| ಬೆಂಗಳೂರು, ಮಾ.12: ಅಗ್ರಿಗೋಲ್ಡ್ ಸಂಸ್ಥೆ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದ ರಾಮನಗರ ಉಪ ವಿಭಾಗಾಧಿಕಾರಿಯನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಅಗ್ರಿಗೋಲ್ಡ್ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಅಗ್ರಿಗೋಲ್ಡ್ ಗ್ರಾಹಕರು ಮತ್ತು ಏಜೆಂಟರ ಕಲ್ಯಾಣ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ ವಿಭಾಗೀಯ ಪೀಠ, ಕೋರ್ಟ್ಗೆ ತಪ್ಪು ಮಾಹಿತಿ ನೀಡಿ, ನ್ಯಾಯಾಂಗ ನಿಂದನೆ ಎಸಗಿರುವವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದೆ.
ಮಾತ್ರವಲ್ಲದೆ, ಅಂತಿಮವಾಗಿ ಉಪ ವಿಭಾಗಾಧಿಕಾರಿಯ ಪ್ರಮಾಣಪತ್ರ ದಾಖಲಿಸಿಕೊಂಡ ಪೀಠ, ಅವರ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಜಾಗರೂಕರಾಗಿ ಕರ್ತವ್ಯ ನಿರ್ವಹಿಸ ಬೇಕೆಂದು ಎಸಿ ಸಿ.ಮಂಜುನಾಥ್ ಅವರಿಗೆ ನ್ಯಾಯಾಲಯ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು. ಕಳೆದ ವಿಚಾರಣೆ ವೇಳೆ ನ್ಯಾಯಾಲಯ ನೀಡಿದ್ದ ಸೂಚನೆಯಂತೆ ರಾಮನಗರ ಉಪ ವಿಭಾಗಾಧಿಕಾರಿ ಸಿ.ಮಂಜುನಾಥ್ ಖುದ್ದು ಹಾಜರಿದ್ದರು. ಸರಕಾರದ ಪರ ವಕೀಲರು, ಸಂವಹನ ಕೊರತೆಯಿಂದಾಗಿ ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ಒದಗಿಸುವಲ್ಲಿ ಲೋಪವಾಗಿದೆ. ಈ ಬಗ್ಗೆ ವಿವರಣೆ ನೀಡಿ ಮಾ.5ರಂದು ಎಸಿ ಪ್ರಮಾಣ ಪತ್ರ ಸಲ್ಲಿಸಿದ್ದು, ತಮ್ಮ ತಪ್ಪಿಗಾಗಿ ಬೇಷರತ್ ಕ್ಷಮೆಯನ್ನೂ ಯಾಚಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. | |