3 ಡೆತ್ ನೋಟ್ ಬರೆದಿಟ್ಟು ಪತ್ರಕರ್ತೆ ಆತ್ಮಹತ್ಯೆ!-ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಹೋದರ
ಬೆಂಗಳೂರು: ರಾಯಿಟರ್ಸ್ ಸುದ್ದಿ ಸಂಸ್ಥೆಯ ಪತ್ರಕರ್ತೆ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಬೆಂಗಳೂರಿನಲ್ಲಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ರಾಯಿಟರ್ಸ್ ಸುದ್ದಿ ಸಂಸ್ಥೆಯ ಶೃತಿ (37) ಸಾವನ್ನಪ್ಪಿದ್ದರು. ಶೃತಿ ಪತಿ ಅನೀಶ್ ಕೊಯಾಡನ್ ಕೊಲೆ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿ ಶೃತಿ ಸಹೋದರ ನಿಶಾಂತ್ ನಾರಾಯಣನ್ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಂಬಳದ ಹಣವನ್ನು ತವರು ಮನೆಗೆ ನೀಡುತ್ತೀಯ ಎಂದು ನಿಂದನೆ ಮಾಡಿ ಶೃತಿ ಮೇಲೆ ಹಲ್ಲೆ ನಡೆಸಿ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದ ಎಂದು ಮೃತ ಶೃತಿ ಸಹೋದರ ನಿಶಾಂತ್ ನಾರಾಯಣನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತನ್ನ ಸಹೋದರಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಮನೆಯಲ್ಲಿ ಹಿಡನ್ ಕ್ಯಾಮರಾ ಇಟ್ಟು ಆಕೆಯ ಚಲನ ವಲನ ಬಗ್ಗೆ ನಿಗಾ ಇಡುತ್ತಿದ್ದ. ಆಕೆ ಮಾತನಾಡುತ್ತಿದ್ದನ್ನು ರೆಕಾರ್ಡ್ ಮಾಡುತ್ತಿದ್ದ. ವಾರಂತ್ಯದಲ್ಲಿ ಪ್ರವಾಸದ ಹೆಸರಿನಲ್ಲಿ ಕರೆದುಕೊಂಡು ಹೋಗಿ ಚಿತ್ರ ಹಿಂಸೆ ಕೊಡುತ್ತಿದ್ದ ಅನೀಶ್ ಈ ವರ್ಷ ಜನವರಿಯಲ್ಲಿ ಒಮ್ಮೆ ನನ್ನ ಸಹೋದರಿಯ ಹತ್ಯೆಗೆ ಯತ್ನಿಸಿದ್ದ. ಆಕೆಯ ಚೀರಾಟ ಕೇಳಿ ಭದ್ರತಾ ಸಿಬ್ಬಂದಿ ನನ್ನ ಸಹೋದರಿಯ ಜೀವ ಕಾಪಾಡಿದ್ದರು ಎಂದು ಹಿಂದಿನ ಘಟನೆಯನ್ನು ಉಲ್ಲೇಖಿಸಿದ್ದಾರೆ.
ನನ್ನ ಪತ್ನಿ ಇದೇ ಮಾ. 20 ರಂದು ನನ್ನ ಸಹೋದರಿ ಶೃತಿಗೆ ಕರೆ ಮಾಡಿದಾಗ ಆಕೆ ಕರೆ ಸ್ವೀಕರಿಸಿರಲಿಲ್ಲ. ಮರು ದಿನ ಕರೆ ಮಾಡಿದರೂ ಪೋನ್ ಸ್ವೀಕರಿಸಿರಲಿಲ್ಲ. ಹೀಗಾಗಿ ಮಾ. 22 ರಂದು ಬೆಳಿಗ್ಗೆ ಬೆಂಗಳೂರಿಗೆ ಬಂದು ನೋಡಿದಾಗ ಅಪಾರ್ಟ್ ಮೆಂಟ್ ನ ಮನೆಯೊಳಗೆ ಯಾರೂ ಕಾಣಲಿಲ್ಲ.
ಭದ್ರತಾ ಸಿಬ್ಬಂದಿಯ ನೆರವಿನಿಂದ ಬಾಲ್ಕನಿ ಬಾಗಿಲು ಮುರಿದು ಒಳಗೆ ನೋಡಿದಾಗ ಶೃತಿ ನೇಣು ಬಿಗಿದ ಸ್ಥಿತಿಯಲ್ಲಿ ಬಿದ್ದಿದ್ದಳು. ಆಕೆಯ ಗಂಡನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತಳ ಸಹೋದರ ನಿಶಾಂತ್ ದೂರಿನಲ್ಲಿ ವಿವರಿಸಿದ್ದಾರೆ.ಸಾವಿಗೂ ಮುನ್ನ ಶೃತಿ ಮೂರು ಡೆತ್ ನೋಟ್ ಬರೆದಿಟ್ಟಿದ್ದಾರೆ, ಒಂದು ತನ್ನ ಪತಿ ಅನೀಶ್ ಗೆ, ಮತ್ತೊಂದು ತನ್ನ ವಯಸ್ಸಾದ ತಂದೆ ತಾಯಿ ಇನ್ನೊಂದು ಪೊಲೀಸರಿಗೆ ಬರೆದಿಟ್ಟಿದ್ದಾರೆ,
ಅನೀಶ್ ಗೆ ಬರೆದಿರುವ ಪತ್ರದಲ್ಲಿ ನಾನು ನನ್ನ ಜೀವನವನ್ನು ಕೊನೆಗೊಳಿಸಲಿದ್ದೇನೆ, ಇದರಿಂದ ಇಬ್ಬರು ವ್ಯಕ್ತಿಗಳು ಸಂತೋಷವಾಗಿರುತ್ತಾರೆ ಅದು ನೀವು ಮತ್ತು ನಾನು.’ “ನಾನು ಬದುಕಿದರೆ, ಅದು ನಿಮಗೆ ಪ್ರತಿದಿನ ದುಃಖಕ್ಕೆ ಕಾರಣವಾಗಿದೆ. ಆದರೆ ನಾನು ಸತ್ತರೆ ನಿನ್ನ ದುಃಖವು ಕೆಲವು ದಿನಗಳು ಮಾತ್ರ ಉಳಿಯುತ್ತದೆ ಎಂದು ಪೋಷಕರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಶೃತಿ ವಿದ್ಯಾನಗರ ಚಾಲಾ ರಸ್ತೆಯಲ್ಲಿ ವಾಸಿಸುವ ಮಾಜಿ ಶಿಕ್ಷಕ ಮತ್ತು ಪರಿಸರ ಹೋರಾಟಗಾರ ನಾರಾಯಣನ್ ಪೆರಿಯ ಮತ್ತು ಮಾಜಿ ಶಿಕ್ಷಕಿ ಸತ್ಯಭಾಮಾ ಅವರ ಪುತ್ರಿ.
ಈ ಹಿಂದೆ ಎರಡು ಕುಟುಂಬದವರು ಸೇರಿ ಇಬ್ಬರನ್ನು ದಂಪತಿ ಬೇರ್ಪಡಲು ತಿಳಿಸಿದ್ದರು, ಆದರೆ ಕ್ಷಮೆ ಕೋರಿದ್ದ ಅನೀಶ್ ಜೊತೆಯಲ್ಲಿರುವುದಾಗಿ ತಿಳಿಸಿದ್ದ, ಈ ಹಿಂದೆ ಆಕೆಯನ್ನು ಕೊಲ್ಲಲು ಯತ್ನಿಸಿದ್ದ ಎಂದು ಶೃತಿ ಸಹೋದರ ನಿಶಾಂತ್ ಆರೋಪಿಸಿದ್ದಾರೆ.