| ಉಡುಪಿ ಮಾ.26: ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವುದಾದರೆ ತಾರತಮ್ಯ ಇಲ್ಲದೆ ಎಲ್ಲಾ ಅನಧಿಕೃತ ಕಟ್ಟಡ ತೆರವುಗೊಳಿಸಿ ಎಂದು ಉಡುಪಿ ಜಿಲ್ಲಾ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಅಝೀಝ್ ಉದ್ಯಾವರ ಅವರು ಆಗ್ರಹಿಸಿದ್ದಾರೆ.
ಇಂದು ಬೆಳ್ಳಂಬೆಳಿಗ್ಗೆ ಉಡುಪಿಯ ಮಸೀದಿ ರಸ್ತೆಯಲ್ಲಿರುವ ಝರಾ ಮತ್ತು ಝೈತೂನ್ ಹೊಟೇಲ್ ಕಟ್ಟಡವನ್ನು ಅನಧಿಕೃತವೆಂದು ಹೇಳಿ ನಗರ ಸಭೆ ತೆರವು ಕಾರ್ಯಕೈಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಬಹಳಷ್ಟು ಕಟ್ಟಡಗಳು ಅನಧಿಕೃತವಾಗಿ ಕಾರ್ಯಚರಿಸುತ್ತಿದೆ. ಇಂತಹ ಸಂದರ್ಭದಲ್ಲಿ ತೆರವುಗೊಳಿಸುವುದಾದರೆ ಒಂದು ಕಟ್ಟಡವನ್ನು ತೆರವುಗೊಳಿಸಿ ಉಳಿದ ಅನಧಿಕೃತ ಕಟ್ಟಡವನ್ನು ಹಾಗೆ ಬಿಡುವುದು ತಾರತಮ್ಯದ ಭಾಗ, ಇದು ಒಪ್ಪುವಂತದಲ್ಲ.
ಉಡುಪಿ ಜಿಲ್ಲೆಯಲ್ಲಿ ಹಲವು ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್ ಜಾಗವನ್ನು ಅತಿಕ್ರಮಿಸಿ ಬಾಡಿಗೆ ಕೋಣೆ ಮಾಡಿ ಕೊಡಲಾಗಿದೆ. ಇನ್ನು ಪ್ರತಿಷ್ಠಿತ ಮಳಿಗೆಗಳು ಕೂಡ ನಿಯಮ ಬಾಹಿರವಾಗಿ ಕಾರ್ಯಚರಿಸುತ್ತಿದೆ ಇಂತಹ ಸಂದರ್ಭದಲ್ಲಿ ಝರಾ ಮತ್ತು ಝೈತೂನ್ ಹೊಟೇಲನ್ನು ಮಾತ್ರ ಗುರಿಯಾಗಿಸಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಇದೇ ವೇಳೆ ಅವರು, ಯಾವುದೇ ಕಟ್ಟಡ ಅನಧಿಕೃತವಾಗಿ ನಿರ್ಮಾಣವಾಗುವಾಗಲೇ ತಡೆಯುವುದು ನಗರಸಭೆಯ ಕರ್ತವ್ಯ. ನಿರ್ಮಾಣವಾಗಿ ಹಲವು ಸಮಯದಿಂದ ಕಾರ್ಯಚರಿಸುತ್ತ, ತೆರಿಗೆ ಹಣವನ್ನೂ ಸರಕಾರ ಪಡೆಯುತ್ತ ನಂತರ ಏಕಾಏಕಿ ಅನಧಿಕೃತವೆಂದು ತೆರವುಗೊಳಿಸಲು ಬಂದರೆ ಅದರಿಂದ ಮಾಲಕರಿಗೆ, ಅಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ನಷ್ಟವಾಗುತ್ತದೆ. ಇಂತಹ ಕ್ರಮ ಸರಿಯಲ್ಲ ಎಂದು ಹೇಳಿದರು. | |