ವೈದ್ಯಕೀಯ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳಲು ಹಿಂದೆ ಆಡಳಿತ ನಡೆಸಿದ್ದ ಸರ್ಕಾರಗಳೇ ಕಾರಣ ಪ್ರಧಾನಿ ಆರೋಪ

ವಾರಾಣಸಿ: ವೈದ್ಯಕೀಯ ಶಿಕ್ಷಣಕ್ಕಾಗಿ ದೇಶದಿಂದ ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದೇಶಗಳಿಗೆ ತೆರಳಲು ಈ ಹಿಂದೆ ಆಡಳಿತ ನಡೆಸಿದ್ದ ಸರ್ಕಾರಗಳೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಆರೋಪಿಸಿದರು.

ಒಂದು ವೇಳೆ ದೇಶದಲ್ಲಿಯೇ ಅಗತ್ಯವಿರುವಷ್ಟು ವೈದ್ಯಕೀಯ ಕಾಲೇಜುಗಳು ಇದ್ದಿದ್ದರೆ ಇಲ್ಲಿಯೇ ಸೇರುತ್ತಿದ್ದರು ಎಂದು ಹೇಳಿದರು. ಯುದ್ಧ ಬಾಧಿತ ಉಕ್ರೇನ್‌ನಿಂದ ವಾಪಸಾದ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸುವಾಗ ಅವರು ಈ ಮಾತು ಹೇಳಿದರು.

ಒಂದು ಹಂತದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದವರ ಆಕ್ರೋಶವನ್ನೂ ಪ್ರಧಾನಿ ಎದುರಿಸ ಬೇಕಾಯಿತು. ‘ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಆಕ್ರೋಶ, ಕೋಪ ಸಹಜ. ಅವರು ವಿಪರೀತ ಚಳಿಯಲ್ಲಿ ಸಂಕಷ್ಟ ಸ್ಥಿತಿ ಎದುರಿಸಿ ಬಂದಿದ್ದಾರೆ’ ಎಂದು ಹೇಳಿದರು. ಒಂದು ಹಂತದಲ್ಲಿ ಪರಿಸ್ಥಿತಿ ಪೂರ್ಣ ಅರ್ಥವಾದ ಬಳಿಕ ಅವರೇ ನಮ್ಮೆಡೆಗೆ ಪ್ರೀತಿ ತೋರುತ್ತಾರೆ ಎಂದೂ ಮೋದಿ ಹೇಳಿದರು. ತದನಂತರ ವಿದ್ಯಾರ್ಥಿಗಳು, ಸಂಕಷ್ಟ ಕಾಲದಲ್ಲಿ ತಮ್ಮನ್ನು ವಾಪಸು ಕರೆತಂದಿದ್ದಕ್ಕಾಗಿ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದರು.

‘ಶಕ್ತಿಯುತ ಭಾರತ ಮಾತ್ರವೇ ಈ ಎಲ್ಲ ಸಮಸ್ಯೆಗಳಿಗೂ ಉತ್ತರ ಹೇಳಬಲ್ಲದು. ಯುವ ವಯಸ್ಸಿನಲ್ಲಿಯೇ ಇಂತದೊಂದು ಅನುಭವಕ್ಕೆ ಅವರು ಎದುರಾಗಬೇಕಾದ ವಿದ್ಯಾರ್ಥಿಗಳ ಬಗ್ಗೆ ತಮಗೆ ಅನುಕಂಪವಿದೆ’ ಎಂದರು. ಇಂತಹ ಸ್ಥಿತಿ ನಿರ್ಮಾಣವಾಗಲು ಈ ಹಿಂದೆ ಆಡಳಿತ ನಡೆಸಿದ್ದ ಸರ್ಕಾರಗಳೇ ಕಾರಣ. ನಮ್ಮ ಸರ್ಕಾರ ಹಿಂದಿನ ಎಲ್ಲ ತಪ್ಪುಗಳನ್ನು ಸರಿ‍ಪಡಿಸಲು ಕ್ರಮವಹಿಸುತ್ತಿದೆ. ಪ್ರತಿ ಜಿಲ್ಲೆಗೂ ಒಂದು ವೈದ್ಯ ಕಾಲೇಜು ಸ್ಥಾಪಿಸಲು ನಾವು ಯತ್ನಿಸುತ್ತಿದ್ದೇವೆ ಎಂದರು.

Leave a Reply

Your email address will not be published. Required fields are marked *

error: Content is protected !!