ಕೋಲಕ್ಕೆ ಕರೆದುಕೊಂಡು ಬರುತ್ತಿದ್ದ ತಂದೆ-ಮಗಳು ಜವರಾಯನ ಅಟ್ಟಹಾಸಕ್ಕೆ ಬಲಿ

ಉಡುಪಿ ಮಾ.2(ಉಡುಪಿ ಟೈಮ್ಸ್ ವರದಿ): ಮನೆಯ ದೈವದ ಕೋಲಕ್ಕೆಂದು ಹುಬ್ಬಳ್ಳಿಯಿಂದ ಬಂದ ಮಗಳು, ಮಗಳನ್ನು ಕರೆದುಕೊಂಡು ಹೋಗಲು ಬಸ್ ಸ್ಟಾಂಡ್ ಗೆ ಬಂದ ತಂದೆ ಇಬ್ಬರೂ ಇಂದು ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.

ಗಣೇಶ್ ಪೈ (58) ಹಾಗೂ ಅವರ ಪುತ್ರಿ ಗಾಯತ್ರಿ ಪೈ(25) ಮೃತ ದುರ್ದೈವಿಗಳು. ಗದಗದಿಂದ ಬಂದ ಮಗಳನ್ನು ಕರೆದುಕೊಂಡು ಹೋಗಲು ಬಂದ ತಂದೆ ಗಣೇಶ್ ಪೈ ಅವರು ಮಗಳು ಗಾಯತ್ರಿ ಪೈ ಅವರನ್ನು ಕರೆದುಕೊಂಡು ಸಂತೆಕಟ್ಟೆಯಲ್ಲಿ ಹೆದ್ದಾರಿ ಸ್ಕೂಟರ್‍ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ತಂದೆ ಮಗಳು ಇಬ್ಬರೂ ಮೃತಪಟ್ಟಿದ್ದಾರೆ.

ಮಾರ್ಚ್ 4 ಕ್ಕೆ ಮನೆಯಲ್ಲಿ ದೈವರ ಕೋಲ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಗಾಯತ್ರಿ ಪೈ ಅವರು ಗದಗದ ಗಂಡನ ಮನೆಯಿಂದ ಊರಿಗೆ ಬಂದಿದ್ದರು. ಇಂದು ಬೆಳಿಗ್ಗೆ 5.25ರ ಹೊತ್ತಿಗೆ ಸಂತೆಕಟ್ಟೆಗೆ ಬಂದಿಳಿದ ಗಾಯತ್ರಿ ಅವರನ್ನು ಮನೆಗೆ ಕರೆದುಕೊಂಡು ಹೋಗಲು ಗಣೇಶ್ ಪೈ ಅವರು ಬಂದಿದ್ದರು. ಈ ವೇಳೆ ಗಾಯತ್ರಿ ಅವರು ತಂದೆಯೊಂದಿಗೆ ಸ್ಕೂಟರ್ ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಬಸ್ ಡಿಕ್ಕಿ ಹೊಡೆದಿದೆ.
ಪರಿಣಾಮ ಮೂರು ತಿಂಗಳ ಗರ್ಭಿಣಿಯಾಗಿದ್ದ ಗಾಯತ್ರಿ ಅವರು ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ತಂದೆ ಗಣೇಶ್ ಪೈ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದಾರೆ. ಇಬ್ಬರ ಮೃತದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.

ದೈವದ ಕೋಲದ ಸಂಭ್ರಮದಲ್ಲಿದ್ದ ಮನೆಯಲ್ಲಿಗ ಸೂತಕದ ಚಾಯೆ: ಗಾಯತ್ರಿ ಅವರು ಮದುವೆ ಆಗಿ ಮೂರು ವರ್ಷವಾಗಿದ್ದು, ಗಾಯತ್ರಿಯವರ ಗಂಡ ಬ್ಯಾಂಕ್ ಉದ್ಯೋಗಿಯಾಗಿದ್ದು, ಮನೆಯಲ್ಲಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗಾಯತ್ರಿ ಅವರು ಎರಡು ದಿನ ಮುಂಚಿತವಾಗಿ ತವರು ಮನೆಗೆ ಬರುವವರಿದ್ದರು. ಸರಳ ಸ್ವಭಾವದ ಗಣೇಶ್ ಪೈ ಅವರು ಉಡುಪಿ ನಗರ ಠಾಣೆ, ಕುಂದಾಪುರ ಹಾಗೂ ಸಂಚಾರ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಇವರ ಇಬ್ಬರು ಹೆಣ್ಣು ಮಕ್ಕಳ ಪೈಕಿ ಗಾಯತ್ರಿ ಪೈ ಅವರು ಹಿರಿಯ ಮಗಳಾಗಿದ್ದರು. 

Leave a Reply

Your email address will not be published. Required fields are marked *

error: Content is protected !!