ಕಾರ್ಕಳ ಡಾ.ಟಿಎಂಎಪೈ ರೋಟರಿ ಆಸ್ಪತ್ರೆ: ಮೇಲ್ದರ್ಜೆಗೇರಿಸಲು 10 ಲಕ್ಷ ರೂ. ದೇಣಿಗೆ

ಮಣಿಪಾಲ ಮಾ.23(ಉಡುಪಿ ಟೈಮ್ಸ್ ವರದಿ): ಕಾರ್ಕಳದ ಡಾ ಟಿಎಂಎ ಪೈ ರೋಟರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಪ್ರಮುಖ ದಾನಿ ದಂಪತಿಗಳಾದ ರೊಟೇರಿಯನ್ ಮೋಹನ್ ಶೆಣೈ ಎರ್ಮಾಳ್ ಮತ್ತು ರೊಟೇರಿಯನ್ ಅರುಣಾ ಎಂ ಶೆಣೈ ಅವರು ಮಣಿಪಾಲದ ಮಾಹೆ ಟ್ರಸ್ಟ್‌ಗೆ 10 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದರು.

ಇಂದು ಅವರು ದೇಣಿಗೆ ಚೆಕ್ ಅನ್ನು ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ.ಎಚ್.ಎಸ್. ಬಲ್ಲಾಳ್ ಮತ್ತು ಉಪ ಕುಲಪತಿಗಳಾದ ಲೆಫ್ಟಿನೆಂಟ್ ಜನರಲ್  ಡಾ.ಎಂ.ಡಿ.ವೆಂಕಟೇಶ್ ರವರಿಗೆ  ಹಸ್ತಾಂತರಿಸಿದರು. ಈ ವೇಳೆ ಪ್ರತಿಕ್ರಿಯೆ ನೀಡಿದ ಡಾ.ಎಚ್.ಎಸ್.ಬಲ್ಲಾಳ್ ಅವರು, ಆಸ್ಪತ್ರೆಯ ಅಭಿವೃದ್ಧಿ ಕಾರ್ಯಗಳಿಗೆ ದಂಪತಿಗಳು ದೇಣಿಗೆ ನೀಡುತ್ತಿರುವುದು ಇದು 2ನೇ ಬಾರಿ. ಇದೇ ರೀತಿ‌ ಇನ್ನಷ್ಟು  ಜನರು ಉದಾರ ದೇಣಿಗೆಯೊಂದಿಗೆ ಮುಂದೆ ಬಂದು ಮಾಹೆ, ಮಣಿಪಾಲದ ಸಮಾಜಮುಖಿ ಚಟುವಟಿಕೆಗಳಿಗೆ ಕೈ ಜೋಡಿಸಬೇಕು ದಂಪತಿಗಳ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ ವೆಂಕಟೇಶ್ ಅವರು ಮಾತನಾಡಿ, ಈ ದೇಣಿಗೆ ಮೊತ್ತಕ್ಕೆ ಸಮಾನ ಮೊತ್ತವನ್ನು  ಮಾಹೆ ಮಣಿಪಾಲದಿಂದ  ನೀಡಲಾಗುವುದು ಮತ್ತು ಒಟ್ಟು ಮೊತ್ತವನ್ನು ಕಾರ್ಕಳದ ಡಾ ಟಿಎಂಎ ಪೈ ರೋಟರಿ ಆಸ್ಪತ್ರೆಯ ಸೇವೆಗಳನ್ನು ಸುಧಾರಿಸಲು ಬಳಸಲಾಗುವುದು ಎಂದು ಘೋಷಿಸಿದರು. ಹಾಗೂ ಆಸ್ಪತ್ರೆಯಲ್ಲಿನ ಶಸ್ತ್ರಚಿಕಿತ್ಸಾ ಕೊಠಡಿ ಸಂಕೀರ್ಣ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು. 

ಮಾಹೆ ಮಣಿಪಾಲದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಡಾ ಎಚ್ ವಿನೋದ್ ಭಟ್ ಮಾತನಾಡಿ, 1987 ರಲ್ಲಿ ಪ್ರಾರಂಭವಾದಾಗಿನಿಂದ ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವ ರೊಟೇರಿಯನ್ ಮೋಹನ್ ಮತ್ತು ಅರುಣಾ ಶೆಣೈ ಅವರಂತಹ ಹಲವಾರು ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಹೆ ಕುಲಸಚಿವ ನಾರಾಯಣ್ ಸಭಾಹಿತ್, ರೊಟೇರಿಯನ್  ತುಖಾರಾಮ ನಾಯಕ್, ರೊಟೇರಿಯನ್ ಸುವರ್ಣ ನಾಯಕ್ ಮತ್ತು ಡಾ ಟಿಎಂಎ ಪೈ ರೋಟರಿ ಆಸ್ಪತ್ರೆ, ಕಾರ್ಕಳದ ಮುಖ್ಯ ವೈದ್ಯಾಧಿಕಾರಿ ಡಾ.ಕೀರ್ತಿನಾಥ ಬಲ್ಲಾಳ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!