ವಿದೇಶದಲ್ಲಿ ವೈದ್ಯ ಪದವಿ ಪಡೆದ ವಿದ್ಯಾರ್ಥಿಗಳು ಇಲ್ಲಿನ ಅರ್ಹತಾ ಪರೀಕ್ಷೆಯಲ್ಲಿ ಪಾಸಾಗುವುದಿಲ್ಲ: ಪ್ರಹ್ಲಾದ ಜೋಶಿ
ಬೆಳಗಾವಿ: ವಿದೇಶದಲ್ಲಿ ವೈದ್ಯಕೀಯ ಪದವಿಯನ್ನು ಪಡೆದು ಬರುವ ಶೇ 90ರಷ್ಟು ವಿದ್ಯಾರ್ಥಿಗಳು ಇಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ಅಗತ್ಯವಿರುವ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ’ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆಂದು ಪತ್ರಿಕೆಯೊಂದು ವರದಿ ಮಾಡಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ನಂತರ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 16,000 ಭಾರತೀಯ ಪ್ರಜೆಗಳು ಉಕ್ರೇನ್ನಲ್ಲಿ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ ಜೋಶಿ ಈ ಹೇಳಿಕೆ ನೀಡಿದ್ದಾರೆ. ಭಾರತದ 16 ಸಾವಿರ ಮಂದಿಯಲ್ಲಿ ಹಲವರು ವೈದ್ಯಕೀಯ ಅಧ್ಯಯನಕ್ಕಾಗಿ ಉಕ್ರೇನ್ಗೆ ತೆರಳಿದ್ದ ವಿದ್ಯಾರ್ಥಿಗಳಾಗಿದ್ದಾರೆ.
ವಿದೇಶದಲ್ಲಿನ ಹಾಗೂ ಭಾರತದಲ್ಲಿನ ವೈದ್ಯಕೀಯ ಶಿಕ್ಷಣಕ್ಕಾಗಿ ತಗಲುವ ವೆಚ್ಚ ಎಷ್ಟೇ ಇರಲಿ ಆ ಕುರಿತು ಈಗ ವಿವರವಾದ ಚರ್ಚೆ ಬೇಡ. ಆ ಚರ್ಚೆಗೆ ಇದು ಸಮಯವೂ ಅಲ್ಲ ಎಂದಿದ್ದಾರೆ. ವೈದ್ಯಕೀಯ ಪದವಿಗೆ ಭಾರತದಲ್ಲಿ ಹೆಚ್ಚಿನ ಹಣಖರ್ಚಾಗುತ್ತದೆ, ಉಕ್ರೇನ್ನಲ್ಲಿ ಕಡಿಮೆ ಖರ್ಚಾಗುತ್ತದೆ ಹೀಗಾಗಿ ಹೋಗುತ್ತಾರೆ ಎಂಬ ಮಾತಿದೆಯಲ್ಲಾ’ ಎಂಬ ಪ್ರಶ್ನೆಗೆ, ಉತ್ತರಿಸಿದ ಅವರು ‘ವೆಚ್ಚದ ಹೋಲಿಕೆ ಮಾಡಲು ನಾನು ಬಯಸುವುದಿಲ್ಲ. ಯಾವುದೇ ವಿವಾದ ಅಥವಾ ಚರ್ಚೆಗೆ ಈಗ ಬಯಸುವುದಿಲ್ಲ. ಅಲ್ಲಿ ಕಲಿತು ಬಂದವರಿಗೆ ಒಳ್ಳೆಯದಾಗಲಿ ಎಂದಷ್ಟೇ ಹಾರೈಸಬಲ್ಲೆ’ ಎಂದು ಹೇಳಿದ್ದಾರೆ.
ಅನೇಕ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಎಂಬಿಬಿಎಸ್ ಮಾಡಲು ಹೋಗಿದ್ದಾರೆ. ಏಕೆಂದರೇ ಉಕ್ರೇನ್ ಮಲ್ಲಿ ಮೆಡಿಕಲ್ ವಿದ್ಯಾಭ್ಯಾಸ ಚೆನ್ನಾಗಿದೆ ಎಂದು ಹೇಳಲಾಗಿದೆ. ಭಾರತದ ಖಾಸಗಿ ಕಾಲೇಜುಗಳು ಮತ್ತು ಇತರ ದೇಶಗಳಲ್ಲಿನ ವೈದ್ಯಕೀಯ ಕೋರ್ಸ್ಗಳಿಗೆ ತಗಲುವ ವೆಚ್ಚ ಹೋಲಿಸಿದರೆ ಉಕ್ರೇನ್ ನಲ್ಲಿ ತೀರ ಅಗ್ಗವಾಗಿದೆ. ಇದೇ ಕಾರಣಗಳಿಗಾಗಿ ಉಕ್ರೇನ್ನಲ್ಲಿ ಅಧ್ಯಯನ ಮಾಡಲು ಆಯ್ಕೆ ಮಾಡುತ್ತಾರೆ ಎಂದು ವರದಿಯಾಗಿದೆ.