ಉಕ್ರೇನ್: ನೀರು ಸರಬರಾಜು ಸ್ಥಗಿತ, ನೀರಿಗಾಗಿ ಹಿಮ ಕರಗಿಸುತ್ತಿರುವ 700 ಭಾರತೀಯ ವಿದ್ಯಾರ್ಥಿಗಳು!
ನವದೆಹಲಿ: ಯುದ್ಧ ಪೀಡಿತ ಉಕ್ರೇನ್ ನ ಸುಮಿ ನಗರದಲ್ಲಿ ಸುಮಾರು 700ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಅನ್ನ ಆಹಾರವಿಲ್ಲದೆ ಸಂಕಷ್ಟಕ್ಕೆ ಪರದಾಡುತ್ತಿದ್ದಾರೆ. ಇದೀಗ ನೀರಿನ ಸರಬರಾಜು ಬಂದ್ ಆಗಿದ್ದು ಕುಡಿಯುವ ನೀರಿಗಾಗಿ ಹಿಮವನ್ನು ಕರಗಿಸುತ್ತಿದ್ದಾರೆ.
ಉಕ್ರೇನ್‌ನ ಸುಮಿ ಸ್ಟೇಟ್ ಯೂನಿವರ್ಸಿಟಿಯ ಭಾರತೀಯ ವಿದ್ಯಾರ್ಥಿಗಳು ಕುಡಿಯುವ ಉದ್ದೇಶಕ್ಕಾಗಿ ಹಿಮವನ್ನು ಕರಗಿಸುತ್ತಿದ್ದಾರೆ. ವಿಶ್ವವಿದ್ಯಾನಿಲಯದ ಸುಮಾರು 700 ಭಾರತೀಯ ವಿದ್ಯಾರ್ಥಿಗಳು ಕೈವ್‌ನಿಂದ ಸುಮಾರು 350 ಕಿಮೀ ದೂರದಲ್ಲಿರುವ ಸುಮಿಯಲ್ಲಿ ಸಿಲುಕಿಕೊಂಡಿದ್ದಾರೆ. ಕೇವಲ 48 ಕಿಮೀ ದೂರದಲ್ಲಿರುವ ರಷ್ಯಾವನ್ನು ತಲುಪಲು ತೊರೆಯಲು ಅನುಮತಿ ಸಿಕ್ಕಿಲ್ಲ.
ನೀರಿನ ಸಮಸ್ಯೆಯಿಂದಾಗಿ ಅವರಲ್ಲಿ ಹಲವರು 2-4 ಕಿ.ಮೀ ದೂರ ನಡೆದು ನೀರು ತರಲು ಕೈ ಪಂಪ್‌ಗಳನ್ನು ಹುಡುಕಬೇಕಾಯಿತು. ನಿನ್ನೆಯವರೆಗೂ ನಾವು ನೀರು ತರಲು 2-4 ಕಿಮೀ ನಡೆಯುತ್ತಿದ್ದೆವು, ಆದರೆ ಅದೃಷ್ಟವಶಾತ್ ಹಿಮಪಾತವಾಗಿದೆ. ಅದನ್ನು ಕರಗಿಸಿ ಕುಡಿಯಲು ಬಳಸುತ್ತಿದ್ದೇವೆ ಎಂದು ಐದನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ದುಮ್ಮಾಸಿಯಾ ಮರಿಯಾ ಮುನಾಫ್ ಹೇಳಿದರು.
ಸಂಗ್ರಹಿಸಿರುವ ಆಹಾರ ಖಾಲಿಯಾಗುತ್ತಿದೆ ಆದರೆ ಭಾರತೀಯರು ನಡೆಸುತ್ತಿರುವ ಫಾರ್ಮಸಿ ಅಂಗಡಿಗಳು ಆಲೂಗಡ್ಡೆ ಮತ್ತು ಇತರ ಖಾದ್ಯಗಳನ್ನು ಒದಗಿಸುತ್ತಿದೆ. ಇದನ್ನು ಅಸಾಧಾರಣ ಸಂದರ್ಭಗಳಲ್ಲಿ ಉಳಿಸಲು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುತ್ತಿದೆ. ಅಪಾಯದ ಸೈರನ್ ಬಂದಾಗಲೆಲ್ಲಾ ನಾವು ಬಂಕರ್‌ಗಳಿಗೆ ತೆರಳುತ್ತೇವೆ. ಹಲವು ವಿದ್ಯಾರ್ಥಿಗಳು ಅಸ್ತಮಾ ದಾಳಿಗೆ ತುತ್ತಾಗಿದ್ದಾರೆ. ಕಳೆದ ಒಂಬತ್ತು ದಿನಗಳಿಂದ ಹಲವು ವಿದ್ಯಾರ್ಥಿಗಳು ಅಧಿಕ ರಕ್ತದೊತ್ತಡ ಮತ್ತು ಪ್ಯಾನಿಕ್ ಅಟ್ಯಾಕ್‌ನಿಂದ ಬಳಲುತ್ತಿದ್ದಾರೆ ಎಂದು ಗುಜರಾತ್‌ನ ಐದನೇ ವರ್ಷದ ಮತ್ತೊಬ್ಬ ಎಂಬಿಬಿಎಸ್ ವಿದ್ಯಾರ್ಥಿನಿ 23 ವರ್ಷದ ತಾಂಡೇಲ್ ಸ್ಮೃತಿ ನಟವರ್‌ಭಾಯ್ ಹೇಳುತ್ತಾರೆ.
ಉಕ್ರೇನ್-ರಷ್ಯಾ ಗಡಿಯಲ್ಲಿ ಸುಮಾರು 130 ಬಸ್‌ಗಳು ಸ್ಥಳಾಂತರಕ್ಕಾಗಿ ನಿಂತಿವೆ ಎಂದು ತಿಳಿದುಬಂದಿದೆ. ಆದರೆ ಭಾರತ ಸರ್ಕಾರ ಅಥವಾ ಉಕ್ರೇನಿಯನ್ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ‘ನಾವು ನಮ್ಮ ಬಟ್ಟೆಗಳನ್ನು ಪ್ಯಾಕ್ ಮಾಡಿದ್ದೇವೆ. ಹೊರಡಲು ಕಾಯುತ್ತಿದ್ದೇವೆ ಎಂದರು.