| ನವದೆಹಲಿ: ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಆದೇಶಿಸಲಾಗಿದೆ ಎಂಬ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಅವರು, ‘ಅಸಹಾಯಕ ವಿದ್ಯಾರ್ಥಿಗಳ ಜೊತೆಗಿನ ಇಂತಹ ನಾಚಿಕೆಗೇಡಿನ ವರ್ತನೆ ಇಡೀ ದೇಶಕ್ಕೆ ಮಾಡಿದ ಅವಮಾನ’ ಎಂದು ಕಿಡಿಕಾರಿದ್ದಾರೆ. ಆಪರೇಷನ್ ಗಂಗಾದ ಈ ಕಹಿ ಸತ್ಯವು ಮೋದಿ ಸರ್ಕಾರದ ನೈಜ ಮುಖವನ್ನು ತೆರೆದಿಟ್ಟಿದೆ’ ಎಂದೂ ರಾಹುಲ್ ಟೀಕಿಸಿದ್ದಾರೆ.
ರಷ್ಯಾ ಆಕ್ರಮಣದ ಹಿನ್ನೆಲೆಯಲ್ಲಿ ಉಕ್ರೇನ್ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆ ಹಿನ್ನೆಲೆಯಲ್ಲಿ ಫೆಬ್ರುವರಿ 24ರಿಂದ ಉಕ್ರೇನ್‌ನ ನೆರೆ ದೇಶಗಳಾದ ರೊಮೇನಿಯಾ, ಹಂಗೆರಿ, ಸ್ಲೋವಾಕಿಯಾ ಮತ್ತು ಪೋಲೆಂಡ್‌ನಿಂದ ಭಾರತೀಯರನ್ನು ತೆರವುಗೊಳಿಸಲಾಗುತ್ತಿದೆ. ಈ ಕಾರ್ಯಾಚರಣೆಗೆ ‘ಆಪರೇಷನ್ ಗಂಗಾ’ ಎಂದು ಹೆಸರಿಡಲಾಗಿದೆ.
ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಮುಂದುವರಿದಿದ್ದು, ಮಕ್ಕಳು ಸೇರಿದಂತೆ ನಾಗರಿಕರ ಸಾವುಗಳು ಸಂಭವಿಸುತ್ತಿವೆ. ಲಕ್ಷಾಂತರ ಜನರು ಉಕ್ರೇನ್‌ನಿಂದ ಅಕ್ಕಪಕ್ಕದ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ಇದು ಎರಡನೇ ಮಹಾಯುದ್ಧದ ಬಳಿಕ ಅತಿ ದೊಡ್ಡ ಮಾನವ ಬಿಕ್ಕಟ್ಟಾಗಿ ಪರಿಣಮಿಸಲಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ. | |