ರಾಮ ಮಂದಿರಕ್ಕೆ ಪ್ರತಿ ಮನೆಯಿಂದ ₹101 ದೇಣಿಗೆ ನೀಡಿ: ಪೇಜಾವರಶ್ರೀ ಕರೆ
ಬ್ರಹ್ಮಾವರ: ‘ಜಗತ್ತಿನ ಕೋಟ್ಯಂತರ ಆಸ್ತಿಕ ಜನರ ಬಹುವರ್ಷಗಳ ಶ್ರಮದ ಫಲವಾಗಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಕಾರ್ಯ ಆ. 5ರಂದು ನಡೆಯಲಿದ್ದು, ಅಂದು ದೇಶದ ಪ್ರತಿ ಧರ್ಮಶ್ರದ್ಧೆಯುಳ್ಳ ಮನೆ, ಮನಸ್ಸುಗಳಲ್ಲಿ ಶ್ರೀರಾಮ ಹಾಗೂ ಹನುಮರ ಭಕ್ತಿಗಳು ನ್ಯಾಸಗೊಳ್ಳಬೇಕು. ಮಂದಿರದಲ್ಲಿ ಸೀತಾ, ರಾಮ ಬಿಂಬಪ್ರತಿಷ್ಠೆಯ ವರೆಗೆ ನಿತ್ಯವೂ ಜಾಗೃತವಾಗಿರಬೇಕು’ ಎಂದು ಅಯೋಧ್ಯೆ ಶ್ರೀರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥಮಂಡಳಿ ಸದಸ್ಯ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದರು.
ಬ್ರಹ್ಮಾವರ ಬಳಿಯ ನೀಲಾವರ ಗೋಶಾಲೆಯ ಪೇಜಾವರ ಶಾಖಾಮಠ
ದಲ್ಲಿ ಚಾರ್ತುಮಾಸ್ಯ ವ್ರತದಲ್ಲಿರುವ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ‘ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಧರ್ಮಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸುವರು. ದೇಶದ ಇತಿಹಾಸದಲ್ಲಿ ಸ್ಮರಣೀಯ ದಿನವಾಗಿ ಇದು ದಾಖಲಾಗಲಿದೆ. ಪ್ರತಿಯೊಬ್ಬರೂ ಮನೆಯಲ್ಲಿಯೇ ನೇರಪ್ರಸಾರದ ಮೂಲಕ ಕಣ್ತುಂಬಿಕೊಳ್ಳಬೇಕು. ನಿತ್ಯ ಶ್ರೀರಾಮ, ಹನುಮರ ಸ್ಮರಣೆ ನಡೆಸಬೇಕು’ ಎಂದರು.
ವಿಶೇಷ ಪ್ರಾರ್ಥನೆ: ‘ಶಿಲಾನ್ಯಾಸದ ದಿನ ಪ್ರತಿ ಮನೆ, ಮಂದಿರ, ದೇವಸ್ಥಾನ, ಕಚೇರಿಗಳಲ್ಲಿ ಧಾರ್ಮಿಕ ವಾತಾವರಣ ಸೃಷ್ಟಿಸಬೇಕು. ತಳಿರು ತೋರಣ, ದ್ವಾರಗಳಿಗೆ ಹೂವಿನ ಅಲಂಕಾರ, ಭಗವಧ್ವಜಗಳನ್ನು ಅಳವಡಿಸಬೇಕು. ಬೆಳಿಗ್ಗೆ 11.30 ರಿಂದ ಮ. 12.30 ರ ವರೆಗೆ ಕಾರ್ಯಕ್ರಮದ ಹೊತ್ತಿನಲ್ಲಿ ಮನೆ, ಕಚೇರಿಗಳಲ್ಲಿ ಶ್ರೀರಾಮನಿಗೆ ತೈಲ ದೀಪಗಳನ್ನು ಬೆಳಗಬೇಕು, ಅಂದಿನಿಂದ ಪ್ರತಿನಿತ್ಯ ಕನಿಷ್ಠ ಹತ್ತು ಬಾರಿಯಾದರೂ ಶ್ರೀರಾಮ ಜಯರಾಮ ಜಯ ಜಯ ರಾಮ ಮಂತ್ರ ಜಪಿಸಬೇಕು. ಮಠ ಮಂದಿರ ದೇವಳಗಳಲ್ಲಿ ವಿಶೇಷ ಪೂಜೆ ನೆರವೇರಿಸಬೇಕು’ ಎಂದು ಸ್ವಾಮೀಜಿ ಕರೆ ನೀಡಿದರು.
ಉಡುಪಿಯ ನಂಟು: ‘ಕರ್ನಾಟಕ ಶ್ರೀರಾಮ, ಭಕ್ತ ಹನುಮನ ಅವತಾರ ಭೂಮಿ. ಅದೇ ರೀತಿ ಗುರುಗಳಾದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಈ ಆಂದೋಲನಕ್ಕೆ ದೇಶದ ಸಾಧುಸಂತರಿಗೆ ಕೋಟ್ಯಂತರ ರಾಮಭಕ್ತರಿಗೆ ಬಹಳ ಮಾರ್ಗದರ್ಶನ ಮಾಡಿದ್ದಾರೆ. ಉಡುಪಿಯ ಅನೇಕ ಮಠಾಧೀಶರೂ ಈ ಕಾರ್ಯದಲ್ಲಿ ಶ್ರಮಿಸಿದ್ದಾರೆ. ಮಂದಿರ ನಿರ್ಮಾಣ ಕಾರ್ಯ ಪೂರ್ಣವಾಗುವವರೆಗೂ ಉಡುಪಿಯೂ ಸೇರಿದಂತೆ ಇಡೀ ರಾಜ್ಯದಲ್ಲಿ ನಿತ್ಯ ನಿರಂತರ ರಾಮ ನಾಮ ಜಪ, ಭಜನೆ, ಪ್ರಾರ್ಥನೆಗಳು ನಡೆಯಬೇಕು ಎಂದು ಎಲ್ಲ ಮಠಾಧೀಶರಿಗೂ ಮನವಿ ಮಾಡಿಕೊಳ್ಳುತ್ತೇವೆ. ಕರ್ನಾಟಕದಿಂದ ಆದಿಚುಂಚನಗಿರಿ ಸ್ವಾಮೀಜಿ ಪ್ರತಿನಿಧಿಯಾಗಿ ಹೋಗಲಿದ್ದಾರೆ’ ಎಂದು ತಿಳಿಸಿದರು.
ವಿಶ್ವಹಿಂದೂ ಪರಿಷತ್ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ವಿಷ್ಣುಮೂರ್ತಿ ಆಚಾರ್ಯ, ಬಜರಂಗದಳದ ಪ್ರಾಂತ ಸಹಸಂಚಾಲಕ ಸುನಿಲ್ ಕೆ., ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಸುರೇಂದ್ರ ಕೋಟೇಶ್ವರ, ಪೂರ್ಣಿಮಾ ಸುರೇಶ್, ಮಠದ ವಾಸುದೇವ ಭಟ್
ಇದ್ದರು.
‘ಲಕ್ಷ ತುಳಸಿ ಅರ್ಚನೆ’
ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆಯುವ ಇದೇ 5 ರಂದು ಬೆಳಿಗ್ಗೆ ನೀಲಾವರ ಗೋಶಾಲೆಯಲ್ಲಿ ಶ್ರೀರಾಮ, ಕೃಷ್ಣ ದೇವರಿಗೆ ಲಕ್ಷ ತುಳಸಿ ಅರ್ಚನೆ ನಡೆಯಲಿದೆ ಎಂದು ವಿಶ್ವಪ್ರಸನ್ನ ಸ್ವಾಮೀಜಿ ತಿಳಿಸಿದರು.
‘₹101 ದೇಣಿಗೆ ನೀಡಿ’
‘ನಮ್ಮ ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಧನಸಹಾಯ ಮಾಡಬೇಕು. ಪ್ರತಿ ಮನೆಯಿಂದ ₹101ರಂತೆ ನೀಡಿ ಸಹಕರಿಸಿದಲ್ಲಿ ಭವ್ಯ ಮಂದಿರ ನಿರ್ಮಾಣವಾಗುತ್ತದೆ ’ ಎಂದು ವಿಶ್ವಪ್ರಸನ್ನ ಸ್ವಾಮೀಜಿ ಮನವಿ ಮಾಡಿದರು.