ಉಕ್ರೇನ್: ಬಂಕರ್’ನಲ್ಲಿ ಸಿಲುಕಿಕೊಂಡಿರುವ ಉಡುಪಿಯ ಇಬ್ಬರು ವಿದ್ಯಾರ್ಥಿಗಳು

ಉಡುಪಿ ಮಾ.2: ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಉಡುಪಿ ಜಿಲ್ಲೆಗೆ ಸೇರಿದ ವಿದ್ಯಾರ್ಥಿಗಳ ಪೈಕಿ ಇಬ್ಬರು ಇನ್ನೂ ಬಂಕರ್ ಗಳಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.

ಜಿಲ್ಲೆಗೆ ಸೇರಿದ 7 ಮಂದಿ ಪೈಕಿ ಇಬ್ಬರು ಈಗಾಗಲೇ ಸುರಕ್ಷಿತವಾಗಿ ಮನೆಯವರನ್ನು ಸೇರಿದ್ದಾರೆ. ಹಾಗೂ ಮೂವರು ಉಕ್ರೇನ್ ಗಡಿ ದಾಟಿ ತಾಯ್ನಾಡಿಗೆ ಬರುವುದಕ್ಕಾಗಿ ಕಾಯುತ್ತಿದ್ದಾರೆ. ಇದೀಗ ಇನ್ನೂ ಉಕ್ರೇನ್ ನ ಬಂಕರ್ ಗಳಲ್ಲಿ ಸಿಲುಕಿಕೊಂಡಿರುವ ಇಬ್ಬರು ಮುಂದಿನ ಹೆಜ್ಜೆಗಾಗಿ ಇಲ್ಲಿನ ರಾಯಭಾರ ಕಚೇರಿಯ ಸೂಚನೆಯನ್ನು ಎದುರು ನೋಡುತಿದ್ದಾರೆ ಎಂದು ತಿಳಿದು ಬಂದಿದೆ.

ಉಕ್ರೇನಿನ ಟೌನ್ ನೇಶನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಕಲಿಯುತ್ತಿರುವ ಕೆಮ್ಮಣ್ಣಿನ ಗ್ಲೆನ್‍ವಿಲ್ ಫೆನಾರ್ಂಡೀಸ್ (19) ಹಾಸ್ಟಲ್ ಸಮೀಪದ ಬಂಕರ್‍ನಲ್ಲಿದ್ದರೆ, ಖಾರ್ಕೀವ್ ನೇಶನಲ್ ಮೆಡಿಕಲ್ ಯುನಿವರ್ಸಿಟಿ ವಿದ್ಯಾರ್ಥಿನಿ ಕಲ್ಯಾಣಪುರದ ಅನಿಫ್ರೆಡ್ ರಿಡ್ಲೆ ಡಿಸೋಜ (20) ಅವರು ಸಹ ವಿವಿ ಹಾಸ್ಟೆಲ್ ಬಂಕರ್ ನಲ್ಲಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಬಂದ ಮಾಹಿತಿ ತಿಳಿಸಿದೆ.
 
7 ಮಂದಿಯ ಪೈಕಿ ಉದ್ಯಾವರ ಸ್ಮಾಲರದ ರಾಜೀವ್‍ರ ಮಗ ಮೃಣಾಲ್ (19) ಅವರು ತಮ್ಮ ಉದ್ಯಾವರದ ಮನೆಗೆ ಸೇರಿದ್ದು, ಒಡೆಸ್ಸಾ ನೇಶನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ 4ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಉಡುಪಿಯ ನಂದಿನಿ ಅರುಣ್(21) ರೊಮೇನಿಯಾದ ರಾಜಧಾನಿ ಬುಕಾರೆಸ್ಟ್ ವಿಮಾನ ನಿಲ್ದಾಣದಿಂದ ಖಾಸಗಿ ಏರ್ ಎಮಿರೇಟ್ಸ್ ವಿಮಾನದಲ್ಲಿ ಮಸ್ಕತ್‍ಗೆ ಪ್ರಯಾಣಿಸಿ ಅಲ್ಲಿ ಉದ್ಯೋಗಿ ಯಾಗಿರುವ ತಂದೆಯ ಮನೆಯನ್ನು ಸೇರಿಕೊಂಡಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಮಾಹಿತಿ ಬಂದಿದೆ.

ಉಳಿದಂತೆ ದೆಹಲಿಯಲ್ಲಿ ಕರ್ನಾಟಕ ಭವನದ ಮ್ಯಾನೇಜರ್ ಪುತ್ರ  ಪರ್ಕಳ ಮೂಲದ ನಿಯಮ್ ರಾಘವೇಂದ್ರ (20) ಉಕ್ರೇನ್ ಗಡಿ ದಾಟಿ ರೊಮೇನಿಯಾ ತಲುಪಿದ್ದಾರೆ. ಅವರು ಬುಕಾರೆಸ್ಟ್‍ನಿಂದ ಹೊಸದಿಲ್ಲಿಗೆ ಆಗಮಿಸುವ ನಿರೀಕ್ಷೆಯಲ್ಲಿದ್ದಾರೆ. ಖಾರ್ಕೀವ್‍ನ ನೇಶನಲ್ ಮೆಡಿಕಲ್ ಯುನಿವರ್ಸಿಟಿಯ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಬಿ.ಧನಂಜಯ ಅವರ ಪುತ್ರ ರೋಹನ್ ಬಗ್ಲಿ (24) ಖಾರ್ಕೀವ್‍ನಿಂದ ಲೈವಿಗೆ ಬಂದಿದ್ದು, ಅಲ್ಲಿಂದ ಹಂಗೇರಿಯ ಬುಡಾಪೆಸ್ಟ್ ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ. ಹಂಗೇರಿ ಯಿಂದ ಅವರು ಎರಡು ದಿನದೊಳಗೆ ಹೊಸದಿಲ್ಲಿಗೆ ಬರುವ ನಿರೀಕ್ಷೆ ಇದೆ. ಮತ್ತು ಖಾರ್ಕೀವ್‍ನಲ್ಲಿ ಕಲಿಯುತ್ತಿರುವ ತ್ರಾಸಿಯ ಅಂಕಿತ ಜಗದೀಶ್ ಪೂಜಾರಿ (22) ಅವರು ಲೈವಿ ಮೂಲಕ ಪೊಲಂಡ್‍ಗೆ ತೆರಳಿದ್ದಾರೆ ಎಂಬ ಮಾಹಿತಿ ಜಿಲ್ಲಾಡಳಿತಕ್ಕೆ ಲಭ್ಯವಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!