| ಉಡುಪಿ ಮಾ.26(ಉಡುಪಿ ಟೈಮ್ಸ್ ವರದಿ): ನಗರದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಅಕ್ರಮ ಕಟ್ಟಗಳ ತೆರವಿಗೆ ನಗರಸಭೆ ಮುಂದಾಗಿದೆ.
ಉಡುಪಿ ನಗರದ ಮಸೀದಿ ಬಳಿ ಇರುವ ಎಸ್ ಡಿಪಿಐ ಜಿಲ್ಲಾಧ್ಯಕ್ಷರ ಝರ ಹೋಟೆಲ್ ಮತ್ತು ಮತ್ತೊಬ್ಬರಿಗೆ ಸೇರಿದ ಝೈತೋನ್ ಹೋಟೆಲ್ ತೆರವಿಗೆ ಇಂದು ನಗರ ಸಭೆ ಕಾರ್ಯಾಚರಣೆ ನಡೆಸಿದೆ. ಅಕ್ರಮ ಕಟ್ಟಡಗಳ ತೆರವಿನ ಕುರಿತಂತೆ ಈ ಹಿಂದಿನ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಗಳು ನಡೆದಿತ್ತು. ಆ ಬಳಿಕ ನಗರ ಸಭೆ ತಾತ್ಕಾಲಿಕವಾಗಿ ಸೀಮಿತ ಅವಧಿಗೆ ನಿರ್ಮಾಣಗೊಂಡಿದ್ದ ಕಟ್ಟಗಳ ತೆರವಿಗೆ ನಗರ ಸಭೆ ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ ನೋಟೀಸ್ ನೀಡಿದ್ದರು.
ಅದರಂತೆ ಈ ಹಿಂದೆಯೇ ನಗರ ಸಭೆ ಈ ಎರಡು ಹೋಟೆಲ್ ತೆರವಿಗೂ ನೋಟೀಸ್ ನೀಡಲಾಗಿತ್ತು. ಆದರೆ ಅನಧಿಕೃತ ವಾಗಿ ಕಾರ್ಯಚರಿಸುತ್ತಿದ್ದ ಹೋಟೆಲ್ ನ್ನು ತೆರವುಗೊಳಿಸದ ಕಾರಣ ಇಂದು ಬೆಳಂಬೆಳಿಗ್ಗೆ ನಗರ ಸಭೆ ಪೌರಾಯುಕ್ತ, ಉಡುಪಿ ತಹಶೀಲ್ದಾರ ಹಾಗೂ ಪೊಲೀಸ್ ಅಧಿಕಾರಿಗಳ ಬಂದೋಬಸ್ತ್ ನಲ್ಲಿ ಹೋಟೆಲ್ ಗೆ ತೆರಳಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಇನ್ನು ಈ ಹೋಟೆಲ್ ಗಳು ತಾತ್ಕಾಲಿಕವಾಗಿ ಕಾರ್ಯಚರಿಸುತ್ತಿದ್ದ ಕಾರಣ ಹೋಟೆಲ್ ತೆರವಿನ ಬಗ್ಗೆ ಮಾಹಿತಿ ತಿಳಿದ ಮಾಲಿಕರೇ ನಿನ್ನೆ ರಾತ್ರಿಯಿಂದಲೇ ಹೋಟೆಲ್ ನ ಪೀಟೋಪಕರಣಗಳನ್ನು ಬೇರೆ ಸ್ಥಳಕ್ಕೆ ವರ್ಗಾಯಿಸಿದ್ದು ತೆರವು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗದಂತೆ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ತಹಶಿಲ್ದಾರ್, ಪೌರಾಯುಕ್ತ, ನಗರಸಭೆಯ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೋಡಿದ್ದು, ಬಿಗಿ ಪೋಲಿಸ್ ಬಂದೋಬಸ್ತ್ ನೀಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ವಾಹನ ಸಂಚಾರ ತಡೆಹಿಡಿಯಲಾಗಿದೆ.
ಹಿಜಾಬ್ ಪರವಾಗಿ ಹೇಳಿಕೆ ನೀಡಿದ್ದೆ ಕಾರಣ: ಹಿಜಾಬ್ ಪರವಾಗಿ ಹೇಳಿಕೆ ನೀಡಿದ ಕಾರಣಕ್ಕೆ ಟಾರ್ಗೆಟ್ ಮಾಡಿ ನನ್ನ ಕಟ್ಟಡ ತೆರವು ಕಾರ್ಯಾಚರಣೆ ಮಾಡಲಾಗಿದೆ ಎಂದು ಝರ ಹೋಟೆಲ್ ಮಾಲಕ, ಎಸ್.ಡಿಪಿಐ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್ ಅವರು ಆರೋಪಿಸಿದ್ದಾರೆ. ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಸಲುವಾಗಿ ಇಂದು ಉಡುಪಿ ನಗರ ಸಭೆಯವರು ಎಸ್ ಡಿಪಿಐ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್ ಅವರ ಹೋಟೆಲ್ ಸೇರಿ ಎರಡು ಹೋಟೆಲ್ ಗಳ ತೆರವು ಕಾರ್ಯಾಚರಣೆ ಕೈಗೊಂಡ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದ್ದೆ ಎಂದು ಆರೋಪಿಸಿದರು.
ನಾನು ಮುಸ್ಲಿಂ ಹಾಗೂ ಎಸ್ ಡಿ.ಪಿ.ಐ ಜಿಲ್ಲಾಧ್ಯಕ್ಷ ಎಂಬ ಕಾರಣಕ್ಕೆ ಹಾಗೂ ಇತ್ತೀಚೆಗೆ ಹಿಜಾಬ್ ಪರವಾಗಿ ಹೇಳಿಕೆ ನೀಡಿದ್ದ ಕಾರಣಕ್ಕೆ ಅಕ್ರಮ ಕಟ್ಟಡ ಎಂದು ಹೇಳಿ ಬಿಜೆಪಿ, ನಗರ ಸಭೆಯ ಮೇಲೆ ಒತ್ತಡ ಹಾಕಿ ನನ್ನ ಕಟ್ಟಡ ತೆರವುಗೊಳಿಸುವಂತೆ ಮಾಡಿದೆ.
ಮಸೀದಿಯ ಈ ಜಾಗ ಪಡೆದು ಇದಕ್ಕಾಗಿ ನಗರಸಭೆಯ ಅನುಮತಿ ಕೇಳಿದ್ದೆವು ಆದರೆ ಅನುಮತಿ ಸಿಗದಾಗ ಈ ವರೆಗೂ ಅನುಮತಿಗಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಬಿಜೆಪಿಯವರು ಬೇಕಂತಲೇ ಹಠ ರಾಜಕೀಯ ಮಾಡಿ ಇಂತಹ ಹಲವಾರು ಕಟ್ಟಡಗಳಿದ್ದರೂ ಈ ಒಂದು ಕಟ್ಟಡ ವನ್ನು ಟಾರ್ಗೆಟ್ ಮಾಡಿ ತೆರವು ಕಾರ್ಯಾಚರಣೆ ಮಾಡಿದ್ದಾರೆ. ಈ ಕಟ್ಟಡದಲ್ಲಿ ಒಂದು ಡೋರ್ ನಂಬರ್ ಇರುವ ಅಂಗಡಿ ಇದೆ. ಈ ಹಿಂದೆ ಇದ್ದ ಅಂಗಡಿಯನ್ನೇ ನಾವು ಅಭಿವೃದ್ಧಿಪಡಿಸಿ ಹೊಸ ಕಟ್ಟಡ ಕಟ್ಟಿದ್ದೇವೆ. ನಮ್ಮ ಜಾಗದ ಒಳಗೆ ಕಟ್ಟಡ ಕಟ್ಟಿದ್ದು, ಈ ಕಟ್ಟಡದಿಂದ ಸರಕಾರದ ಬೊಕ್ಕಸಕ್ಕೆ ತಿಂಗಳಿಗೆ 37,180 ಜಿಎಸ್ ಟಿ ನೀಡುತ್ತಿದ್ದೇವೆ ಎಂದು ತಿಳಿಸಿದರು.
| |