| ಬೆಂಗಳೂರು, ಮಾ. 22: ಉಡುಪಿಯ ಕಾಪುವಿನ ಮಲ್ಲಾರು ಗ್ರಾಮದ ಗುಜರಿ ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಮೃತಪಟ್ಟ ಇಬ್ಬರಿಗೆ ಸರಕಾರ ಕೂಡಲೇ ಪರಿಹಾರ ನೀಡಬೇಕು’ ಎಂದು ಶಾಸಕ ಲಾಲಾಜಿ ಮೆಂಡನ್ ಆಗ್ರಹಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಇಂದು ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಶಾಸಕ ಲಾಲಾಜಿ ಮೆಂಡನ್ ಅವರು, ಘಟನೆಯಲ್ಲಿ ಇಬ್ಬರು ಅಸುನೀಗಿದ್ದು ನಾಲ್ಕೈದು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಆ ಪೈಕಿ ಇಬ್ಬರು ಶೇ.90ರಷ್ಟು ಸುಟ್ಟಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕ ವಾಗಿದೆ. ಗಾಯಾಳುಗಳಿಗೆ ರಾಜ್ಯ ಸರಕಾರ ಉಚಿತವಾಗಿ ಚಿಕಿತ್ಸೆ ನೀಡಬೇಕು’ ಎಂದು ಒತ್ತಾಯಿಸಿದರು. ಹಾಗೂ ಮೃತಪಟ್ಟ ಇಬ್ಬರಿಗೆ ಸರಕಾರ ಕೂಡಲೇ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ಇದೇ ವೇಳೆ ಸದಸ್ಯರ ಪ್ರಸ್ತಾಪಕ್ಕೆ ಉತ್ತರ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಅವರು, ‘ಕಾಪುವಿನ ಗುಜರಿ ಅಂಗಡಿಯಲ್ಲಿ ಅನಧಿಕೃತವಾಗಿ ಗ್ಯಾಸ್ ಕಟರ್ ಬಳಕೆ ಹಿನ್ನೆಲೆಯಲ್ಲಿ ಅನಿಲ ಸ್ಫೋಟದಿಂದ ದುರಂತ ಸಂಭವಿಸಿದೆ. ಇಬ್ಬರು ಅಸುನೀಗಿದ್ದು, ನಾಲ್ಕೈದು ಮಂದಿ ಗಾಯಗೊಂಡಿದ್ದಾರೆ. ಈ ಸಂಬಂಧ ಕೂಡಲೇ ವರದಿ ತರಿಸಿಕೊಂಡು ಪರಿಹಾರ ವಿತರಣೆ, ಗಾಯಾಳುಗಳಿಗೆ ಚಿಕಿತ್ಸೆ ಕಲ್ಪಿಸುವ ಸಂಬಂಧ ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು. | |