ಬಪ್ಪನಾಡು: ಅಹಿತಕರ ಘಟನೆ ನಡೆಯದಿರಲಿ ಎಂದು ಅಂಗಡಿಗಳನ್ನು ತೆರೆಯದಿರಲು ಮುಸ್ಲಿಮ್ ವ್ಯಾಪಾರಿಗಳ ನಿರ್ಧಾರ
ಮಂಗಳೂರು ಮಾ.24: ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ ಎಂಬ ಕಾರಣಕ್ಕೆ ಅಂಗಡಿಗಳನ್ನು ಹಾಕದಿರಲು ಮುಸ್ಲಿಮ್ ವ್ಯಾಪಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮುಸ್ಲಿಂ ವ್ಯಾಪಾರಿಯೊಬ್ಬರು, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳು ಅಂಗಡಿ ಹಾಕಲು ದೇವಸ್ಥಾನದ ವತಿಯಿಂದ ಯಾವುದೇ ಅಭ್ಯಂತರವಿಲ್ಲ ಎಂದು ಸ್ಪಷ್ಟನೆ ನೀಡಿದ್ದರೂ, ಸಂಘಪರಿವಾರ ದೊಂಬಿ- ಗಲಾಟೆ ನಡೆಸಿದರೆ ಜಾತ್ರಾ ಮಹೋತ್ಸವಕ್ಕೆ ತೊಂದರೆಯಾಗಲಿದೆ ಎಂಬ ಕಾರಣಕ್ಕಾಗಿ ಅಂಗಡಿಗಳನ್ನು ಹಾಕುತ್ತಿಲ್ಲ ಎಂದು ತಿಳಿಸಿದ್ದಾರೆ.
ಪ್ರತಿವರ್ಷದಂತೆ ಈ ವರ್ಷವೂ ದೇವಸ್ಥಾನದ ಯುವಕ ಮಂಡಲದ ಯುವಕರು ವ್ಯಾಪಾರಕ್ಕಾಗಿ ಬರುವವರಿಗೆ ಅಂಗಡಿಗಳನ್ನು ಹಾಕಲು ಸ್ಥಳಗಳನ್ನು ನೀಡಿದ್ದರು ಹಾಗೂ ಅದಕ್ಕಾಗಿ ಹಣವನ್ನು ಕಟ್ಟಿಸಿಕೊಂಡಿದ್ದರು. ಆದರೆ, ಹಣ ಕಟ್ಟಿ ಬಂದ ಮರುದಿನ ಫೋನ್ ಮೂಲಕ ಸಂಪರ್ಕಿಸಿದ ಯುವಕ ಮಂಡಲದವರು ” ಈ ಸಲ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ. ಮೇಲಿನಿಂದಲೇ ಆದೇಶ ಬಂದಿದೆ. ಆದ್ದರಿಂದ ತಾವು ಕಟ್ಟಿರುವ ಹಣವನ್ನು ವಾಪಸ್ ಪಡೆದುಕೊಳ್ಳಿ” ಎಂದು ತಿಳಿಸಿದರು. ಅದರಂತೆ ದೇವಸ್ಥಾನದ ವಠಾರಕ್ಕೆ ತೆರಳಿದಾಗ ನಾವು ಕಟ್ಟಿದ್ದ ಹಣವನ್ನು ಹಿಂದಿರುಗಿಸಿ ದೇವಸ್ಥಾನದ ವತಿಯಿಂದ ನೀಡಲಾಗಿದ್ದ ರಶೀದಿಯನ್ನು ಹಿಂದಕ್ಕೆ ಪಡೆದುಕೊಂಡರು. ಅಲ್ಲದೆ, ” ಈ ಒಂದು ವರ್ಷದ ಮಟ್ಟಿಗೆ ನಮಗೆ ಕ್ಷಮೆ ಇರಲಿ” ಎಂದು ಯುವಕರು ನಮ್ಮೊಂದಿಗೆ ಕ್ಷಮೆಯನ್ನು ಯಾಚಿಸಿದರು” ಎಂದು ಮಾಹಿತಿ ನೀಡಿದ್ದಾರೆ.
ಈ ವಿಚಾರವಾಗಿ ಕೆಲವು ಮುಸ್ಲಿಂ ವ್ಯಾಪಾರಿಗಳು ದೇವಸ್ಥಾನದ ಆಡಳಿತ ಸಮಿತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, “ಅಂಗಡಿಗಳನ್ನು ಹಾಕಲು ದೇವಸ್ಥಾನದ ವತಿಯಿಂದ ಯಾವುದೇ ಅಭ್ಯಂತರವಿಲ್ಲ ಎಂದು ಸಮಿತಿ ತಿಳಿಸಿದೆ. ಆದರೆ, ಅಲ್ಲಿ ಅಹಿತಕರ ಘಟನೆಗಳು ನಡೆದರೆ ಸಮಿತಿ ಜವಾಬ್ದಾರಿಯಲ್ಲ ಎಂದು ಹೇಳಿದೆ. ಒಂದು ವೇಳೆ ಸಂಘ ಪರಿವಾರದವರು ಮುಸ್ಲಿಮರ ಅಂಗಡಿಗಳನ್ನು ಗುರಿಯಾಗಿಸಿ ಗಲಾಟೆ ಮಾಡಿ ಅಂಗಡಿಗಳನ್ನು ಲೂಟಿ ಹೊಡೆದರೆ ಯಾರು ಹೊಣೆ? ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಹಲವು ವರ್ಷಗಳಿಂದ ಪ್ರತಿ ವರ್ಷ ಅಮ್ಮನವರ ಜಾತ್ರೆಯಲ್ಲಿ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ಹೀಗಿರುವಾಗ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಅಹಿತಕರ ಘಟನೆಗಳು ನಡೆದು ದೇವಸ್ಥಾನಕ್ಕೆ ಕೆಟ್ಟ ಹೆಸರು ಬರುವುದು ಬೇಡ ಎಂಬ ದೃಷ್ಟಿ ಯಿಂದ ಈ ವರ್ಷ ಮುಸ್ಲಿಮ್ ವ್ಯಾಪಾರಿಗಳು ಬಪ್ಪನಾಡು ಜಾತ್ರೆಯಲ್ಲಿ ವ್ಯಾಪಾರ ಮಾಡದಿರಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಈ ವಿಚಾರವಾಗಿ ಜಾತ್ರೆಯ ವ್ಯಾಪಾರಸ್ಥರಾದ ಅವಿನಾಶ್ ಬೆಳ್ಮಣ್ ಅವರು ಪ್ರತಿಕ್ರಿಯೆ ನೀಡಿ, ನಾವು ಮತ್ತು ಮಸ್ಲಿಮ್ ವ್ಯಾಪಾರಸ್ತರು ಅನ್ಯೋನ್ಯತೆಯಿಂದಲೇ ಜಾತ್ರೆ,ಕೋಲ,ನೇಮ ದಂತಹಾ ಕಾರ್ಯಕ್ರಮಗಳಲ್ಲಿ ವ್ಯಾಪಾರ ಮಾಡುತ್ತಾ ಬಂದಿದ್ದೇವೆ. ಎಲ್ಲಿಯೂ ನಮಗೆ ಅವರಿಂದ ಯಾವುದೇ ರೀತಿಯ ತೊಂದರೆಗಳಾಗಿಲ್ಲ. ಮುಸ್ಲಿಮರು ಜಾತ್ರೆಗಳಲ್ಲಿ ವ್ಯಾಪಾರ ಮಾಡುವುದಕ್ಕೆ ನಮಗೆ ಯಾವುದೇ ಅಭ್ಯಂತರವಿಲ್ಲ ಎಂದಿದ್ದಾರೆ.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರಾಮಹೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅಂಗಡಿ ಹಾಕಲು ಅವಕಾಶ ನಿರಾಕರಣೆ ಸಂಬಂಧ ಎಚ್ಚೆತ್ತುಕೊಂಡ ದೇವಸ್ಥಾನ ಆಡಳಿತ ಸಮಿತಿ ಯಾವುದೇ ಸಮುದಾಯ ದವರು ಜಾತ್ರೆಯಲ್ಲಿ ಅಂಗಡಿ ಹಾಕಲು ದೇವಸ್ಥಾನ ಹಾಗೂ ಆಡಳಿತ ಸಮಿತಿಯ ಅಭ್ಯಂತರವಿಲ್ಲ ಎಂದು ತಿಳಿಸಿತ್ತು.
ಆ ಬೆನ್ನಲ್ಲೇ ಜಾತ್ರಾ ಮಹೋತ್ಸವದಲ್ಲಿ ಇರುವ ಅಂಗಡಿಗಳ ಮೇಲೆ ಕೇಸರಿ ಧ್ವಜಗಳನ್ನು ಇಟ್ಟು ವ್ಯಾಪಾರ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮ್ ವ್ಯಾಪಾರಿಗಳು ವ್ಯಾಪಾರ ನಡೆಸುವಂತಿಲ್ಲ ಎಂಬಂತಹಾ ಬ್ಯಾನರ್ ಅಳವಡಿಸುವ ಮೂಲಕ ದೇವಸ್ಥಾನದ 800 ವರ್ಷಗಳ ಭಾವೈಕ್ಯತೆಗೆ ಧಕ್ಕೆಯಾಗಿದ್ದರೂ ದೇವಸ್ಥಾನದ ಆಡಳಿತ ಸಮಿತಿ ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿರುವ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಎಸ್. ಮನೋಹರ ಶೆಟ್ಟಿ ಅವರು, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದಲ್ಲಿ ಇತರ ಧರ್ಮದವರು ಅಂಗಡಿಗಳನ್ನು ಹಾಕದಂತೆ ಸಮಿತಿ ಸೂಚನೆ ನೀಡಬೇಕೆಂದು ಕೆಲವರು ಸಮಿತಿಯನ್ನು ಸಂಪರ್ಕಿಸಿದ್ದರು. ಆದರೆ, ದೇವಸ್ಥಾನದ ಭಾವೈಕ್ಯತೆಗೆ ಸಹೋದರತೆಗೆ ಮತ್ತು ಸರ್ವ ಧರ್ಮೀಯ ಭಕ್ತರ ನಂಬಿಕೆಗೆ ಧಕ್ಕೆತರುವಂತಹ ನಿರ್ಣಯಗಳನ್ನು ಕೈಗೊಳ್ಳಲಾಗುವುದಿಲ್ಲ ಎಂದು ಮನವಿ ನೀಡಿದವರಿಗೆ ಸ್ಪಷ್ಟಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಯಾರೋ ದೇವಸ್ಥಾನದ ಹೊರಗೆ ಬ್ಯಾನರ್ ಅಳವಡಿಸಿದ್ದಾರೆ. ಬ್ಯಾನರ್ ದೇವಸ್ಥಾನದ ನಿವೇಶನದಲ್ಲಿ ಇಲ್ಲದಿರುವುದರಿಂದ ಈ ಕುರಿತು ಆಡಳಿತ ಸಮಿತಿ ಯಾವುದೇ ಕ್ರಮ ವಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.