ಡಿಸ್ಕಸ್’ತ್ರೋ ಕ್ರೀಡಾಪಟು ಮಾಧುರ್ಯ ಶೆಟ್ಟಿಗೆ ಅಂತರಾಷ್ಟ್ರೀಯ ಸ್ಪರ್ಧೆಗೆ ಭಾಗವಹಿಸಲು ಬೇಕಿದೆ ಸಹಾಯಹಸ್ತ
ಉಡುಪಿ ಮಾ.24(ಉಡುಪಿ ಟೈಮ್ಸ್ ವರದಿ): ಫ್ರಾನ್ಸ್ ನಲ್ಲಿ ಮೇ ತಿಂಗಳಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುವ ಉಡುಪಿಯ ಕ್ರೀಡಾ ಪ್ರತಿಭೆ ಮಾಧುರ್ಯ ಶೆಟ್ಟಿ ಅವರಿಗೆ ವಿದೇಶದ ನೆಲದಲ್ಲಿ ನಡೆಯುವ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ಆರ್ಥಿಕ ನೆರವು ನೀಡುವಂತೆ ಅಜ್ಜರಕಾಡುವಿನ ಸರಕಾರಿ ಪ್ರೌಢ ಶಾಲೆ ಪ್ರಾಂಶುಪಾಲರಾದ ಬಿಎಚ್ ಇಂಧರ್ ಅವರು ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಚಕ್ರ ಎಸೆತ (ಡಿಸ್ಕಸ್ ತ್ರೋ) ಸ್ಪರ್ಧೆಯಲ್ಲಿ ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಉಡುಪಿ ಅಜ್ಜರಕಾಡುವಿನ ಸರಕಾರಿ ಪ್ರೌಢ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಮಾಧುರ್ಯ ಶೆಟ್ಟಿ ಅವರು ಫ್ರಾನ್ಸ್ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ಒಡಿಸ್ಸಾದ ಭುವನೇಶ್ವರದಲ್ಲಿ ನಡೆದ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ ಕ್ರೀಡಾ ಸ್ಪರ್ಧೆಯಲ್ಲಿ ಚಕ್ರ ಎಸೆತದಲ್ಲಿ ರಾಷ್ಟ್ರೀಯ ಕ್ರೀಡಾ ಪಟುವಾಗಿ ಹೊರ ಹೊಮ್ಮುವ ಮೂಲಕ ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಗುರುತಿಸಿ ಕೊಂಡಿದ್ದರು. ಇದೀಗ ಆರ್ಥಿಕವಾಗಿ ಹಿಂದುಳಿದ ಮಾಧುರ್ಯ ಶೆಟ್ಟಿ ಅವರಿಗೆ ಮೇ. ತಿಂಗಳಲ್ಲಿ ಫ್ರಾನ್ಸ್ ನಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಭಾಗವಹಿಸಲು ಆರ್ಥಿಕ ನೆರವಿ ಅಗತ್ಯವಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಸಲುವಾಗಿ 3 ಲಕ್ಷದಷ್ಟು ಖರ್ಚಾಗಲಿದ್ದು, ಈ ಪೈಕಿ ಮಾಧುರ್ಯ ಅವರು ಫ್ರಾನ್ಸ್ ಗೆ ತೆರಳಲು ಹಾಗೂ ವಾಪಸ್ಸು ಬರುವ ಖರ್ಚು ಸೇರಿ ಫ್ರಾನ್ಸ್ ನಲ್ಲಿ ಭಾಗವಹಿಸುವ ಸಲುವಾಗಿ ಎರಡುವರೆ ಲಕ್ಷದಷ್ಟು ಹಣವನ್ನು ಗೇಮ್ಸ್ ನ ಫೆಡರೇಶನ್ ಆಫ್ ಇಂಡಿಯಾದ ಕಚೇರಿಗೆ ಕಟ್ಟಬೇಕಾಗಿದೆ. ಹಾಗೂ ವಿದೇಶದಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸಮಯದಲ್ಲಿ ಅವರ ಬಳಿಯು ಕನಿಷ್ಟ ಮೊತ್ತ ಇರುವುದು ಅಗತ್ಯವಾಗಿದೆ.
ತಂದೆಯ ಗಾರೆ ಕೆಲಸದಿಂದ ಬರುವ ಆದಾಯದಲ್ಲಿ ಇಡೀ ಕುಟುಂಬ ಜೀವನ ಸಾಗಿಸುತ್ತಿದ್ದು, ಆರ್ಥಿಕ ಸಂಕಷ್ಟದಲ್ಲಿ ರುವ ಕುಟುಂಬ ಮಗಳ ಸ್ಪರ್ಧೆಯ ಖುರ್ಚು ಭರಿಸುವಷ್ಟು ಶಕ್ತವಾಗಿಲ್ಲ. ಆದ್ದರಿಂದ ದಾನಿಗಳು ಮಾಧುರ್ಯ ಅವರ ಕ್ರೀಡಾ ಪ್ರತಿಭೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಅವರಿಗೆ ಆರ್ಥಿಕ ನೆರವಿನ ಪ್ರೋತ್ಸಾಹ ನೀಡಬೇಕಾಗಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಅಜ್ಜರ ಕಾಡುವಿನ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಜೇಮ್ ಸಿಂಧಿಯಾ ಕ್ರಾಸ್ತಾ, ಹಿಲಿಯಾನದ ಸರಕಾರಿ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ಸುಗಂಧಿ, ಕ್ರೀಡಾಪಟು ಮಾಧುರ್ಯ ಶೆಟ್ಟಿ ಹಾಗೂ ಅವರ ತಾಯಿ ಪೂಣಿಮಾ ಶೆಟ್ಟಿ ಉಪಸ್ಥಿತರಿದ್ದರು.
ಕೃಷ್ಣಮೂರ್ತಿ ಶೆಟ್ಟಿ ಹಾಗೂ ಪೂರ್ಣಿಮಾ ಶೆಟ್ಟಿ ಅವರ ದಂಪತಿಗಳ ಮಗಳಾದ ಮಾಧುರ್ಯ ಶೆಟ್ಟಿ ಅವರು ಬಡತನದಲ್ಲೇ ಬೆಳೆದಿದ್ದಾರೆ. ಕ್ರೀಡೆಯಲ್ಲಿ ಆಸಕ್ತಿ ಹೊಂಡಿದ್ದ ಅವರು, ಪ್ರಾಥಮಿಕ ಶಾಲೆಯಿಂದ ಕ್ರೀಡೆಯಲ್ಲಿ ತೊಡಗಿಸಿಕೊಂಡು ವಲಯ, ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡಿದ್ದಾರೆ. ಶಿಕ್ಷಣದ ಜೊತೆಗೆ ಕ್ರೀಡಾ ತರಬೇತಿಯನ್ನು ಅಜ್ಜರಕಾಡಿನ ಯುವಜನ ಸೇವಾ ಇಲಾಖೆಯ ಕ್ರೀಡಾ ತರಬೇತಿ ಕೇಂದ್ರದಲ್ಲಿ ಪಡೆಯುತ್ತಿದ್ದಾರೆ.
2017ರಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿರುವಾಗ ವಲಯ ಮಟ್ಟದ ಶಾಟ್ ಪುಟ್ ಮತ್ತು ಡಿಸ್ಕಸ್ ತ್ರೋ ನಲ್ಲಿ ಪ್ರಥಮ ಸ್ಥಾನ. ತಾಲೂಕು ಮಟ್ಟದಲ್ಲಿ ಡಿಸ್ಕಸ್ ತ್ರೋನಲ್ಲಿ ಪ್ರಥಮ ಹಾಗೂ ಜಿಲ್ಲಾ ಮಟ್ಟದಲ್ಲಿ ಡಿಸ್ಕಸ್ ತ್ರೋನಲ್ಲಿ ತೃತೀಯ ಸ್ಥಾನ ಗಳಿಸಿದ್ದರು. 2018ರಲ್ಲಿ ನಡೆದ ರಾಜ್ಯ ಮಟ್ಟದ ಅಮೆಚೂರ್ ಅಥ್ಲೆಟಿಕ್ ಮೀಟ್‍ನಲ್ಲಿ ಶಾಟ್ ಪುಟ್‍ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ ಮಾಧುರ್ಯ ದಕ್ಷಿಣ ಭಾರತದ ಅಥ್ಲೆಟಿಕ್ ಮೀಟ್ ಶಾಟ್ ಪುಟ್‍ನಲ್ಲಿ ತೃತೀಯ ಸ್ಥಾನಗಳಿಸುವ ಮೂಲಕ ತನ್ನ ಸಾಮಥ್ರ್ಯವನ್ನು ಮೆರೆದಿದ್ದರು.2019ರಲ್ಲಿ ತಾಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಶಾಟ್ ಪುಟ್ ಮತ್ತು ಡಿಸ್ಕಸ್ ತ್ರೋ ನಲ್ಲಿ ಸತತವಾಗಿ ಪ್ರಥಮ ಸ್ಥಾನದೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡು ಶಾಟ್ ಪುಟ್ ಮತ್ತು ಡಿಸ್ಕಸ್ ತ್ರೋ ನಲ್ಲಿ ಬೆಳ್ಳಿ ಪದಕದೊಂದಿಗೆ ಪಂಜಾಬಿನಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆ ಗೊಂಡಿದ್ದರು. ಹಾಗೂ 2020ರಲ್ಲಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಮೀಟ್ ಶಾಟ್ ಪುಟ್‍ನಲ್ಲಿ ಪ್ರಥಮ ಸ್ಥಾನ ಪಡೆದಿದ್ದರು.
ಇವರು ಶಾಲೆಯ ಪ್ರತಿಯೊಂದು ಚಟುವಟಿಕೆಗಳಲ್ಲೂ ಸದಾ ಮುಂಚೂಣಿಯಲ್ಲಿ ಭಾಗವಹಿಸುತ್ತಾ ಶಾಲಾ ನಾಯಕಿಯಾಗಿ ಆದರ್ಶ ವಿದ್ಯಾರ್ಥಿನಿಯಾಗಿ ಮೆಚ್ಚುಗೆ ಗಳಿಸಿಕೊಂಡಿದ್ದು 2022ರಲ್ಲಿ ಕೆಳದಿ ಚೆನ್ನಮ್ಮ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೀಗ ಇತ್ತೀಚಿಗೆ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ ಟ್ರಯಲ್ಸ್ ನಲ್ಲಿ ಭಾಗವಹಿಸಿ ಪಥಮ ಸ್ಥಾನ ಪಡೆದು ಪ್ರಾನ್ಸ್ ನಲ್ಲಿ ಮೇ ತಿಂಗಳಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗುವ ಮೂಲಕ ಜಿಲ್ಲೆಯೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಪತ್ರಿಕಾಗೋಷ್ಠಿ ಹಿಲಿಯನ ಸರಕಾರಿ ಪ್ರಾ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸುಗಂಧಿ, ಸಿಂಥಿಯ ಕ್ರಾಸ್ತಾ, ಪೂರ್ಣಿಮಾ ಶೆಟ್ಟಿ ಉಪಸ್ಥಿತರಿದ್ದರು.