ಅನುಮತಿ ಇಲ್ಲದೇ ಮಸೀದಿ, ಚರ್ಚ್, ಪ್ರಾರ್ಥನಾ ಮಂದರಿಗಳಲ್ಲಿ ಧ್ವನಿವರ್ಧಕಗಳ ಬಳಕೆ ಇಲ್ಲ
ಚಿಕ್ಕಮಗಳೂರು: ಅನುಮತಿ ಇಲ್ಲದೇ ಮಸೀದಿ, ಚರ್ಚ್, ಪ್ರಾರ್ಥನಾ ಮಂದರಿಗಳಲ್ಲಿ ಧ್ವನಿವರ್ಧಕಗಳ ಬಳಕೆ ಮಾಡುವಂತಿಲ್ಲ ಎಂದು ಚಿಕ್ಕಮಗಳೂರು ನಗರಸಭೆ ನೂತನ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೊಸ ವಿವಾದಗಳು ಸೃಷ್ಟಿಯಾಗುತ್ತಿದ್ದು, ಆ ವಿವಾದಗಳು ಧಾರ್ಮಿಕ ಭಾವನೆಗಳು, ಧಾರ್ಮಿಕ ಕೇಂದ್ರಗಳ ಸುತ್ತವೇ ಗಿರಕಿ ಹೊಡೆಯುತ್ತಿರುವುದು ಮತ್ತೊಂದು ವಿಷಯವಾಗಿದೆ. ಈ ಹಿಂದೆ ಇಡೀ ರಾಜ್ಯದಲ್ಲಿ ವ್ಯಾಪಕ ಸುದ್ದಿಯಾಗಿದ್ದ ಹಿಜಾಬ್ ವಿವಾದ ಬೆನ್ನಲ್ಲೇ ಜಾತ್ರಗೆಳಲ್ಲಿ ಮುಸ್ಲಿಂ ವರ್ತಕರ ಮೇಲಿನ ನಿಷೇಧ ಭಾರಿ ಚರ್ಚೆಯಾಗುತ್ತಿರುವ ಹೊತ್ತಲ್ಲೇ ಇದೀಗ ಚಿಕ್ಕಮಗಳೂರು ನಗರಸಭೆ ಕೈಗೊಂಡ ಒಂದು ನಿರ್ಧಾರ ಮತ್ತೊಂದು ಚರ್ಚೆಗೆ ಕಾರಣವಾಗಿದೆ.
ಚಿಕ್ಕಮಗಳೂರು ನಗರಸಭೆಯಲ್ಲಿ 37ನೇ ಬಜೆಟ್ ಮಂಡನೆಯಾಗಿದ್ದು, ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣು ಗೋಪಾಲ್ ಅವರು ಚಿಕ್ಕಮಗಳೂರು ನಗರಸಭೆಯ 37ನೇ ಬಜೆಟ್ ಮಂಡನೆ ಮಾಡಿದರು. ಆದರೆ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಒಂದು ಅಂಶವನ್ನು ಜಾರಿಗೊಳಿಸಿದರೆ ಸಾಕಷ್ಟು ವಿವಾದ ಸೃಷ್ಟಿಯಾಗುವ ಲಕ್ಷಣಗಳು ಕಂಡು ಬಂದಿದೆ. ನಗರದ ಜನರ ಆರೋಗ್ಯ ದೃಷ್ಟಿಯಿಂದ ಧಾರ್ಮಿಕ ಕೇಂದ್ರಗಳಲ್ಲಿ ಬಳಕೆ ಮಾಡುತ್ತಿರುವ ಅನಧಿಕೃತ ಧ್ವನಿವರ್ಧಕಗಳ ವಿರುದ್ಧ ಬಜೆಟ್ ನಲ್ಲಿ ಸಮರ ಸಾರಲಾಗಿದ್ದು, ಕೋರ್ಟ್ ಆದೇಶವನ್ನು ಧಿಕ್ಕರಿಸಿ ಮಸೀದಿ, ಚರ್ಚ್, ದೇವಸ್ಥಾನಗಳಲ್ಲಿ ಬಳಕೆ ಮಾಡುತ್ತಿರುವ ಮೈಕ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಆಶ್ವಾಸನೆಯನ್ನು ಆಯವ್ಯಯದಲ್ಲಿ ನೀಡಲಾಗಿದೆ. ಇನ್ನು ಮುಂದೆ ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ಕಾರ್ಪೋರೇಷನ್ ಅನುಮತಿ ಇಲ್ಲದೇ ಬೇಕಾಬಿಟ್ಟಿ ಧ್ವನಿವರ್ಧಕಗಳನ್ನು ಬಳಕೆ ಮಾಡುವಂತಿಲ್ಲ ಎಂದು ಹೇಳಲಾಗಿದೆ. ಇದು ದೇವಸ್ಥಾನ, ಮಸೀದಿ ಮತ್ತು ಚರ್ಚೇ ಸೇರಿದಂತೆ ಎಲ್ಲ ಧಾರ್ಮಿಕ ಕೇಂದ್ರಗಳಿಗೂ ಅನ್ವಯವಾಗಲಿದೆ ಎಂದು ಹೇಳಲಾಗಿದೆ.
ಅಧ್ಯಕ್ಷರು ಹೇಳಿದ್ದೇನು?: ನಗರದಲ್ಲಿ ಮಸೀದಿ, ಚರ್ಚ್, ದೇವಸ್ಥಾನಗಳಲ್ಲಿ ನಿಯಮಬಾಹಿರವಾಗಿ ಅತೀ ಹೆಚ್ಚಿನ ಧ್ವನವರ್ಧಕಗಳನ್ನು ಬಳಕೆ ಮಾಡುತ್ತಿರುವುದರಿಂದ ಶಬ್ದ ಮಾಲಿನ್ಯ ಉಂಟಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಬಜೆಟ್ ನಲ್ಲಿ ಅಧ್ಯಕ್ಷರು ಪ್ರಸ್ತಾಪಿಸಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು, ಹಿರಿಯರು, ರೋಗಿಗಳಿಗೆ ತೊಂದರೆ ಆಗುತ್ತಿದೆ ಈ ನಿಟ್ಟಿನಲ್ಲಿ ನಗರಸಭೆ ಕೋರ್ಟ್ ಆದೇಶಕ್ಕೆ ವಿರುದ್ದವಾಗಿ ಬಳಸಿರುವ ಧ್ವನನಿರ್ಧಕಗಳನ್ನು ವಶಕ್ಕೆ ಪಡೆಯುವುದಾಗಿ ನಗರಸಭೆ ಅಧ್ಯಕ್ಷ ವರಸಿದ್ದ ವೇಣುಗೋಪಾಲ್ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಆಕ್ಷೇಪ: ಇನ್ನು ಈ ನಗರಸಭೆಯ ಈ ಘೋಷಣೆಗೆ ಈಗಾಗಲೇ ಪ್ರತಿಪಕ್ಷವಾಗಿರುವ ಕಾಂಗ್ರೇಸ್ ಅಪಸ್ವರ ಎತ್ತಿದ್ದು, ಕಾಂಗ್ರೇಸ್ ನ ಕೆಲ ನಗರಸಭಾ ಸದಸ್ಯರು ಆಕ್ಷೇಪ ವ್ಯಪ್ತಪಡಿಸಿ ನೋಟಿಸ್ ನೀಡಿ ತದನಂತರ ಕ್ರಮ ತೆಗೆದು ಕೊಳ್ಳುವ ನಿರ್ಧಾರಕ್ಕೆ ಬನ್ನಿ ಎಂದು ಒತ್ತಾಯಿಸಿದ್ದಾರೆ. ನಗರಸಭಾ ಅಧ್ಯಕ್ಷರು ಮೈಕ್ ಗಳು ವಿರುದ್ದ ಕ್ರಮದ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಂತೆ ಕೆಲ ಸದಸ್ಯರು ಆಕ್ಷೇಪಿಸಿದ್ದು, ಸಾರ್ವಜನಿಕರು, ಹಿರಿಯರು ಈವರೆಗೂ ಕೂಡ ನಗರಸಭೆಗೆ ಯಾರು ಕೂಡ ಮನವಿ ಸಲ್ಲಿಸಿಲ್ಲ, ಆದರೂ ಕೂಡ ಬಜೆಟ್ ನಲ್ಲಿ ಮಂಡಿಸುವ ಅವಶ್ಯಕತೆ ಏನಿತ್ತು?.. ಕ್ರಮದ ನಿರ್ಧಾರಕ್ಕೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಒಟ್ಟಾರೆ ಚಿಕ್ಕ ಮಂಗಳೂರು ನಗರದಲ್ಲಿ ಅನಧಿಕೃತವಾಗಿ ಇರುವ ಧ್ವನಿವರ್ಧಕಗಳ ವಿರುದ್ದ ಕ್ರಮದ ಅಸ್ತ್ರ ಬಳಸಿದರೆ ವಿವಾದ ಸೃಷ್ಠಿಯಾಗುವ ಲಕ್ಷಣಗಳು ಹೆಚ್ಚಾಗಿದೆ.