ಐವನ್ ಡಿಸೋಜ, ಪತ್ನಿಗೆ ಕೋವಿಡ್
ಮಂಗಳೂರು: ವಿಧಾನ ಪರಿಷತ್ನ ಮಾಜಿ ಸದಸ್ಯ ಐವನ್ ಡಿಸೋಜ ಹಾಗೂ ವೈದ್ಯೆಯಾಗಿರುವ ಅವರ ಪತ್ನಿ ಡಾ.ಕವಿತಾ ಅವರಿಗೆ ಕೋವಿಡ್–19 ಸೋಂಕು ತಗುಲಿರುವುದು ದೃಢಪಟ್ಟಿದೆ. ಇಬ್ಬರೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಐವನ್ ಡಿಸೋಜ ಮತ್ತು ಅವರ ಪತ್ನಿ ಸ್ವಯಂಪ್ರೇರಿತರಾಗಿ ಕೋವಿಡ್ ತಪಾಸಣೆಗಾಗಿ ಶುಕ್ರವಾರ ಸಂಜೆ ಗಂಟಲಿನ ದ್ರವದ ಮಾದರಿಗಳನ್ನು ನೀಡಿದ್ದರು. ಶನಿವಾರ ವರದಿಗಳು ಲಭಿಸಿದ್ದು, ಇಬ್ಬರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮಾಹಿತಿಯನ್ನು ಐವನ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ನಮಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಆದರೂ, ನಾನು ಮತ್ತು ನನ್ನ ಪತ್ನಿ ಸ್ವಯಂಪ್ರೇರಿತರಾಗಿ ಪರೀಕ್ಷೆಗೆ ಮಾದರಿಗಳನ್ನು ನೀಡಿದ್ದೆವು. ವರದಿ ಬಂದಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ. ಆತಂಕಪಡುವ ಅಗತ್ಯವಿಲ್ಲ. ನಮ್ಮನ್ನು ಭೇಟಿಯಾಗಲು ಯಾರೂ ಬರಬೇಡಿ ಎಂದು ಸ್ನೇಹಿತರು ಹಾಗೂ ಹಿತೈಷಿಗಳಲ್ಲಿ ಮನವಿ ಮಾಡುತ್ತೇನೆ’ ಎಂದು ಐವನ್ ಟ್ವೀಟ್ ಮಾಡಿದ್ದಾರೆ.
ಸಭೆಗಳಲ್ಲಿ ಭಾಗಿಯಾಗಿದ್ದರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಅವರು ಪದಗ್ರಹಣದ ಬಳಿಕ ಶುಕ್ರವಾರ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದರು. ಅವರೊಂದಿಗೆ ಹಲವು ಸಭೆಗಳಲ್ಲಿ ಐವನ್ ಡಿಸೋಜ ಭಾಗವಹಿಸಿದ್ದರು.
ಡಿ.ಕೆ.ಶಿವಕುಮಾರ್ ಅವರು ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಅವರನ್ನು ಭೇಟಿ ಮಾಡಿದ್ದಾಗ ಐವನ್ ಕೂಡ ಜೊತೆಗಿದ್ದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲೂ ಭಾಗವಹಿಸಿದ್ದರು. ಸಲೀಂ ಅಹಮ್ಮದ್ ನೇತೃತ್ವದಲ್ಲಿ ನಗರದ ಆಟೊ ಚಾಲಕರಿಗೆ ಪಡಿತರ್ ಕಿಟ್ಗಳನ್ನು ವಿತರಣೆ ಮಾಡಿದ್ದರು.