| ಕೋಟ/ಉಡುಪಿ ಮಾ.2 (ಉಡುಪಿ ಟೈಮ್ಸ್ ವರದಿ): ಶಿವರಾತ್ರಿಯ ದಿನದಂದು ಕೋಟ ಹಾಗೂ ಉಡುಪಿಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಕಿಡಿಗೇಡಿಗಳು ಸರಕಾರಿ ಶಾಲೆಯ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ.
ಉಡುಪಿಯ ಪುತ್ತೂರು ಗ್ರಾಮದ ಹನುಮಂತನಗರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಸುಮಾರು 100 ರಷ್ಟು ಹಂಚುಗಳು ಹಾನಿಗೊಂಡಿದೆ. ಕಿಡಿಗೇಡಿಗಳ ಕೃತ್ಯದಿಂದ ಸುಮಾರು ರೂ. 25,000 ನಷ್ಟ ಉಂಟಾಗಿದೆ ಎಂದು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ರಮಣಿ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದೆಡೆ ಕೋಟದಲ್ಲಿ ವಡ್ಡರ್ಸೆಯ ಸರಕಾರಿ ಪ್ರೌಡ ಶಾಲೆಗೆ ನುಗ್ಗಿದ ಕಿಡಿಗೇಡಿಗಳು ಶಾಲೆಯ ಕಿಟಕಿಗೆ ಅಳವಡಿಸಿದ 5 ಕಿಟಕಿಯ ಗ್ಲಾಸ್ ,ನೀರಿನ ಪೈಪ್, ನೀರು ಸಂಗ್ರಹಣಾ ಸಿಂಟೆಕ್ಸ್ ಟ್ಯಾಂಕ್ ಸೇರಿ ಇತರ ಸೊತ್ತುಗಳನ್ನು ಒಡೆದು ಹಾಕಿದ್ದಾರೆ. ಈ ಕೃತ್ಯದಿಂದ ಸುಮಾರು 50,000 ರೂ. ನಷ್ಟ ಉಂಟಾಗಿರುವುದಾಗಿ ಶಾಲೆಯ ಮುಖ್ಯ ಶಿಕ್ಷಕ ಆನಂದ ಶೆಟ್ಟಿ ಅವರು ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
| |