ಜಲ ಇದ್ದರೆ ಜೀವ, ನಿತ್ಯವೂ ಜಲ ದಿನವಾಗಬೇಕು-ಜಿಲ್ಲಾಧಿಕಾರಿ
ಉಡುಪಿ, ಮಾ.22: ಮಾನವ ಸೇರಿದಂತೆ ಎಲ್ಲಾ ಜೀವ ಸಂಕುಲಕ್ಕೆ ಜೀವ ಜಲವಾಗಿರುವ ನೀರಿನ ಮಹತ್ವ ಮತ್ತು ಅದರ ಸಂರಕ್ಷಣೆ ಕುರಿತಂತೆ ಪ್ರತೀ ಮನೆ ಮನೆಯಲ್ಲಿ ಜಾಗೃತಿ ಮೂಡಬೇಕು. ಜಲ ಇದ್ದರೆ ಮಾತ್ರ ಜೀವ ಎಂಬ ಅರಿವು ಎಲ್ಲರಲ್ಲೂ ಮೂಡಬೇಕು. ಪ್ರತಿನಿತ್ಯವೂ ನೀರಿನ ಸದ್ಬಳಕೆ ಮತ್ತು ಸಂರಕ್ಷಣೆಯ ಮಹತ್ವದ ಬಗ್ಗೆ ಪ್ರತಿಯೊಬ್ಬರೂ ಅರಿತಿರಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಅವರು ಇಂದು ನಗರಸಭೆಯ ಸಭಾಂಗಣದಲ್ಲಿ, ಜಿಲ್ಲಾಡಳಿತ, ಉಡುಪಿ ನಗರಸಭೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಮತ್ತು ನೆಹರು ಯುವ ಕೇಂದ್ರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಮಳೆ ಬಿದ್ದರೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ತಲೆದೂರುತ್ತಿದೆ. ಮಳೆ ನೀರನ್ನು ಸಮರ್ಪಕ ರೀತಿಯಲ್ಲಿ ಸಂರಕ್ಷಣೆ ಮಾಡುವ ಮೂಲಕ ಈ ಸಮಸ್ಯೆಯನ್ನು ತಡೆಯಬಹುದಾಗಿದ್ದು, ಕಟ್ಟಡ ಮತ್ತು ಗೃಹ ನಿರ್ಮಾಣಕ್ಕೆ ಲೈಸೆನ್ಸ್ ನೀಡುವ ಸಂದರ್ಭದಲ್ಲಿ ಮಳೆ ನೀರು ಕೊಯ್ಲು ಕಡ್ಡಾಯ ಎಂಬ ನಿಯಮಗಳಿದ್ದರೂ ಸಹ ಅವುಗಳ ಪಾಲನೆ ಆಗುತ್ತಿಲ್ಲ. ಈ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಮತ್ತು ನಿಯಮಗಳ ಸಮರ್ಪಕ ಅನುಷ್ಠಾನವಾಗಿರುವ ಕುರಿತು ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರದ ರೀತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಈಗಾಗಲೇ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ಬಜೆ ಜಲಾಶಯದಲ್ಲಿನ ನೀರಿನ ಸದುಪಯೋಗ ಹಾಗೂ ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣದಿಂದ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಮಾತನಾಡಿ, ಜಗತ್ತಿನ 2.2 ಶತಕೋಟಿ ಜನ ಶುದ್ಧ ಕುಡಿಯುವ ನೀರಿನ ಕೊರತೆ ಎದುರಿಸುತ್ತಾರೆ. ಆಹಾರ ಇಲ್ಲವಾದರೂ ಕೂಡಾ ಕೆಲವು ದಿನ ಬದುಕಬಹುದು ಆದರೆ ನೀರು ಇಲ್ಲವಾದಲ್ಲಿ ಕಷ್ಟ. ಆದ್ದರಿಂದ ಪ್ರತಿಯೊಬ್ಬರೂ ನೀರಿನ ಮಹತ್ವ ಅರಿಯಬೇಕು ಎಂದರು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಮಾತನಾಡಿ, ನಗರಸಭಾ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಕಟ್ಟಡ ಗಳಲ್ಲಿ ಅನುಮತಿ ನೀಡುವ ಸಂದರ್ಭದಲ್ಲೇ ಮಳೆನೀರು ಕೊಯ್ಲು ಕಡ್ಡಾಯ ಕುರಿತಂತೆ ಈಗಾಗಲೇನಿಯಮಗಳಿದ್ದು ಇವುಗಳ ಪಾಲನೆಯಾಗುತ್ತಿರುವ ಕುರಿತಂತೆ ಕಟ್ಟನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ನಗರಸಭೆ ಕಟ್ಟಡದಲ್ಲಿ ಮಳೆ ನೀರು ಕೊಯ್ಲು ಅಳವಡಿಸಿದ್ದು, ಪುರಭವನದಲ್ಲಿ ಸಹ ಇದನ್ನು ಅಳವಡಿಸ ಲಾಗುವುದು. ಮಳೆ ನೀರು ಕೊಯ್ಲು ಅಳವಡಿಸುವ ಸಾರ್ವಜನಿಕರನ್ನು ನಗರಸಭೆಯಿಂದ ಪ್ರೋತ್ಸಾಹಿಸ ಲಾಗುವುದು. ನಗರಸಭಾ ವ್ಯಾಪ್ತಿಯಲ್ಲಿ ಈಗಾಗಲೇ 19000 ಕ್ಕೂ ಅಧಿಕ ನೀರಿನ ಸಂಪರ್ಕ ನೀಡಿದ್ದರೂ ಸಹ ಇನ್ನೂ ಹಲವು ಅರ್ಜಿಗಳು ಬಾಕಿ ಇವೆ. ಮುಂದಿನ ಪೀಳಿಗೆಗೆ ನೀರನ್ನು ಉಳಿಸಲು, ನೀರಿನ ಮಿತ ಬಳಕೆ ಮತ್ತು ಸಂರಕ್ಷಣೆ ಅತ್ಯಗತ್ಯ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಜಲ ಜಾಗೃತಿ ಘೋಷಣಾ ಪತ್ರ ಬಿಡುಗಡೆ ಮಾಡಿದರು. ನಗರಸಭೆ ಉಪಾಧ್ಯಕ್ಷೆ ಲಕ್ಷಿö್ಮ ಮಂಜುನಾಥ್, ಕೊಳವೆ ಬಾವಿ ಜಲ ಮರುಪೂರಣ ಮಳೆ ನೀರು ಶೇಖರಣಾ ಘಟಕ ಕಿರು ಚಿತ್ರಕ್ಕೆ ಚಾಲನೆ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಜಲ ಸಂರಕ್ಷಣೆ ಮಾಹಿತಿ ಪತ್ರ ಬಿಡುಗಡೆ ಮಾಡಿದರು. ಮಳೆ ನೀರು ಕೊಯ್ಲು ಘಟಕ ಅಳವಡಿಸಿದ ಸಾರ್ವಜನಿಕರನ್ನು ಅಭಿನಂದಿಸಲಾಯಿತು. ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ವಿಲ್ಫೆçಡ್ ಡಿ ಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಜೋಸೆಫ್ ರೆಬೆಲ್ಲೂ ಅಂತರ್ಜಲ ಸಂರಕ್ಷಣೆ ಮತ್ತು ಜಲ ಮರುಪೂರಣ ಬಗ್ಗೆ ಮಾಹಿತಿ ನೀಡಿದರು. ಪೌರಾಯುಕ್ತ ಉದಯಶೆಟ್ಟಿ ಸ್ವಾಗತಿಸಿದರು. ನಗರಸಭೆ ಸಿಬ್ಬಂದಿ ಸುಧಾಕರ್ ನಿರೂಪಿಸಿ, ವಂದಿಸಿದರು.