ಶಿರ್ಲಾಲು ಗ್ರಾಪಂ ಪಿಡಿಒ ವಿರುದ್ಧ ಪ್ರತಿಭಟನೆ: ಅಧಿಕಾರಿಗಳು ಸರ್ವಾಧಿಕಾರಿಗಳಲ್ಲ- ಸೊರಕೆ
ಉಡುಪಿ: ಶಿರ್ಲಾಲು ಗ್ರಾಮ ಪಂಚಾಯಿತಿಯಲ್ಲಿ ಕಡತಗಳು ಕಳವಾಗಿದೆ ಎಂದು ಕಾಂಗ್ರೆಸ್ ಬೆಂಬಲಿತ ಸದಸ್ಯರ ವಿರುದ್ಧ ತನಿಖೆ ನಡೆಸದೇ ಒತ್ತಡಕ್ಕೆ ಮಣಿದು ಏಕಾಏಕಿ ಕೇಸು ದಾಖಲಿಸಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಲ್ಲ. ಇದು ಅಧಿಕಾರಿಗಳ ಮೂಲಕ ಪ್ರತಿಪಕ್ಷವನ್ನು ಧಮನ ಮಾಡುವ ತಂತ್ರ ಮತ್ತು ರಾಜಕೀಯ ಷಡ್ಯಂತ್ರ, ಅಧಿಕಾರಿಗಳು ಸರ್ವಾಧಿಕಾರಿಗಳಲ್ಲ. ಶಿರ್ಲಾಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಒತ್ತಾಯಿಸಿದರು.
ಅವರು ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಿರ್ಲಾಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಗುರುವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ವ್ಯವಸ್ಥೆ ಹೀಗೆಯೇ ಇರುವುದಿಲ್ಲ. ಬದಲಾವಣೆಗಳು ಆಗುತ್ತಿರುತ್ತದೆ, ಅಧಿಕಾರಿಗಳು ಎಂದೂ ಸುಪ್ರೀಂ ಅಲ್ಲ, ಕಾನೂನು ಅರಿತು ಕೆಲಸ ಮಾಡಲಿ ಪಂಚಾಯಿತಿ ಸದಸ್ಯರಿಗೆ ತೊಂದರೆಯಾದರೇ ಸಹಿಸುವುದಿಲ್ಲ, ವಿರೋಧ ಪಕ್ಷದವರನ್ನು ಒತ್ತಡಕ್ಕೆ ಮಣಿದು ಧಮನಿಸಿದರೇ ಎಷ್ಟೇ ದೊಡ್ಡ ಅಧಿಕಾರಿಗಳು ಇದ್ದರೂ ಸಹಿಸುವುದಿಲ್ಲ ಎಂದು ವಿನಯ ಕುಮಾರ್ ಸೊರೆಕೆ ಎಚ್ಚರಿಸಿದರು.
ಕಾರ್ಕಳ ಕ್ಷೇತ್ರ ಮತ್ತು ಶಿರ್ಲಾಲು ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ತೀವೃ ಹೋರಾಟ ನಡೆಸುತ್ತೇವೆ, ಪಂಚಾಯಿತಿ ಸದಸ್ಯರ ವಿರುದ್ಧ ನಡೆಸುತ್ತಿರುವ ಷಡ್ಯಂತ್ರವನ್ನು ಸಹಿಸುವುದಿಲ್ಲ, ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಸುಳ್ಳು ಕೇಸು ಹಾಕಿಸಿ ಸಿಲುಕಿಸುವ ಷಡ್ಯಂತ್ರ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಿಗೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು. ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಸದಸ್ಯ ರಾಘವ ದೇವಾಡಿಗ, ಸ್ಥಳೀಯ ಮುಖಂಡ ಕೆರ್ವಾಸೆ ಪ್ರಕಾಶ ಪೂಜಾರಿ, ಶಿರ್ಲಾಲು ಕಾಂಗ್ರೆಸ್ ಅಧ್ಯಕ್ಷ ಜಯ ಕುಮಾರ್, ಗ್ರಾಮಸ್ಥರು, ಸ್ಥಳೀಯ ಪ್ರಮುಖರು, ಮುಖಂಡರು ಭಾಗವಹಿಸಿದ್ದರು.