| ನವದೆಹಲಿ ಮಾ.23: ಕೋವಿಡ್ ನಿಯಂತ್ರಣ ಕ್ರಮಗಳಿಗಾಗಿ ಹೇರಲಾಗಿದ್ದ ವಿಪತ್ತು ನಿರ್ವಹಣಾ ಕಾಯ್ದೆಯ ನಿಬಂಧನೆಗಳನ್ನು ಗೃಹ ವ್ಯವಹಾರಗಳ ಸಚಿವಾಲಯದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ರದ್ದುಗೊಳಿಸಿದೆ ಎಂದು ತಿಳಿದು ಬಂದಿದೆ.
ಆದರೆ ನಿಯಮಗಳನ್ನು ರದ್ದುಗೊಳಿಸಿದ ಹೊರತಾಗಿಯೂ, ಮುಖಗವಸುಗಳ ಬಳಕೆ ಸೇರಿದಂತೆ ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಸಲಹೆಗಳು ಪಾಲಿಸಬೇಕು ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ. ಪರಿಸ್ಥಿತಿಯಲ್ಲಿನ ಒಟ್ಟಾರೆ ಸುಧಾರಣೆ ಮತ್ತು ಸಾಂಕ್ರಾಮಿಕ ರೋಗವನ್ನು ಎದುರಿಸಲು ಸರ್ಕಾರದ ಸನ್ನದ್ಧತೆಯನ್ನು ಗಣನೆಗೆ ತೆಗೆದುಕೊಂಡು, ಎನ್ಡಿಎಂಎ ಕೋವಿಡ್ ನಿಯಂತ್ರಣ ಕ್ರಮಗಳಿಗಾಗಿ ವಿಪತ್ತು ನಿರ್ವಹಣಾ ಕಾಯ್ದೆಯ ನಿಬಂಧನೆಗಳನ್ನು ಅನ್ವಯಿಸುವ ಅಗತ್ಯವಿಲ್ಲ ಎಂಬ ನಿರ್ಧಾರವನ್ನು ತೆಗೆದುಕೊಂಡಿದೆ. ಅದರಂತೆ, 2022 ರ ಫೆಬ್ರವರಿ 25 ರಂದು ಅಸ್ತಿತ್ವದಲ್ಲಿರುವ ಎಂಎಚ್‌ಎ ಆದೇಶ ಸಂಖ್ಯೆ 40-3/2020-ಡಿಎಂ -1 (ಎ) ರ ಮುಕ್ತಾಯದ ನಂತರ, ಎಂಎಚ್‌ಎಯಿಂದ ಯಾವುದೇ ಹೆಚ್ಚಿನ ಆದೇಶವನ್ನು ಹೊರಡಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಡಿಎಚ್‌ಎಫ್ಡಬ್ಲ್ಯೂ) ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡುತ್ತದೆ. ಫೇಸ್ ಮಾಸ್ಕ್ ಬಳಕೆ ಮತ್ತು ಕೈ ನೈರ್ಮಲ್ಯ ಸೇರಿದಂತೆ ಸಾಂಕ್ರಾಮಿಕ ರೋಗಕ್ಕೆ ಒಟ್ಟಾರೆ ರಾಷ್ಟ್ರೀಯ ಪ್ರತಿಕ್ರಿಯೆಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. | |