಸರಕಾರವು ಇದುವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ, ಇಂದು ಗುತ್ತಿಗೆ ಕಾಮಗಾರಿಗಳ ಮತ್ತೊಂದು ಸಮಸ್ಯೆ ಎದುರಾಗಿದೆ. ಮೊದಲು ಕಾಮಗಾರಿ ನಡೆದಾಗ ಕಮಿಷನ್ ನೀಡಬೇಕಾಗಿತ್ತು. ಆದರೆ ಇಂದು ಕಾಮಗಾರಿ ಆರಂಭವಾಗುವ ಮುನ್ನ ಕಮಿಷನ್ ನೀಡಬೇಕಾಗಿದೆ ಎಂದು ದೂರಿದರು. 

ಈ ವೇಳೆ ಕಾರ್ಯಕ್ರಮ ದಲ್ಲಿ  ನಿವೃತ್ತ ಐಎಎಸ್ ಅಧಿಕಾರಿ ರಘುನಂದನ್ ಮಾತನಾಡಿ, ‘ಲೋಕಾಯುಕ್ತ ಸಂಸ್ಥೆಯು ಭ್ರಷ್ಟ ಅಧಿಕಾರಿಗಳನ್ನು ತನಿಖೆ ನಡೆಸಿ ವರದ ನೀಡುವಲ್ಲಿ ವಿಫಲವಾಗಿದೆ. ಅಲ್ಲದೆ, ಶಿಕ್ಷೆ ನೀಡುವಲ್ಲಿ ವಿಳಂಬ ಧೋರಣೆಯನ್ನು ಅನುಸರಿಸುತ್ತಿದೆ. ಭ್ರಷ್ಟಾಚಾರ ನಿರ್ಮೂಲನ ಮಾಡಲು ನ್ಯಾಯಾಂಗ ವ್ಯವಸ್ಥೆ ದುರ್ಬಲವಾಗಿದೆ’ ಎಂದು ಅವರು ಹೇಳಿದರು. ಹಳೆಯ ಕಾನೂನುಗಳನ್ನೇ ಇಂದಿಗೂ ಅಸ್ತಿತ್ವದಲ್ಲಿ ಇರಿಸಿಕೊಂಡಿರುವುದು ಒಂದು ರೀತಿಯಲ್ಲಿ ಸಮಸ್ಯೆಯಾಗಿದ್ದು, ಮೌಲಿಕ ಶಿಕ್ಷಣ ನೀಡುವುದರ ಮೂಲಕ ಭ್ರಷ್ಟಾಚಾರವನ್ನು ತೊಲಗಿಸಬಹುದಾಗಿದೆ. ರಾಜಕೀಯ ಪಕ್ಷಗಳ ಹಣಕಾಸು ನಿರ್ವಹಣೆಯ ಬಗ್ಗೆ ಸಾರ್ವಜನಿಕವಾಗಿ ಆಡಿಟ್ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು. 

ಇದೇ ಕಾರ್ಯಕ್ರಮದಲ್ಲಿ  ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಮಾತನಾಡಿ, ಎತ್ತಿಹೊಳೆ ನೀರಾವರಿ ಯೋಜನೆಯನ್ನು ಸರಕಾರವು ಪ್ರಾರಂಭಿಸಿ ಕೋಟಿ ಕೋಟಿ ರೂ.ಹಣವನ್ನು ಖರ್ಚು ಮಾಡುತ್ತಿದೆ. ಆದರೆ ನ್ಯಾಷನಲ್ ಇನ್ಟಿಟ್ಯೂಷನ್ ಆಫ್ ಹೈಡ್ರಾಲಾಜಿ ಸರಕಾರವು ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸುವುದಿಲ್ಲ ಎಂದು ಹೇಳುತ್ತಿದೆ. ಈಗಾಗಾಲೇ ಯೋಜನೆಗೆ 24 ಸಾವಿರ ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇನ್ನು ಹೆಚ್ಚು ಹಣವನ್ನು ವಿನಿಯೋಗಿಸಲಾಗುತ್ತದೆಯೇ ಹೊರತು, ಯೋಜನೆ ಮಾತ್ರ ಪೂರ್ಣಗೊಳ್ಳುವ ನಿರೀಕ್ಷೆಯನ್ನು ಜನರು ಕಳೆದುಕೊಂಡಿದ್ದಾರೆ. ಇಂದು ಕೆಲಸವನ್ನು ಮಾಡದೆ ಬಿಲ್ ಮಾಡಿಸಿಕೊಳ್ಳುವ ಪ್ರವೃತ್ತಿ ಮುನ್ನೆಲೆ ಬಂದಿರುವುದು ಗಂಬೀರ ಸಮಸ್ಯೆಯಾಗಿ ಪರಿಗಣಿಸಬೇಕಾಗಿದೆ.

ಪೊಲೀಸ್, ಆರೋಗ್ಯ, ನೀರಾವರಿ ಇಲಾಖೆಯಲ್ಲಿ ವ್ಯಾಪಕವಾದ ಭ್ರಷ್ಟಚಾರ ನಡೆಯುತ್ತಿರುವ ಕಾರಣ ಸಾರ್ವಜನಿಕರ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಜನರು ದಂಗೆ ಏಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಸುಮ್ಮನಿದ್ದಾರೆ. ಇದನ್ನು ಭ್ರಷ್ಟರು ಬಂಡವಾಳ ಮಾಡಿಕೊಂಡಿದ್ದಾರೆ ಎಂದು ದೂರಿದರು.

Leave a Reply

Your email address will not be published. Required fields are marked *

error: Content is protected !!