ಉಡುಪಿ: ಗ್ರಾಮ ಪಂಚಾಯತ್‌ಗಳಿಗೆ ಆಡಳಿತ ಸಮಿತಿ ರಚನೆ: ಜಿಲ್ಲಾ ಬಿಜೆಪಿ ಸ್ವಾಗತ
ಉಡುಪಿ: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಕಾಯ್ದೆ 1994ರ ಪ್ರಕಾರ ರಾಜ್ಯಾಧ್ಯಂತ ಆಡಳಿತ ಅವಧಿ ಮುಗಿಯಲಿರುವ ಗ್ರಾಮ ಪಂಚಾಯತ್‌ಗಳ ವ್ಯವಸ್ಥಿತ ಆಡಳಿತಕ್ಕಾಗಿ ಮುಂದಿನ 6 ತಿಂಗಳ ಅವಧಿಗೆ ನಾಮ ನಿರ್ದೇಶಿತ ಸದಸ್ಯರ ನೇಮಕದೊಂದಿಗೆ ಆಡಳಿತ ಸಮಿತಿ ರಚಿಸುವ ರಾಜ್ಯ ಸರ್ಕಾರದ ತೀರ್ಮಾನವನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಕಲಂ ೮ ರ ಪ್ರಕಾರ ಗ್ರಾಮ ಪಂಚಾಯತ್‌ಗಳಿಗೆ ನಾಮ ನಿರ್ದೇಶಿತ ಸದಸ್ಯರನ್ನು ನೇಮಿಸಿ, ಆಡಳಿತ ಸಮಿತಿ ರಚಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳು ಹೊಂದಿರುವ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಪ್ರಚಲಿತ ವಿಧ್ಯಾಮಾನದಲ್ಲಿ ನಾಗರಿಕ ಸಮಸ್ಯೆಗಳ ಪರಿಹಾರ ಹಾಗೂ ಮೂಲಭೂತ ಸೌಕರ್ಯಗಳ ಆದ್ಯತೆಗೆ ಒತ್ತು ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಈ ಸಮಯೋಚಿತ ನಿರ್ದಾರದ ಬಗ್ಗೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ಅಪಸ್ವರ ಎತ್ತುತ್ತಿರುವುದು ಖಂಡನೀಯ ಎಂದು ಉಡುಪಿ ಜಿಲ್ಲಾ ಬಿಜೆಪಿ ವಕ್ತಾರ ಗುರು ಪ್ರಸಾದ್ ಶೆಟ್ಟಿ ಕಟಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊರೊನಾ ವಿಪತ್ತಿನ ಈ ಸಂದರ್ಭದಲ್ಲಿ ಗ್ರಾಮಾಂತರ ಪ್ರದೇಶಗಳ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಆಡಳಿತಾಧಿಕಾರಿಯನ್ನು ನೇಮಿಸುವ ಬದಲು ಪಂಚಾಯತ್ ರಾಜ್ ವ್ಯವಸ್ಥೆಗೆ ಇನ್ನಷ್ಟು ಶಕ್ತಿ ತುಂಬುವ ಸ್ವದುದ್ದೇಶದಿಂದ ನಾಮ ನಿರ್ದೇಶಿತ ಸದಸ್ಯರ ನೇಮಕದೊಂದಿಗೆ ಗ್ರಾಮ ಪಂಚಾಯತ್‌ಗೆ ಆಡಳಿತ ಸಮಿತಿಯನ್ನು ರಚಿಸಿ ವ್ಯವಸ್ಥಿತವಾಗಿ ಆಡಳಿತ ನಡೆಸುವ ಪ್ರಕ್ರಿಯೆಗೆ ಚಾಲನೆ ನೀಡುವ ರಾಜ್ಯ ಸರ್ಕಾರದ ತೀರ್ಮಾನ ಸಮಯೋಚಿತವಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.