ಬಂಡಾಯ ಶಾಸಕರು ಪಕ್ಷಕ್ಕೆ ವಾಪಸ್ಸಾದರೆ ಸ್ವಾಗತಿಸುತ್ತೇನೆ: ಗೆಹ್ಲೋಟ್
ಜೈಸಲ್ಮಾರ್: ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ನಿಲ್ಲಿಸಬೇಕು ಎಂದು ಒತ್ತಾಯಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ , ಸಚಿನ್ ಪೈಲಟ್ ಬಣದ ಬಂಡಾಯ ಶಾಸಕರು ಮರಳಿ ಪಕ್ಷಕ್ಕೆ ಬಂದರೆ ಸ್ವಾಗತಿಸುವುದಾಗಿ ಹೇಳಿದ್ದಾರೆ.
ಒಂದು ವೇಳೆ ಭಿನ್ನಮತೀಯ ಶಾಸಕರನ್ನು ಕಾಂಗ್ರೆಸ್ ಹೈಕಮಾಂಡ್ ಕ್ಷಮಿಸಿದರೆ, ಅವರನ್ನು ತಾವು ಕೂಡಾ ಕ್ಷಮಿಸುವುದಾಗಿ ಸುದ್ದಿಗಾರರ ಪ್ರಶ್ನೆಗೆ ಅಶೋಕ್ ಗೆಹ್ಲೋಟ್ ಉತ್ತರಿಸಿದರು.
ಈ ತಿಂಗಳಲ್ಲಿ ಸಚಿನ್ ಪೈಲಟ್ ನಡುವೆ ಭಿನ್ನಾಭಿಪ್ರಾಯ ಮೂಡುತ್ತಿದ್ದಂತೆ ಅವರೊಬ್ಬ ಅಪ್ರಯೋಜಕ ಎಂದು ತೀಕ್ಷ್ಣವಾಗಿ ಮಾಜಿ ಉಪಮುಖ್ಯಮಂತ್ರಿ ವಿರುದ್ಧ ಅಶೋಕ್ ಗೆಹ್ಲೋಟ್ ಕಿಡಿಕಾರಿದ್ದರು.
ಕಾಂಗ್ರೆಸ್ ನಾಯಕತ್ವ ಏನನ್ನು ಬಯಸುತ್ತದೆಯೋ ಅದನ್ನು ಮಾಡುತ್ತೇನೆ. ರಾಜಸ್ಥಾನದಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾದ ಕ್ರೆಡಿಟ್ ಪಕ್ಷಕ್ಕೆ ಸಲ್ಲಬೇಕು ಎಂದು ಗೆಹ್ಲೋಟ್ ಹೇಳಿದರು.
ಜೈಸಲ್ಮಾರ್ ನ ಸೂರ್ಯಗ್ರಹ ರೆಸಾರ್ಟ್ ನಲ್ಲಿ ನಿನ್ನೆ ಇಡೀ ರಾತ್ರಿ ತಂಗಿದ್ದ ನಿಷ್ಠ ಶಾಸಕರನ್ನು ಆಗಸ್ಟ್ 14ರಿಂದ ಆರಂಭವಾಗಲಿರುವ ವಿಧಾನಸಭಾ ಅಧಿವೇಶನದ ಹಿನ್ನೆಲೆಯಲ್ಲಿ ಸ್ಥಳಾಂತರಿಸಲಾಗುತ್ತಿದ್ದು, ಜೈಪುರಕ್ಕೆ ಮುಖ್ಯಮಂತ್ರಿ ವಾಪಾಸ್ಸಾಗುತ್ತಿದ್ದಾರೆ.
ಯಾರೊಬ್ಬರೊಂದಿಗೂ ನಾವು ಜಗಳವಾಡುವುದಿಲ್ಲ, ಪ್ರಜಾಪ್ರಭುತ್ವದಲ್ಲಿ ತತ್ವ ಸಿದ್ದಾಂತ, ನೀತಿಗಳು ಮತ್ತು ಕಾರ್ಯಕ್ರಮಗಳ ವಿರುದ್ಧ ಹೋರಾಟ ನಡೆಯುತ್ತಲೇ ಇರುತ್ತದೆ. ಆದರೆ, ಸರ್ಕಾರವನ್ನು ಪತನಗೊಳಿಸಬಾರದು. ಈ ನಿಟ್ಟಿನಲ್ಲಿ ರಾಜಸ್ಥಾನದಲ್ಲಿ ಮೋದಿ ಮಾಡುತ್ತಿರುವ ಪ್ರಯತ್ನಗಳನ್ನು ನಿಲ್ಲಿಸಬೇಕು ಎಂದು ಶಾಸಕರು ತಂಗಿದ್ದ ಹೋಟೆಲ್ ಹೊರಗೆ ಅಶೋಕ್ ಗೆಹ್ಲೋಟ್ ಹೇಳಿದರು.
ಜೈಸಲ್ಮಾರ್ ನಲ್ಲಿ ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ದು, ಗೆಹ್ಲೋಟ್ ಹಾಗೂ ಸಚಿವರು ಹೆಚ್ಚಿನ ಸಮಯವನ್ನು ರಾಜ್ಯ ರಾಜಧಾನಿಯಲ್ಲಿ ಕಳೆಯುವ ಸಾಧ್ಯತೆಯಿದೆ.