ಕೋವಿಡ್ ಹೋರಾಟಕ್ಕೆ ಸಹಕರಿಸದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಸಚಿವ ಸುಧಾಕರ್ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರದ ಕೋವಿಡ್ ವಿರುದ್ಧದ ಹೋರಾಟಕ್ಕೆ ಸಹಕರಿಸದ ಖಾಸಗಿ ಆಸ್ಪತ್ರೆಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಸೂಚಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆಗೂ ಚರ್ಚಿಸುವುದಾಗಿ ಅವರು ತಿಳಿಸಿದ್ದಾರೆ.

ಕೋವಿಡ್ ಗೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆ ಪರಿಶೀಲಿಸಲು ಸಚಿವರ ನೇತೃತ್ವದಲ್ಲಿ ಗುರುವಾರ ನಡೆದ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಲಾಯಿತು. ಸರ್ಕಾರಿ ಆಸ್ಪತ್ರೆಗಳಿಗೆ ಕೊರೋನಾ ರೋಗಿಗಳು ದಾಖಲಾಗುತ್ತಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾತಿ ನಿರಾಕರಿಸುವುದು, ಹೆಚ್ಚು ಶುಲ್ಕ ವಿಧಿಸುವುದು ಕಂಡುಬರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಕೆಪಿಎಂಇ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಯಾ ವಲಯದ ಜಂಟಿ ಆಯುಕ್ತರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಇದನ್ನು ಬಳಸಿಕೊಂಡು ಅಧಿಕಾರಿಗಳು ಕ್ರಮ ಜರುಗಿಸಬೇಕು. ಕ್ರಮ ಕೈಗೊಳ್ಳಲು ಪೊಲೀಸರ ಸಹಕಾರ ಪಡೆಯಬಹುದು. ಈ ಕುರಿತು ಮುಖ್ಯಮಂತ್ರಿಗಳ ಬಳಿಯೂ ಚರ್ಚೆ ಮಾಡುತ್ತೇನೆ ಎಂದು ಸಭೆಗೆ ತಿಳಿಸಿದರು.

ಸಚಿವರು ಬಿಬಿಎಂಪಿಯ ಪ್ರತಿ ವಲಯದ ಜಂಟಿ ಆಯುಕ್ತರೊಂದಿಗೆ ಮಾತನಾಡಿ, ಕೊರೋನಾ ಪತ್ತೆ ಪರೀಕ್ಷೆಯ ಬಗ್ಗೆ ಮಾಹಿತಿ ಪಡೆದರು. ಪ್ರತಿ ವಲಯದಲ್ಲಿ ಈಗ ನಡೆಯುತ್ತಿರುವ ಪರೀಕ್ಷೆ ಸಂಖ್ಯೆಯನ್ನು ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಕೊರೋನಾ ಪತ್ತೆ ಪರೀಕ್ಷೆಗೆ ಸಿಬ್ಬಂದಿ ಕೊರತೆ ಎದುರಾಗಿದೆ. ಇದರಿಂದಾಗಿ ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗಿದೆ. ಇದಕ್ಕಾಗಿ ಮೆಡಿಕಲ್ ಕಾಲೇಜುಗಳ ಎಂಬಿಬಿಎಸ್ ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬಹುದು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವಾಗಿ ಇಂಟರ್ನಲ್ ಅಂಕಗಳನ್ನು ನೀಡಬೇಕು. ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಕೊರೋನಾ ಕಾರ್ಯದಲ್ಲಿ ಭಾಗಿಯಾಗುವಂತೆ ಸೂಚಿಸಲು ತೀರ್ಮಾನಿಸಲಾಯಿತು.

ಬಿಬಿಎಂಪಿಯ ಪ್ರತಿ ಬೂತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಿ ಕೋವಿಡ್ ನಿಯಂತ್ರಣ ಚಟುವಟಿಕೆ ಗಳನ್ನು ಕೈಗೊಳ್ಳಬೇಕು. ಇನ್ನು 2-3 ದಿನಗಳಲ್ಲಿ ಟಾಸ್ಕ್ ಫೋರ್ಸ್ ತಂಡಗಳು ರಚನೆಯಾಗಬೇಕು. ಬಿಬಿಎಂಪಿ ವಲಯ ಮಟ್ಟದಲ್ಲಿ ನಿಗದಿಪಡಿಸಿದಂತೆ ಕೊರೋನಾ ಪರೀಕ್ಷೆ ನಡೆಯುತ್ತಿಲ್ಲ. ವಲಯದ ಜಂಟಿ ಆಯುಕ್ತರು ತಮಗೆ ನೀಡಿದ ಗುರಿಯನ್ನು ತಲುಪಬೇಕು. ಪ್ರತಿ ದಿನ ನಡೆಸಿದ ಪರೀಕ್ಷೆಯ ಸಂಖ್ಯೆಯನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಆದೇಶ ನೀಡಿದರು.

ಲಕ್ಷಣ ರಹಿತ ರೋಗಿಗಳನ್ನು(ಎ ಸಿಂಪ್ಟಮೆಟಿಕ್) ಆಸ್ಪತ್ರೆಗೆ ಸೇರಿಸಬಾರದು. ಅಂತಹವರಿಗೆ ಮನೆ ಆರೈಕೆಗೆ ವ್ಯವಸ್ಥೆ ಮಾಡಬೇಕು. ವೃದ್ಧರು, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಗುರುತಿಸಿ ರಿವರ್ಸ್ ಕ್ವಾರಂಟೈನ್ ಗೆ ಒಳಪಡಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

Leave a Reply

Your email address will not be published. Required fields are marked *

error: Content is protected !!