ಶಿವಮೊಗ್ಗ ಹಿಂಸಾಚಾರ- ಪೊಲೀಸರ ವೈಫಲ್ಯದ ಕುರಿತ ತನಿಖೆ ಆರಂಭ: ಗೃಹ ಸಚಿವ
ತುಮಕೂರು, ಮಾ.3: ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಹಿಂಸಾಚಾರವನ್ನು ತಡೆಯುವಲ್ಲಿ ವಿಫಲವಾದ ಎರಡು ಪೊಲೀಸ್ ಠಾಣೆಗಳ ವಿರುದ್ಧ ಈಗಾಗಲೇ ತನಿಖೆ ಆರಂಭವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಅವರು, ಹರ್ಷ ಕೊಲೆ ಆರೋಪಿಗಳ ವಿರುಧ‍್ದ 10-15 ಕೇಸುಗಳಿದ್ದರೂ ಸರಿಯಾದ ತನಿಖೆ ನಡೆಸದೆ ಇಷ್ಟು ದಿನ ನಿರ್ಲಕ್ಷ್ಯವಹಿಸಿದ್ದು ಈ ಹಿಂಸಾಚಾರಕ್ಕೆ ಕಾರಣ. ಇದರಲ್ಲಿ ಪೊಲೀಸರ ತಪ್ಪಿರುವುದು ಕಂಡುಬರುತ್ತಿದೆ. ಸಮಾಜ ವಿದ್ರೋಹಿ ಶಕ್ತಿಗಳನ್ನು ಪೋಷಿಸುವಲ್ಲಿ ಪೊಲೀಸರ ಪಾತ್ರ ಏನಿದೆ ಎಂಬುದನ್ನು ತಿಳಿದು ಕೊಳ್ಳುವ ಅವಶ್ಯಕತೆ ಇಂದು ತುರ್ತಾಗಿದೆ.ಇಲಾಖೆ ವೈಫಲ್ಯದ ಬಗ್ಗೆ ಜನ ಆರೋಪ ಮಾಡುತ್ತಾರೆ ಎಂದು ಹೇಳಿದರು ಅನ್ಯಾಯ ಯಾರೂ ಮಾಡಿದರೂ ಒಂದೇ. ಸಾಮಾನ್ಯ ಜನರಿಗೆ ಒಂದು ನ್ಯಾಯ, ಪೊಲೀಸರಿಗೆ ಮತ್ತೊಂದು ನ್ಯಾಯ ಎನ್ನುವಂತಾಗಬಾರದು ಎಂದ ಅವರು, ಇಲಾಖೆಯ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನೆಯೇ ಇಲ್ಲ. ಪೊಲೀಸರ ವಿರುದ್ದ ತನಿಖೆ ಆರಂಭವಾಗಿದ್ದು, ಒಂದು ವಾರದಲ್ಲಿ ವರದಿ ನೀಡಲು ಹೇಳಿದ್ದೇನೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆಯ ವೇತನ ತಾರತಮ್ಯ ಮತ್ತಿತರರ ವಿಚಾರಗಳ ಕುರಿತ ಔರಾದ್ಕರ್ ವರದಿಯ ಅನುಷ್ಠಾನ ಈಗಾಗಲೇ ಜಾಲ್ತಿಯಲ್ಲಿದೆ. ಹಾಗಾಗಿ ಬಜೆಟ್‌ನಲ್ಲಿಯೇ ಪ್ರಸ್ತಾಪಿಸಬೇಕೆಂದಿಲ್ಲ. ಆದರೆ ಇಂದಿನ ಪರಿಸ್ಥಿತಿಗೆ ವರದಿ ನೀಡಿದ ಸಂದರ್ಭದಲ್ಲಿ ಇದ್ದ ಸರಕಾರವೇ ಕಾರಣ. ಅಂದೇ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದರೆ, ಇಂದು ಅಧಿಕಾರಿಗಳು ತೊಂದರೆ ಅನುಭವಿಸುವ ಸ್ಥಿತಿ ಉದ್ಭವಿಸುತ್ತಿರಲಿಲ್ಲ. ಆದರೂ ಇದನ್ನು ಸರಿಪಡಿಸಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು. ಶಿವಮೊಗ್ಗದ ಕೋಮುಗಲಭೆಯಲ್ಲಿ ಹತನಾದ ಹರ್ಷ ಕುಟುಂಬಕ್ಕೆ ಬಿಜೆಪಿಯಿಂದ ಮುಂಬರುವ ವಿಧಾನಸಭೆ ಚುನಾವಣೆಯ ವೇಳೆ ಟಿಕೆಟ್ ನೀಡುವ ವಿಚಾರ ಪಕ್ಷ ತೀರ್ಮಾನಿಸಲಿದೆ. ಕಾಂಗ್ರೆಸ್ ಆಧಾರರಹಿತ ಆರೋಪ ಮಾಡುತ್ತಿದೆ. ಈ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಸಾವನ್ನಪ್ಪಿದವರ ಕುಟುಂಬಕ್ಕೆ ಆ ಪಕ್ಷದಿಂದ ಟಿಕೆಟ್ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಇದೇ ವೇಳೆ ಅವರು, ಹರ್ಷನ ತಾಯಿ ಹೇಳಿರುವಂತೆ ಮಗನ ಸಾವು ವ್ಯರ್ಥ ಆಗಬಾರದು. ಯಾವ ಉದ್ದೇಶಕೋಸ್ಕರ ಸಾವನ್ನಪ್ಪಿದಾನೋ ಅದಕ್ಕೆ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನವನ್ನು ಸರಕಾರ ನಡೆಸಲಿದೆ ಎಂದರು.