| ಮಂಗಳೂರು ಮಾ.22: ಕಳೆದ ಕೆಲ ದಿನಗಳಿಂದ ದ.ಕ ಜಿಲ್ಲೆಯಲ್ಲಿ ಕಾರ್ಯಚರಿಸುತ್ತಿರುವ ವೇಶ್ಯಾವಾಟಿಕೆ ದಂದೆ ಬಗ್ಗೆ ಅನೇಕ ಸುದ್ದಿಗಳನ್ನು ಓದುತ್ತಲೇ ಇದ್ದೇವೆ. ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಈಗಾಗಲೇ ಮೂಡುಬಿದಿರೆ, ಉಳ್ಳಾಲ, ಕಾಸರಗೋಡಿನ 16 ಮಂದಿಯನ್ನು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಇಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ. ಅವೆಂದರೆ ಈ ಹೈಟೆಕ್ ವೇಶ್ಯಾವಾಟಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ಅಪ್ರಾಪ್ತ ಬಾಲಕಿಯರು, ವಿದ್ಯಾರ್ಥಿನಿಯರು. ಮಾತ್ರವಲ್ಲದೆ ಈ ವೇಶ್ಯಾವಾಟಿಕೆ ದಂಧೆಗೆ ಬಾಲಕಿಯರನ್ನು ಕರೆತರಲು ಪಿಂಪ್ ಗಳು ಮಾಲ್, ಥಿಯೇಟರ್, ಹೊಟೇಲ್, ಪಾರ್ಕ್ ಮೊದಲಾದೆಡೆ ಹಲವು ದಿನಗಳ ಕಾಲ ಹೊಂಚು ಹಾಕಿರುವುದು ತನಿಖೆ ವೇಳೆ ಗೊತ್ತಾಗಿದೆ. ಅಲ್ಲದೆ ಹೆಚ್ಚಾಗಿ ಬಡವರ್ಗದ ವಿದ್ಯಾರ್ಥಿನಿಯರನ್ನೇ ಗುರಿಯಾಗಿರಿಸಿರುವುದು ತಿಳಿದುಬಂದಿದೆ.
ಅಪ್ರಾಪ್ತ, ಬಡ ವಿದ್ಯಾರ್ಥಿನಿಯರನ್ನು ನಿರಂತರವಾಗಿ ಗಮನಿಸುವ ಮಹಿಳಾ ಪಿಂಪ್ ಗಳು ವಿದ್ಯಾರ್ಥಿಗಳ ಬೇಕು-ಬೇಡಗಳ ಬಗ್ಗೆ ತಿಳಿದು ಅದನ್ನೇ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಕೃತ್ಯ ಸಾಧಿಸಲು ಮೊದಲಿಗೆ ವಿದ್ಯಾರ್ಥಿನಿಯರೊಂದಿಗೆ ಪರಿಚಯಸ್ಥರಂತೆ ವರ್ತಿಸುವ ಈ ಪಿಂಪ್ ಗಳು ಅದರಲ್ಲಿ ಯಶಸ್ವಿಯಾದರೆ ಮುಂದುವರಿಯುತ್ತಾರೆ. ಇಲ್ಲವಾದರೆ ಸಮಸ್ಯೆ ಅಥವಾ ಸಹಾಯದ ಬಗ್ಗೆ ಮಾತು ಆರಂಭಿಸುತ್ತಾರೆ.
ಹೆಣ್ಣು ಮಕ್ಕಳಿಗೆ ಹಿತವಾಗುವಂತೆ ಆತ್ಮೀಯವಾಗಿ ಮಾತಿಗಿಳಿದು ಅವರ ಸಂಪರ್ಕ ಸಾಧಿಸುತ್ತಾರೆ. ಮುಂದೆ “ಗೆಳೆತನ’ ಸಾಧಿಸಿ ಕೆಲವೊಂದು ಸಹಾಯವನ್ನೂ ಪಿಂಪ್ ಗಳು ಮಾಡುತ್ತಾರೆ. ಅಗತ್ಯವಿರುವ ಹಣ, ಬಟ್ಟೆ ಇನ್ನಿತರ ಗಿಫ್ಟ್ ಅನ್ನು ಕೊಡುತ್ತಾರೆ. ಮಾಲ್, ಹೊಟೇಲ್‌ಗಳಿಗೆ ಕರೆದೊಯ್ದು ಎಲ್ಲಾ ಬಿಲ್‌ಗಳನ್ನು ಪಾವತಿಸುತ್ತಾರೆ. ಐಷಾರಾಮಿ ಬದುಕಿನ ರುಚಿ ಹಿಡಿಸುತ್ತಾರೆ. ಆ ಬಳಿಕ ಬಳಿಕ ಹೀನ ಕೃತ್ಯ ಆರಂಭಿಸುತ್ತಾರೆ. ಬಲೆಗೆ ಬಿದ್ದ ಬಾಲಕಿಯ ಮೂಲಕ ಸಾಧ್ಯವಾದಷ್ಟು ಇತರ ಬಾಲಕಿಯರನ್ನು ತಮ್ಮ ತೆಕ್ಕೆಗೆ ಸೆಳೆಯಲು ತಂತ್ರ ಹೆಣೆಯುತ್ತಾರೆ ಎಂಬ ಮಾಹಿತಿ ತನಿಖೆಯಿಂದ ಬದಲಾಗಿದೆ.
ಇಷ್ಟುಮಾತ್ರವಲ್ಲದೆ ಆರಂಭದಲ್ಲಿ ಕೇಳಿದ್ದನ್ನೆಲ್ಲಾ ಕೊಡುವ ದಂಧೆಕೋರರು ಅನಂತರ ಬಾಲಕಿಯರ ಫೋಟೋ, ವೀಡಿಯೋವನ್ನು ತೆಗೆದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಆರಂಭಿಸುತ್ತಾರೆ. ಈ ಪರಿಸ್ಥಿತಿ ಯಲ್ಲಿ ಅಸಾಹಯಕ ಬಾಲಕಿಯರು ದಂಧಕೋರರ ಹೇಯ ಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ. ಇನ್ನು ಈ ದಂಧೆಯಲ್ಲಿ ವಿವಿಧ ರಾಜಕೀಯ ಮುಖಂಡರ ಸಹವರ್ತಿಗಳು, ರಾಜಕೀಯ ಪಕ್ಷಗಳಲ್ಲಿ ಸಕ್ರಿಯರಾಗಿರುವವರು ಕೂಡ ಸೇರಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಮಂಗಳೂರು ಡಿಸಿಪಿ ಹರಿರಾಂ ಶಂಕರ್ ಅವರು ಆಮಿಷ ಮತ್ತು ಬ್ಲ್ಯಾಕ್ ಮೇಲ್ ಗೆ ಒಳಗಾಗಿ ಬಾಲಕಿಯರು ಇಂತಹ ಜಾಲಕ್ಕೆ ಸಿಲುಕುತ್ತಿದ್ದಾರೆ. ಸಾಮಾನ್ಯವಾಗಿ ಹೆತ್ತವರು ಮತ್ತು ಮಕ್ಕಳ ನಡುವೆ ಸಂವಹನ ಸರಿಯಾಗಿ ಇಲ್ಲದೆ ಇಂತಹ ತೊಂದರೆಗಳು ಉಂಟಾಗುತ್ತವೆ. ಈ ರೀತಿಯ ಜಾಲಕ್ಕೆ ಬಿದ್ದಿದ್ದರೆ ಮಾನಕ್ಕೆ ಅಂಜಿ ಸುಮ್ಮನಿರದೆ ಹೆತ್ತವರಿಗೆ ಅಥವಾ ಶಿಕ್ಷಕರಿಗೆ ತಿಳಿಸಬೇಕು. ಗೌಪ್ಯವಾಗಿಯೇ ಕಾರ್ಯಾಚರಣೆ ನಡೆಸಲಾಗುತ್ತದೆ. ತೊಂದರೆ ಗೊಳಗಾದವರ ಮಾಹಿತಿಯನ್ನು ಕೂಡ ಯಾವುದೇ ಕಾರಣಕ್ಕೂ ಪೊಲೀಸರು ಬಹಿರಂಗಪಡಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಿ ಇತರರು ಜಾಲಕ್ಕೆ ಬೀಳದಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ್ದಾರೆ. | |