ಸ್ವಾಮೀಜಿಗಳಿಗೆ ಅಗೌರವ ತೋರಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ- ಸಿದ್ದರಾಮಯ್ಯ
ಬೆಂಗಳೂರು: ಹಿಜಾಬ್’ನ್ನು ಸಮರ್ಥಿಸಿಕೊಳ್ಳುವ ಬರದಲ್ಲಿ ಪ್ರತಿಪಕ್ಶ ನಾಯಕ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಯೊಂದು ಇದೀಗ ವಿವಾದ ಸ್ವರೂಪ ಪಡೆದುಕೊಂಡಿದೆ.
ಹಿಜಾಬ್ ವಿವಾಚರವಾಗಿ ಶುಕ್ರವಾರ ತಮ್ಮ ಸ್ವಗ್ರಾಮ ಸಿದ್ದರಾಮಯ್ಯನ ಹುಂಡಿಯಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕೋದಿಲ್ವಾ, ಮುಸ್ಲಿಂ ಹುಡುಗಿಯರು ಹಿಜಾಬ್ ಹಾಕಿದ್ರೆ ತಪ್ಪೇನು? ಹಿಂದೂ, ಜೈನ ಹೆಣ್ಣುಮಕ್ಕಳು ತಲೆ ಮೇಲೆ ಬಟ್ಟೆ ಹಾಕಲ್ವಾ, ರಾಜ್ಯದಲ್ಲಿ ಹಿಜಾಬ್ ವಿವಾದ ಸೃಷ್ಟಿಸಿದ್ದೇ ಬಿಜೆಪಿಯವರು. ಮುಸ್ಲಿಂ ಹೆಣ್ಣುಮಕ್ಕಳು ತಲೆ ಮೇಲೆ ಹಿಜಾಬ್ ಹಾಕೊಂಡ್ರೆ ತಪ್ಪೇನು, ಹಿಂದೂ ಹೆಣ್ಣು ಮಕ್ಕಳು ತಲೆ ಮೇಲೆ ಸೆರಗು ಹಾಕಿಕೊಳ್ಳಲ್ವಾ, ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕ್ತಾರೆ ಅದನ್ನು ಪ್ರಶ್ನಿಸ್ತಾರಾ? ಎಂದು ಕೇಳಿದ್ದರು.
ಹಿಜಾಬ್ ವಿಚಾರದಲ್ಲಿ ಬಿಜೆಪಿ ವಿವಾದವನ್ನು ಹುಟ್ಟುಹಾಕಲು ಪ್ರಯತ್ನಿಸಿದೆ, ಆದರೆ ಜನರು ಬುದ್ಧಿವಂತರಾಗಿದ್ದಾರೆ ಮತ್ತು ಅದರ ಗುಪ್ತ ಕಾರ್ಯಸೂಚಿಯನ್ನು ಅರ್ಥಮಾಡಿಕೊಂಡಿದ್ದಾರೆ. ಮುಸ್ಲಿಂ ಸಂತ್ರಸ್ತರಿಗೆ ಹೋಲಿಸಿದರೆ ಮೃತ ಹಿಂದೂ ಕಾರ್ಯಕರ್ತರ ಕುಟುಂಬಗಳಿಗೆ ನೀಡುವ ಪರಿಹಾರ ಹೆಚ್ಚು. ಬಿಜೆಪಿಗೆ ತಾರತಮ್ಯ ಮತ್ತು ಅಸಮಾನತೆಯು ಅವರ ಹಿಂದೂ ಮತ ಬ್ಯಾಂಕ್ ಅನ್ನು ನಿರ್ಮಿಸುತ್ತಿದೆ. ಮತಗಳ ಧ್ರುವೀಕರಣಕ್ಕಾಗಿ ಪಕ್ಷವು ವಿವಾದಾತ್ಮಕ ವಿಷಯಗಳನ್ನು ಸೃಷ್ಟಿಸುತ್ತಿದೆ. ಆದರೆ, ಜನರು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಿದ್ದು, ಅವರ ಲೆಕ್ಕಾಚಾರಗಳು ವಿಫಲಗೊಳ್ಳುವಂತೆ ಮಾಡಲಿದ್ದಾರೆಂದು ಹೇಳಿದರು.
ಇದೇ ವೇಳೆ ಹಿಂದೂಗಳಲ್ಲಿಯೂ ತಾರತಮ್ಯವಿದೆ ಎಂದು ಟೀಕಿಸಿದ ಅವರು, ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹರ್ಷನ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂಪಾಯಿ ನೀಡಿದರೆ, ಕರಾವಳಿ ಭಾಗದಲ್ಲಿ ಹತ್ಯೆಗೀಡಾದ ದಿನೇಶ್ ಕುಟುಂಬಕ್ಕೆ ಅದೇ ಉದಾತ್ತತೆಯನ್ನು ತೋರಿಸಿಲ್ಲ ಎಂದು ಹೇಳಿದರು. ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್ ಮಾರಾಟಗಾರರು ಸ್ಟಾಲ್ ಹಾಕುವುದನ್ನು ನಿಷೇಧಿಸಿರುವ ಕುರಿತು ಮಾತನಾಡಿ, ಬಿಜೆಪಿಯ ಹಿಡನ್ ಅಜೆಂಡಾವನ್ನು ಬಹಿರಂಗಗೊಂಡಿದೆ ಎಂದರು.
ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಮ್ಮ ಆರ್‌ಎಸ್‌ಎಸ್ ಹೇಳಿಕೆಯನ್ನು ಟೀಕಿಸಿ ಮಾತನಾಡಿ, ಸಭಾಧ್ಯಕ್ಷರ ಕುರ್ಚಿಯಲ್ಲಿದ್ದಾಗ ರಾಜಕೀಯ ಪಕ್ಷಪಾತ ಮಾಡಬಾರದು ಎಂದು ತಿಳಿಸಿದರು. ನಂತರ ರೇಣುಕಾಚಾರ್ಯ ಅವರ ಪುತ್ರಿ ಎಸ್‌ಸಿ ಪ್ರಮಾಣಪತ್ರ ಪಡೆದಿದ್ದಕ್ಕಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದರು.
ಸ್ವಾಮೀಜಿಗಳಿಗೆ ಅಗೌರವ ತೋರಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ’…
ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ ಅವರು, ಸ್ವಾಮೀಜಿಗಳಿಗೆ ಅಗೌರವ ತೋರಿಲ್ಲ; ನನ್ನ ಹೇಳಿಕೆ ತಿರುಚಲಾಗಿದೆ ಎಂದು ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ನಮ್ಮ ತಾಯಂದಿರು ಸೇರಿದಂತೆ ಸಾಮಾನ್ಯವಾಗಿ ಎಲ್ಲರೂ ತಲೆಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ ಎಂದು ಹೇಳಿದ್ದೆನೆಯೇ ಹೊರತು ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ, ಅಗೌರವ ತೋರಿಲ್ಲ. ಅನಗತ್ಯವಾಗಿ ನನ್ನ ಹೇಳಿಕೆಯನ್ನು ತಿರುಚಲಾಗಿದೆ.
ಸರ್ವ ಜಾತಿಗಳ ಸ್ವಾಮೀಜಿಗಳ ಬಗ್ಗೆ ನನಗೆ ಗೌರವವಿದೆ, ದೀರ್ಘಕಾಲದಿಂದ ನನಗೆ ಅವರ ಜೊತೆ ಸಂಬಂಧ ಇದೆ. ಯಾವ ಸ್ವಾಮೀಜಿಗಳ ಬಗ್ಗೆಯೂ, ಯಾವಾಗಲೂ ನಾನು ಅಗೌರವದಿಂದ ನಡೆದುಕೊಂಡಿಲ್ಲ ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ರಾಜಕೀಯ ವಿರೋಧಿಗಳು ದುರುದ್ದೇಶದಿಂದ ನನ್ನ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕೆಲವು ಮಾಧ್ಯಮಗಳು ಕೂಡಾ ಸಾಥ್ ನೀಡಿರುವುದು ವಿಷಾದನೀಯ ಬೆಳವಣಿಗೆ.
ನನ್ನ ಹೇಳಿಕೆಯನ್ನು ತಿರುಚಿರುವುದು ರಾಜ್ಯದ ಪ್ರಮುಖ ಮಠಗಳ ಹಿರಿಯ ಸ್ವಾಮೀಜಿಗಳಿಗೆ ಅರ್ಥವಾಗಿರುವ ಕಾರಣಕ್ಕಾಗಿಯೇ ಅವರು ಮೌನವಾಗಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತಾಪೂರ್ವಕ ನಮನಗಳು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.