ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನ: ಎ.1-15 ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ

ಉಡುಪಿ ಮಾ.24(ಉಡುಪಿ ಟೈಮ್ಸ್ ವರದಿ): ದ.ಕ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಕಾರ್ಯಗಳು ಸಂಪನ್ನಗೊಂಡಿದ್ದು ಎ.1 ರಿಂದ ಎ.15 ರವರೆಗೆ ಬ್ರಹ್ಮಕಲಶೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿರುವ ನಾಡೋಜ ಡಾ.ಜಿ.ಶಂಕರ್ ಅವರು ತಿಳಿಸಿದ್ದಾರೆ. 

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಅವರು, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಕಾರ್ಯಗಳು ಸಂಪನ್ನಗೊಂಡಿದ್ದು, ಎ.1 ರಿಂದ ಎ 15 ರವರೆಗೆ ಬ್ರಹ್ಮಕಲಶೋತ್ಸವ ಹಾಗೂ ಶಿಲೆದಾರು ಶಿಲ್ಪಗಳಿಂದ ಕೂಡಿದ ದೇವಾಲಯದಲ್ಲಿ ಶ್ರೀ ಪ್ರಸನ್ನ ಗಣಪತಿ, ಶ್ರೀ ಭದ್ರಕಾಳಿ, ಶ್ರೀ ನಾಗದೇವರ ಸಹಿತ ಶ್ರೀ ಮಹಾಲಕ್ಷ್ಮೀ ದೇವಿಯ ಬಿಂಬ ಪುನರ್ ಪ್ರತಿಷ್ಠಾಪನೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ರಥೋತ್ಸವ, ಚತುಃಪವಿತ್ರ ನಾಗಮಂಡಲೋತ್ಸವಗಳನ್ನೊಳಗೊಂಡ ದಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮಗಳು ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ ಹಾಗೂ ಹಿರಿಯ ಅರ್ಚಕರಾದ ವೆಂಕಟನರಸಿಂಹ ಉಪಾಧ್ಯಾಯ  ಹಾಗೂ ರಾಘವೇಂದ್ರ ಉಪಾಧ್ಯಾಯರ ಉಪಸ್ಥಿತಿಯಲ್ಲಿ  ನಡೆಯಲಿದೆ ಎಂದು ತಿಳಿಸಿದರು.

ಎ.1ರ ಸಂಜೆ 5 ಗಂಟೆಗೆ ನೂತನವಾಗಿ ನಿರ್ಮಾಣಗೊಂಡ ಭವ್ಯ ರಾಜಗೋಪುರ ಹಾಗೂ ಸರಕಾರದ ಅನುಧಾನದೊಂದಿಗೆ ನಿರ್ಮಾಣಗೊಂಡ ಲಕ್ಷ್ಮೀತೀರ್ಥ ಕೆರೆಯು ಉದ್ಘಾಟನೆಗೊಳ್ಳಲಿದೆ. ಎ.2ರಿಂದ ಎ.15 ರತನಕ ಪ್ರತೀದಿನ ಸಂಜೆ ಗಂಟೆ 4 ರಿಂದ 5ರವರೆಗೆ ಸಾವಿರ ಸುಮಂಗಲೆಯರಿಂದ ಕುಂಕುಮಾರ್ಚನೆ ಯೊಂದಿಗೆ ಮಹಾಮಂಗಳಾರತಿ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲಾಗಿದೆ. ಹಾಗೂ ಎ.6 ರಂದು ಮಹಾಲಕ್ಷ್ಮೀ ದೇವಿಯ ಬಿಂಬ ಪ್ರತಿಷ್ಠೆ, ಸ್ವರ್ಣಕಲಶ ಪ್ರತಿಷ್ಠೆ ಹಾಗೂ ಮಹಾಅನ್ನಸಂತರ್ಪಣೆ ನಡೆಯಲಿದೆ.

ಎ. 13ರಂದು ವರ್ಷಂಪ್ರತಿ ನಡೆಯುವ ಶ್ರೀಮಹಾಲಕ್ಷ್ಮೀ ರಥೋತ್ಸವ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಎ. 15ರ ರಾತ್ರಿ 8 ಗಂಟೆಗೆ ಹಾಲಿಟ್ಟು ಸೇವೆ ರಾತ್ರಿ 9 ರಿಂದ ಚತುಃಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ಎಪ್ರಿಲ್ 16ರ ಬೆಳಗ್ಗೆ ಸಂಪ್ರೋಕ್ಷಣೆ, ಮಂತ್ರಾಕ್ಷತೆಯೊಂದಿಗೆ ಪುನಃ ಪ್ರತಿಷ್ಠೆ  ಮೂಲಕ ಬ್ರಹ್ಮಕಲಶೋತ್ಸವ ಧಾರ್ಮಿದ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ. ನಿರಂತರ 15ದಿನಗಳ ಕಾಲ ನಡೆಯುವ ಧಾರ್ಮಿಕ ಸಭಾಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,  ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಿದ್ಧರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ, ಸಂಸದರುಗಳಾದ ನಳಿನ್ ಕುಮಾರ್ ಕಟೀಲ್, ಶೋಭಾಕರಂದ್ಲಾಜೆ, ರಾಜ್ಯದ ಹಾಲಿ ಹಾಗೂ ಮಾಜಿ ಸಚಿವರು, ಹಾಲಿ ಹಾಗೂ ಮಾಜಿ ಶಾಸಕರು, ರಾಜಕೀಯ ಮುಖಂಡರುಗಳು ಭಾಗವಹಿಸಲಿದ್ದಾರೆ. 

ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರುಗಳು ಮತ್ತು ಧಾರ್ಮಿಕ ಮುಖಂಡರುಗಳು ಆಶೀರ್ವಚನ ನೀಡಲಿದ್ದಾರೆ. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಭಾರತ ಸರಕಾರ ಪ್ರಸ್ತುತ ಪಡಿಸುವ ದಕ್ಷಿಣ ವಲಯ ಸಾಂಸ್ಕ್ರತಿಕ ಕೇಂದ್ರ ತಾಂಜವೂರು ಇವರು ಸಾದರ ಪಡಿಸುವ 20 ರಾಜ್ಯಗಳ ಕಲಾವಿದರುಗಳ ಸಾಂಸ್ಕ್ರತಿಕ ಉತ್ಸವ ಏರ್ಪಡಿಸಲಾಗಿದೆ. ರಾಜ್ಯದ ಹಾಗೂ ಸ್ಥಳೀಯ ಕಲಾವಿದರುಗಳಿಂದ ಪ್ರತೀ ದಿನ ಸಂಜೆ ನೃತ್ಯ ವೈವಿಧ್ಯ, ಯಕ್ಷಗಾನ , ನಾಟಕ ಮುಂತಾದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ ಮತ್ತು ಖ್ಯಾತ ಗಾಯಕ, ಸಂಗೀತ ನಿರ್ದೇಶಕ ವಿಜಯ ಪ್ರಕಾಶರವರಿಂದ ಸಾಂಸ್ಕ್ರತಿಕ ಸಂಗೀತ ಕಾರ್ಯಕ್ರಮ ಜರುಗಲಿದೆ. ಪ್ರತೀದಿನ ಪೂರ್ವಾಹ್ನ  ಗಂಟೆ 11.30 ರಿಂದ ರಾಜ್ಯದ ಖ್ಯಾತ ಕಲಾವಿದರುಗಳಿಂದ ಭಕ್ತಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಇನ್ನು ಈ ಧಾರ್ಮಿಕ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ 2 ರಿಂದ 3 ಲಕ್ಷದಷ್ಟು  ಭಕ್ತಾಧಿಗಳು ಆಗಮಿಸುವ ನಿರೀಕ್ಷೆಯಿದ್ದು ಆಗಮಿಸುವ ಎಲ್ಲಾ ಭಕ್ತಾಧಿಗಳಿಗೂ ದಿನಂಪ್ರತಿ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಪ್ರಯುಕ್ತ ಮಾರ್ಚ್ 27 ಕ್ಕೆ ಅವಿಭಜಿತ ದ. ಕ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಿಂದ ಪ್ರಸಾದದ ರೂಪದಲ್ಲಿ ಹೊರೆಕಾಣಿಕೆಯು ಕ್ಷೇತ್ರವನ್ನು ತಲುಪಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹೈದ್ರಾಬಾದ್ ಕರ್ನಾಟಕ ಸೇರಿದಂತೆ ರಾಜ್ಯದ ಇತರ ಭಾಗಗಳಿಂದ  ಹೊರೆಕಾಣಿಕೆಗಳು ದೇವಸ್ಥಾನಕ್ಕೆ ತಲುಪಿದೆ.

ಕರಾವಳಿ ಭಾಗದ ಭಕ್ತಾಧಿಗಳ ಹೊರಕಾಣಿಕೆಯು 2000ಕ್ಕೂ ಮಿಕ್ಕಿದ ವಾಹನಗಳ ಮೂಲಕ ದೇವಸ್ಥಾನದ ಉತ್ತರ ಭಾಗದ ಮೆರವಣಿಗೆಯು ಮೂಳೂರಿನಿಂದ ಹಾಗೂ ದಕ್ಷಿಣ ಭಾಗದ ಮೆರವಣಿಗೆಯು ತೆಂಕ ಎರ್ಮಾಳ್‍ನಿಂದ ಹೊರಟು ವಿವಿಧ ರೀತಿಯ ಟ್ಯಾಬ್ಲೋ, ಚೆಂಡೆ, ಭಜನಾಕುಣಿತ ಮುಂತಾದ ಬಿರುದಾವಳಿಗಳೊಂದಿಗೆ ದೇವಸ್ಥಾನ ತಲುಪಲಿದೆ.ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ನೂಕು ನುಗ್ಗಲಾಗದಂತೆ  ಸುಮಾರು 1 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಅನ್ನಛತ್ರದ ಚಪ್ಪರ ನಿರ್ಮಿಸಿ ಎಲೆ ಊಟ ಮತ್ತು ಬಫೆ ಊಟಕ್ಕೆ ಅನುಕೂಲವಾಗುವಂತೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಹಾಗೂ ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳ ವಾಹನ ನಿಲುಗಡೆಗೆ ಬೇಕಾಗುವಷ್ಟು ಪಾರ್ಕಿಂಗ್ ಜಾಗದ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 

ಶ್ರೀಮಹಾಲಕ್ಷ್ಮೀ ದೇವಸ್ಥಾನವು 1957 ರಲ್ಲಿ ಮೊಗವೀರ ಕುಲಗುರುಗಳಾದ ಕೀರ್ತಿಶೇಷ  ಮಾಧವ ಮಂಗಲರವರ ನೇತೃತ್ವದಲ್ಲಿ ದಿವಂಗತ ಸದಿಯ ಸಾಹುಕಾರರು ದಾನವಾಗಿ ನೀಡಿದ ಜಾಗದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದೆ. ಇದೀಗ  32 ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಂಡಿರುವ ದೇವಸ್ಥಾನದ  ಶಿಲಾಮಯ ಗರ್ಭ ಗುಡಿ , ಶಿಲಾಮಯ ಶ್ರೀ ಭದ್ರಕಾಳಿ ಗುಡಿ , ಶಿಲಾಮಯ ಶ್ರೀ ಪ್ರಸನ್ನ ಗಣಪತಿ ಗುಡಿ , ಶ್ರೀ ನಾಗದೇವರ ಗುಡಿ, ಸುತ್ತುಪೌಳಿ, ಗುರುಪೀಠ, ರಾಜಗೋಪುರ, ಯಾಗಶಾಲೆ, ವಸಂತ ಮಂಟಪ , ರಥಬೀಧಿ, ಸುತ್ತು ಆವರಣ ಗೋಡೆ, ಬಯಲು ರಂಗ ಮಂಟಪ, ಒಳಚರಂಡಿ ವ್ಯವಸ್ಥೆ, ನೆಲಹಾಸು(ಇಂಟರ್‍ಲಾಕ್) ಅಳವಡಿಕೆ ಹಾಗೂ ಪುಷ್ಕರಣಿಗಳನ್ನೊಳ ಜೀರ್ಣೋದ್ದಾರ ಕಾರ್ಯ ಸಂಪನ್ನಗೊಂಡಿದೆ. 

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ.ಅಮೀನ್, ಕೋಶಾಧಿಕಾರಿ ವಿನಯ್ ಕರ್ಕೇರ, ಕಾರ್ಯದರ್ಶಿ ಶಂಕರ್ ಸಾಲ್ಯಾನ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ್ ಕುಂದರ್, ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಕೋಶಾಧಿಕಾರಿ ಭರತ್ ಎರ್ಮಾಳ್, ಜೊತೆ ಕಾರ್ಯದರ್ಶಿ ಮೋಹನ್ ಕರ್ಕೇರ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಗಂಗಾಧರ ಸುವರ್ಣ ಎರ್ಮಾಳ್, ಪ್ರಧಾನ ಅರ್ಚಕ ರಾಘವೇಂದ್ರ ಉಪಾ ಧ್ಯಾಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!