ಉಡುಪಿ: ಇಸ್ಲಾಮಿಕ್ ವೆಲ್ಫೇರ್ ಸೊಸೈಟಿಯ ನಿರ್ಮಾತೃ ಶೇಖ್ ಶರ್ಫುದ್ದೀನ್ ದಾವೂದ್ ನಿಧನ
ಉಡುಪಿ; ಹಿರಿಯ ಸಾಮಾಜಿಕ ಕಾರ್ಯಕರ್ತ ಶೇಖ್ ಶರ್ಫುದ್ದೀನ್ ದಾವೂದ್ ಅವರು ಇಂದು ಬೆಳಿಗ್ಗೆ ಬೆಂಗಳೂರಿನ ತನ್ನ ಮಗನ ಮನೆಯಲ್ಲಿ ತನ್ನ 75ನೇ ವಯಸ್ಸಿನಲ್ಲಿ ನಿಧನರಾದರು.
ತನ್ನ ಜೀವನದುದ್ದಕ್ಕೂ ಉಡುಪಿಯ ವಿವಿಧ ಸಾಮಾಜಿಕ, ಸಾಮುದಾಯಿಕ ಸಂಘ ಸಂಸ್ಥೆಗಳ ಜೊತೆಗೂಡಿ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಎಂಬತ್ತರ ದಶಕದ ಆರಂಭದಲ್ಲಿ ಉಡುಪಿಯಲ್ಲಿ ಅಸ್ಥಿತ್ವಕ್ಕೆ ಬಂದ ಬಡ್ಡಿ ರಹಿತ ಹಣಕಾಸು ವ್ಯವಹಾರ ಸಂಸ್ಥೆ ಇಸ್ಲಾಮಿಕ್ ವೆಲ್ಫೇರ್ ಸೊಸೈಟಿಯನ್ನು ಕಟ್ಟಿ ಬೆಳೆಸುವಲ್ಲಿ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದರು.
ಸುಮಾರು 25 ವರ್ಷಗಳ ಕಾಲ ಈ ಸಂಸ್ಥೆಯ ಕೋಶಾಧಿಕಾರಿಯಾಗಿದ್ದ ಅವರು ಯಾವುದೇ ಸಂಬಳ ಪಡೆಯದೆ ಪೂರ್ಣಾವಧಿ ಕಾರ್ಯಕರ್ತರಾಗಿ ಸಂಸ್ಥೆಗೆ ತನ್ನ ಸೇವೆ ನೀಡಿದರು. ಆ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಮುಸ್ಲಿಮೇತರರು ಕೂಡಾ ಸಂಸ್ಥೆಯಿಂದ ಲಾಭಾನ್ವಿತರಾಗುವಂತೆ ನೋಡಿ ಕೊಂಡರು. ಮುಂದೆ ಈ ಸಂಸ್ಥೆ ಇಸ್ಲಾಮಿಕ್ ವೆಲ್ಫೇರ್ ಕ್ರೆಡಿಟ್ ಕೊಪರೇಟಿವ್ ಸೊಸೈಟಿ ಎಂದು ಪರಿವರ್ತನೆಗೊಂಡಾಗಲು ಅದರೊಂದಿಗೆ ಅವರು ತನ್ನ ಕೊನೆಯ ದಿನಗಳ ತನಕ ಸೇವೆ ನೀಡಿದರು.
ಎಪ್ಪತ್ತರ ದಶಕದಲ್ಲಿ ಉಡುಪಿ ಜಾಮಿಯ ಮಸೀದಿಯ ಆಡಳಿತವನ್ನು ಪಾರದರ್ಶಕ ಹಾಗೂ ಜವಾಬ್ದಾರಿ ಪ್ರಜ್ಞೆಯಿಂದ ಮುನ್ನಡೆಸಲು ಪ್ರಯತ್ನಿಸಿದ ಸಮೂಹದ ಪ್ರಮುಖ ಭಾಗವಾಗಿದ್ದು ಮಸೀದಿಯ ಬೆಳವಣಿಗೆಯಲ್ಲಿ ತನ್ನ ಸೇವೆ ಸಲ್ಲಿಸಿದರು. ಮಸೀದಿಯ ಕೋಶಾಧಿಕಾರಿಯಾಗಿ ಆಡಳಿತ ಮಂಡಳಿಯ ಸದಸ್ಯರಾಗಿ ಸುಮಾರು ನಲವತ್ತು ವರ್ಷಗಳ ಕಾಲ ತನ್ನ ಸೇವೆ ನೀಡಿದರು. ಜಮಾಅತೆ ಇಸ್ಲಾಮಿ ಹಿಂದ್ ಇದರ ಉಡುಪಿ ನಗರ ವರ್ತುಲ, ಮಾನವೀಯ ಸೇವೆ ಮತ್ತು ಪರಿಹಾರ ಸಂಸ್ಥೆ ಎಚ್.ಆರ್.ಎಸ್’ನ ಆರಂಭಿಕ ಸಮಯದಲ್ಲಿ ರಾಜ್ಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಎಂಬತ್ತರ ದಶಕದಲ್ಲಿ ಉದಯಿಸಿದ ಉಡುಪಿ ಮುಸ್ಲಿಮರ ಪ್ರತಿಷ್ಠಿತ ಸಮಾಜ ಸೇವೆ ಸಂಸ್ಥೆ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ ಇದರ ಸ್ಥಾಪಕ ಸದಸ್ಯರಾಗಿ ಸಕ್ರಿಯ ಸೇವೆ ನೀಡಿದರು. ಶರ್ಫುದ್ದೀನ್ ಮತ್ತು ನಗರದ ಚಿರಪರಿಚಿತ ವ್ಯಕ್ತಿಯಾಗಿದ್ದ ದಿ. ಅಬ್ದುಸ್ಸಲಾಮ್ ಇವರುಗಳು ಹಿರಿಯರಾಗಿದ್ದರೂ ಕೂಡಾ ವಿಧ್ಯಾರ್ಥಿ, ಯುವಕರಲ್ಲಿ ನೈತಿಕತೆ, ಸೇವಾ ಮನೋಭಾವ, ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವ ಉದ್ದೇಶದಿಂದ ಅವರನ್ನು ಹುರಿದುಂಬಿಸಿ, ಒಂದು ಗೂಡಿಸಿ ಉಡುಪಿಯಲ್ಲಿ ವಿಧ್ಯಾರ್ಥಿ ಯುವಕರ ರಾಷ್ಟ್ರೀಯ ಸಂಘಟನೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (SIO) ಶಾಖೆ ಆರಂಭಿಸಲು ಪ್ರೇರೆಪಿದರು.
ಇಂದು ಈ ಸಂಘಟನೆ ಜಿಲ್ಲಾದ್ಯಂತ ಪಸರಿಸಿ ಸಕಾರಾತ್ಮಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ನೇರ ನುಡಿಯ ಸಹೃದಯಿ ವ್ಯಕ್ತಿಯಾಗಿದ್ದ ಅವರು ಜನರೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತಿದ್ದರು. ಅವರ ಮನೆ ಸಾಮಾಜಿಕ ಚಟುವಟಿಕೆಗಳ ಕಾರ್ಯಕರ್ತರ ಕಛೇರಿಯಂತೆಯೇ ಇತ್ತು. ಅವಿಭಕ್ತ ಕುಟುಂಬವಾಗಿದ್ದ ಅವರ ಕುಟುಂಬದಲ್ಲಿ ಅವರು ಎರಡನೆಯವರಾಗಿದ್ದರೂ ಕುಟುಂಬದ ಹಿರಿಯನಂತೆ ಕುಟುಂಬದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಸುತ್ತಿದ್ದ ರೀತಿ ಇತರರಿಗೂ ಮಾದರಿಯಾಗಿತ್ತು. ಮಸೀದಿಯಲ್ಲಿ ಯಾರೇ ಪ್ರವಾಸಿಗರು ಅಥವ ಸಂದರ್ಶಕರು ಬಂದರೆ ತನ್ನ ಮನೆಗೆ ಕರೆದುಕೊಂಡು ಹೋಗಿ ಉಣಬಡಿಸುವುದು ಇತ್ತಿಚೆಗಿನವರೆಗೂ ಅವರ ದಿನಚರಿಯ ಭಾಗವಾಗಿತ್ತು. ಅವರು ಪತ್ನಿ, ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಬಿಲಾಲ್ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.