ಹಿಜಾಬ್ ವಿವಾದ: ಮೊದಲು ಪ್ರಕಟಿಸಿದ “ಉಡುಪಿ ಟೈಮ್ಸ್” ವರದಿಯನ್ನು ಅಧಿವೇಶನದಲ್ಲಿ ಉಲ್ಲೇಖಿಸಿದ ಶಾಸಕ ರಘುಪತಿ ಭಟ್

ಉಡುಪಿ (ಉಡುಪಿ ಟೈಮ್ಸ್ ವರದಿ): ಜಿಲ್ಲೆಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾದ ಹಿಜಾಬ್ ವಿವಾದ ವಿಧಾನ ಸಭೆಯಲ್ಲಿ ಸವಿಸ್ತಾರವಾಗಿ ಪ್ರಸ್ತಾಪಿಸಿದ ಶಾಸಕ ರಘುಪತಿ ಭಟ್ ಅವರು, ಹಿಜಾಬ್ ವಿವಾದವನ್ನು ಜಿಲ್ಲೆಯಲ್ಲಿ ಮೊದಲು ಸ್ಥಳೀಯವಾಗಿ ಪ್ರಕಟಿಸಿದ “ಉಡುಪಿ ಟೈಮ್ಸ್” ವರದಿಯನ್ನು ವಿಧಾನ ಸಭೆಯ ಅಧಿವೇಶನದಲ್ಲಿ ಉಲ್ಲೇಖಿಸಿದ್ದಾರೆ.

ಹಿಜಾಬ್ ವಿವಾದದ ಬಗ್ಗೆ ಸ್ಥಳೀಯ “ಉಡುಪಿ ಟೈಮ್ಸ್” ಮಾಧ್ಯಮದಲ್ಲಿ ಡಿ.31 ಕ್ಕೆ ಪ್ರಕಟವಾಗಿದೆ. ಆದರೆ ಅದಕ್ಕೂ ಮೊದಲೇ ಅಂತರಾಷ್ಟ್ರೀಯ ಮಾಧ್ಯಮದಲ್ಲಿ ಉಡುಪಿಯಲ್ಲಿ ಹಿಜಾಬ್ ಸಂಪೂರ್ಣ ಬ್ಯಾನ್ ಆಗಿದೆ ಎಂಬ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಹಾಗಾಗಿ ಈ ವಿವಾದ ಹಿಂದೆ ಒಂದು ಅಂತರಾಷ್ಟ್ರೀಯ ಷಡ್ಯಂತ್ರ ಇದೆ ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಉಡುಪಿಯಲ್ಲಿ ಹಿಜಾಬ್ ಸಂಪೂರ್ಣ ಬ್ಯಾನ್ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಈ ಹಿಂದಿನಿಂದಲೂ ಕಾಲೇಜಿನಲ್ಲಿ ಸಮವಸ್ತ್ರ ಜಾರಿಯಲ್ಲಿತ್ತು. ವಿವಾದ ಆರಂಭ ಆಗುವವರೆಗೂ ವಿದ್ಯಾರ್ಥಿನಿಯರು ಕಾಲೇಜ್ ಆವರಣದಲ್ಲಿ ವರೆಗೆ ಹಿಜಾಬ್ ಧರಿಸಿ ಬಂದು ತರಗತಿಗಳಿಗೆ ಹಿಜಾಬ್ ಇಲ್ಲದೇ ಹಾಜರಾಗುತ್ತಿದ್ದರು. ಈ ಪದ್ದತಿ ಮೊದಲಿನಿಂದಲೂ ನಡೆಯುತ್ತಾ ಬಂದಿತ್ತು. ಮಣಿಪಾಲದಲ್ಲಿ ನಡೆದ ಒಂದು ಅತ್ಯಾಚಾರ ಪ್ರಕರಣದ ವಿರುದ್ಧ ಎಬಿವಿಪಿ ಸಂಘಟನೆ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಕೆಲವು ಮುಸ್ಲಿಂ ಯುವತಿಯರು ಬುರ್ಕಾ ಹಾಕಿಕೊಂಡು ಪಾಲ್ಗೊಂಡಿದ್ದರು. ಮತೀಯ ಸಂಘಟನೆ ಸಿಎಫ್‍ಐ ಅವರ ಪಾಲಕರನ್ನು ಸಂಪರ್ಕಿಸಿ ತಮ್ಮ ಮಕ್ಕಳಿಗೆ ಹಿಜಾಬ್ ಕಡ್ಡಾಯವಾಗಿ ಹಾಕಿಕೊಳ್ಳಲು ಒತ್ತಡ ಹೇರುವಂತೆ ಒತ್ತಾಯ ಮಾಡುತ್ತಾರೆ. ಅವರ ಒತ್ತಾಯದಂತೆ 12 ಮಕ್ಕಳು ಹಿಜಾಬ್ ಹಾಕಲು ಅವಕಾಶ ನೀಡಬೇಕು ಎಂದು ಮಹಿಳಾ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್‍ಗೆ ಮನವಿ ಮಾಡುತ್ತಾರೆ. ಅವರಿಗೆ ಮನವೊಲಿಕೆ ಪ್ರಯತ್ನ ನಡೆಸಿದ ನಂತರ 12 ಮಂದಿ ಪೈಕಿ 6 ವಿದ್ಯಾರ್ಥಿನಿಯರು ಹಿಜಾಬ್ ಇಲ್ಲದೆ ಬರಲು ಒಪ್ಪುತ್ತಾರೆ.

ಆದರೆ ಉಳಿದ 6 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಹಾಕಲು ಅವಕಾಶ ನೀಡುವಂತೆ ಬರವಣಿಗೆ ಮೂಲಕ ಬೇಡಿಕೆ ಸಲ್ಲಿಸುತ್ತಾರೆ. ಅವರ ಮನವೊಲಿಸಲು ಮುಸ್ಲಿಂ ಮುಖಂಡರು ಪ್ರಯತ್ನ ನಡೆಸಿದರೂ ಅವರು ಯಾರ ಮಾತನ್ನೂ ಕೇಳದೆ ತಮ್ಮ ಬೇಡಿಯನ್ನು ಮುಂದುವರೆಸಿದ್ದಾರೆ. ಆದರೆ ಇದಕ್ಕೆ ಆಡಳಿತ ಮಂಡಳಿ ನಿರಾಕರಿಸಿದೆ. ಈ ವೇಳೆ  ಸಿಎಫ್‍ಐನವರು ಉಡುಪಿಯಲ್ಲಿ ಯಶಸ್ವಿಯಾಗದಿದ್ದಾಗ ಕುಂದಾಪುರಕ್ಕೆ ಹೋಗಿ ಅಲ್ಲಿನ ಪ್ರಥಮ ದರ್ಜೆ ಕಾಲೇಜಿನ ಹೆಣ್ಣುಮಕ್ಕಳಿಗೆ ಹಿಜಾಬ್ ಹಾಕಿಕೊಂಡು ಬರಲು ಹೇಳುತ್ತಾರೆ. ಅದರಂತೆ ಅಲ್ಲಿನ ವಿದ್ಯಾರ್ಥಿನಿಯರು ಹಿಜಾಬ್ ನಲ್ಲಿ ಬಂದಾಗ ಅದನ್ನು ನೋಡಿದ ಹಿಂದೂ ಯುವಕರು ಯಾವುದೇ ಸಂಘಟನೆಗಳ ಪ್ರೇರಣೆ ಇಲ್ಲದೆ ತಾವಾಗಿಯೇ ತಮಗೂ ಕೇಸರಿ ಶಾಲು ಹಾಕಿಕೊಳ್ಳಲು ಅವಕಾಶ ನೀಡಬೇಕೆಂದು ತಾವೇ ಶಾಲು ಹಾಕಿಕೊಂಡು ಕಾಲೇಜಿಗೆ ಬಂದಿದ್ದಾರೆ. ಬಳಿಕ ಈ ವಿವಾದ ಎಲ್ಲೆಡೆ ಹರಡಿ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದರು.

ಈ ವಿವಾದವನ್ನು ಯಾವುದೇ ರಾಜಕೀಯ ಲಾಭಕ್ಕೆ ಆರಂಭಿಸಿದ್ದಲ್ಲ ಎಂದು ಸ್ಪಷ್ಟನೆ ನೀಡಿದ ಅವರು, 12 ಮಂದಿ ವಿದ್ಯಾರ್ಥಿನಿಯರ ಪೈಕಿ ಕಾಲೇಜಿಗೆ ಹಿಜಾಬ್ ಇಲ್ಲದೆ ಬರಲು ಒಪ್ಪಿಕೊಂಡ 6 ಮಂದಿ ವಿದ್ಯಾರ್ಥಿಗಳು ಹೇಳಿದ ಹೇಳಿಕೆಯನ್ನು ಉಲ್ಲೇಖಿಸಿ 12 ಜನ ವಿದ್ಯಾರ್ಥಿನಿಯರಿಗೆ ಸಿಎಫ್ ಐನವರು ಮಣಿಪಾಲ ಬಳಿ ಗುಪ್ತ ಸ್ಥಳವೊಂದರಲ್ಲಿ ತರಬೇತಿ ನೀಡಿದ್ದಾರೆ. ಆ ವಿದ್ಯಾರ್ಥಿನಿಯರೇ ತರಬೇತಿ ಪಡೆದ ನಂತರ ತಮ್ಮ ಪಕ್ಕದಲ್ಲಿಯೇ ಕುಳಿತುಕೊಳ್ಳುವ ಹಿಂದೂ ಯುವತಿಯ ಮೇಲೆ ದ್ವೇಷ ಹುಟ್ಟಲು ಕಾರಣವಾಗಿತ್ತು ಎಂದೂ ಹೇಳಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರ ಬಳಿ ಹೆಚ್ಚಿನ ಮಾಹಿತಿ ಇದೆ ಎಂದು ತಿಳಿಸಿದರು. 

ಉಡುಪಿ ಜಿಲ್ಲೆಯಲ್ಲಿ ಯಾವಾಗಲೂ ಹಿಂದೂ-ಮುಸ್ಲಿಮರು ಅನ್ನೋನ್ಯವಾಗಿಯೇ ಇದ್ದೇವೆ. ಹಿಜಾಬ್ ವಿಚಾರದಲ್ಲಿ ಸ್ಥಳೀಯರು ಯಾರೂ ಗಲಾಟೆ ಮಾಡಿಲ್ಲ.  ಇಲ್ಲಿ ಹೊರಗಿನವರು ಬಂದು ಗಲಾಟೆ ಮಾಡಿದ್ದಾರೆ. ಉಡುಪಿ ಸೌಹಾರ್ದ ತೆಗೆ ಹೆಸರುವಾಸಿಯಾದ ಜಿಲ್ಲೆ ಈ ಹಿಂದೆಯೂ ಗಡಿ ಜಿಲ್ಲೆಯಲ್ಲಿ ಎಷ್ಟು ದೊಡ್ಡ ಕೋಮು ಗಲಬೆಯಾದರೂ ಅದು ಉಡುಪಿ ಮೇಲೆ ಯಾವುದೇ ಪ್ರಭಾವ ಬೀರುತ್ತಿರಲಿಲ್ಲ ಎಂದು, ಕೃಷ್ಣಮಠದಲ್ಲಿ ನಡೆದ ಸೌಹಾರ್ಧ ಕೂಟ ಹಾಗೂ ಮುಸ್ಲಿಂ ಸಮುದಾಯದವರು ಹಿಂದೂ ಸಮುದಾಯದೊಂದಿಗೆ ಸೌಹಾರ್ಧತೆಯೊಂದಿಗೆ ಇದ್ದ ಘಟನೆಗಳನ್ನು ಉಲ್ಲೇಖಿಸಿದರು. ಜಿಲ್ಲೆಯ ಮಟ್ಟಿಗೆ ವಿವಾದ ನಿಯಂತ್ರಿಸಲು ಪ್ರಯತ್ನಸಿದ್ದೇವೆ ಆದರೆ ಅದು ಸಾಧ್ಯವಾಗಿಲ್ಲ.ಹಿಜಾಬ್ ಅಂತಾರಾಷ್ಟ್ರೀಯ ಷಡ್ಯಂತ್ರವಿದೆ. ಈ ಬಗ್ಗೆ ದೊಡ್ಡ ಮಟ್ಟದ ತನಿಖೆ ನಡೆಯಬೇಕು ಎಂದು ಅವರು ಮತ್ತೆ ಮತ್ತೆ ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!