ಉಡುಪಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಹೊಸ ಮುಖಕ್ಕೆ ನೀಡಲು ಕಾರ್ಯಕರ್ತರ ಆಗ್ರಹ
ಉಡುಪಿ ಮಾ.1(ಉಡುಪಿ ಟೈಮ್ಸ್ ವರದಿ): ಬ್ಲಾಕ್ ಕಾಂಗ್ರೆಸ್ ಸಭೆಯ ಬಳಿಕ ಇದೀಗ ಉಡುಪಿ ಬ್ಲಾಕ್ ಕಾಂಗ್ರೆಸ್ ವಲಯದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಗೆ ಉಡುಪಿಯಲ್ಲಿ ಯಾರು ಸ್ಪರ್ಧಿಸಲಿದ್ದಾರೆ ಎಂಬ ಕುರಿತು ಭಾರೀ ಚರ್ಚೆಗಳು ನಡೆಯುತ್ತಿದೆ.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಪಕ್ಷದ ಚಟುವಟಿಕೆಗಳಲ್ಲಿ ಹಾಗೂ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳದೇ ಇರುವುದರಿಂದ ಜಿಲ್ಲೆಯಲ್ಲಿ ಪಕ್ಷ ಬಲಪಡಿಸುವಲ್ಲಿ ಹಿನ್ನಡೆಯಾಗುತ್ತಿರುವ ಬಗ್ಗೆ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಈಗಾಗಲೇ ವಿಧಾನ ಸಭಾ ವಿಪಕ್ಷ ಉಪನಾಯಕ ಯುಟಿ ಖಾದರ್ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಬಂಢಾರಿ ಅವರೊಂದಿಗೆ ಅಸಮದಾನ ಹೊರ ಹಾಕಿದ್ದಾರೆ.
ಕಾಂಗ್ರೆಸ್ ಉಡುಪಿ ವಿಧಾನ ಸಭಾ ಕ್ಷೇತ್ರದದಿಂದ ಈ ಹಿಂದಿನಿಂದಲೂ ಚುನಾವಣೆಗೆ ಮೊಗವೀರ ಸಮುದಾಯದ ಅಭ್ಯರ್ಥಿಯನ್ನೆ ಕಣಕ್ಕಿಳಿಸಲಾಗುತ್ತಿತ್ತು. ಅದರಂತೆ ಈ ಬಾರಿಯೂ ಮತ್ತೆ ಮೊಗವೀರ ಸಮುದಾಯಕ್ಕೆ ಕಾಂಗ್ರೆಸ್ ಮಣೆ ಹಾಕುತ್ತದೆಯೋ ಅಥವಾ ಹೊಸ ಬದಲಾವಣೆಗಾಗಿ ಬೇರೆ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡುತ್ತದೋ ಎಂಬ ಬಗ್ಗೆ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಲೇ ಇದೆ.
ಚುನಾವಣೆಗೆ ಇನ್ನು ಒಂದೇ ವರುಷ ಬಾಕಿ ಇರುವುದರಿಂದ ಈ ಸೀಮಿತ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಹಾಗೂ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು ತೊಡಗಿಕೊಳ್ಳಬೇಕಿದೆ. ಆದರೆ ಇದಕ್ಕಾಗಿ ಕಾಂಗ್ರೆಸ್‍ನಲ್ಲಿ ಸೂಕ್ತ ನಾಯಕತ್ವದ ಅವಶ್ಯಕತೆ ಇದೆ ಎಂಬುದು ಅಷ್ಟೇ ಸತ್ಯ. ಈ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ವಲಯದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಲು ಯಾರು ಸೂಕ್ತ ಅಭ್ಯರ್ಥಿ ಎಂಬ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ.
ಸದ್ಯ ಕಿನ್ನಿಮುಲ್ಕಿ ಕೃಷ್ಣಮೂರ್ತಿ ಆಚಾರ್ಯ ಅವರು ಮೂವತ್ತು ವರ್ಷಗಳಿಂದ ಸಾಮಾಜಿಕ, ಸಾಂಸ್ಕøತಿಕ ಹಾಗೂ ಕ್ರೀಡಾ ವಲಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಯುವಕರಿಂದ ಬೆಂಬಲವನ್ನು ಪಡೆದುಕೊಂಡಿದ್ದಾರೆ.
ಈಗಾಲೇ ಸಮಾಜಮುಖಿ ಕಾರ್ಯಕ್ರಮಗಳಾದ ರಕ್ತದಾನ ಶಿಬಿರ, ಉಚಿತ ಕಣ್ಣಿನ ತಪಾಸಣೆ, ಆರೋಗ್ಯ ತಪಾಸಣೆ ಸಹಿತ ಕೊವೀಡ್ ಸಂದರ್ಭದಲ್ಲಿ ಸಾವಿರಾರು ಜನರಿಗೆ ಆಹಾರ ಸಾಮಾಗ್ರಿಗಳ ವಿತರಣೆ, ಲಾಕ್ ಡೌನ್ ಸಮಯದಲ್ಲಿ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ರೋಗಿಗಳಿಗೆ ಉಚಿತ ಆಟೋಗಳ ಸೇವೆ ನೀಡಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದರು. ಅಷ್ಟು ಮಾತ್ರವಲ್ಲದೆ ಕೊವೀಡ್ ಸಂದರ್ಭ ಕೃಷ್ಣಮೂರ್ತಿ ಆಚಾರ್ಯ ಯುವಕರ ತಂಡವೊಂದ ನ್ನು ರಚಿಸಿ ಅಂಬುಲೆನ್ಸ್ ಸೇವೆ ಹಾಗೂ ಕೊವೀಡ್ ನಿಂದ ಮೃತರಾದ ರೋಗಿಗಳ ಅಂತಿಮ ವಿಧಿದಾನಗಳನ್ನು ಯಾವುದೇ ಜಾತಿ ಬೇದವಿಲ್ಲದೆ ಸ್ವತಃ ತಾವೇ ಖುದ್ದು ಹೋಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಈ ರೀತಿಯಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡ ಕೃಷ್ಣಮೂರ್ತಿ ಆಚಾರ್ಯ ಯುವಜನರಲ್ಲಿ ಉತ್ಸಾಹ ತುಂಬಿ ಜನನಾಯಕರೆನಿಕೊಂಡು ತಮ್ಮ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರಚಾರ ಸಮಿತಿಯ ಹುದ್ದೆಯನ್ನು ನಿಭಾಯಿಸಿದ್ದ ಕೃಷ್ಣಮೂರ್ತಿ ಆಚಾರ್ಯರಿಗೆ ಈ ಬಾರಿಯ ಉಡುಪಿ ವಿಧಾನ ಸಭಾ ಕ್ಷೇತ್ರದ ಟಿಕೆಟ್ ನೀಡಬೇಕು ಎಂಬ ಕೂಗು ಕಾರ್ಯಕರ್ತರ ಬಾಯಿಯಲ್ಲಿ ಕೇಳಿ ಬರುತ್ತಿದೆ.
ಕಾಂಗ್ರೆಸ್ ವಲಯದಲ್ಲಿ ಕೆಲವರು ಕೃಷ್ಣಮೂರ್ತಿ ಆಚಾರ್ಯ ಅವರ ಪರವಾಗಿ ಒಲವು ತೋರಿದ್ದು, ಮತ್ತೊಂದೆಡೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದಿವಾಕರ್ ಕುಂದರ್ ಅವರ ಹೆಸರೂ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಜಿಲ್ಲೆಯ ಪಾಲಿಗೆ ಸದ್ಯದ ಮಟ್ಟಿಗೆ ಮುಂದಿನ ವಿಧಾನ ಸಭಾ ಚುನಾವಣೆಯ ಅಭ್ಯರ್ಥಿ ಯಾರೆಂಬುದು ಕಗ್ಗಂಟಾಗಿ ಉಳಿದಿದೆ.
ಇನ್ನೊಂದೆಡೆ ಮಹಿಳಾ ಅಭ್ಯರ್ಥಿಯಾಗಿ ಮಾಜಿ ತಾಲೂಕು ಪಂಚಾಯತ್ ಸದಸ್ಯೆ ವೆರೋನಿಕಾ ಕರ್ನೆಲಿಯೋ, ಬ್ರಹ್ಮಾವರ ಭಾಗದಿಂದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭುಜಂಗ ಶೆಟ್ಟಿ ಅವರ ಹೆಸರೂ ಕೂಡ ಮೂಂಚೂಣಿಯಲ್ಲಿದ್ದು ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಂದು ಕಾದು ನೋಡಬೇಕು.
ರಾಜ್ಯ ನಾಯಕರಾಗಿ ಗುರುತಿಸಿಕೊಂಡ ಪ್ರಮೋದ್ ಮಧ್ವರಾಜ್’ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿವಕುಮಾರ್ ಕೂಡ ರಾಜ್ಯ ಮಟ್ಟ ಉನ್ನತ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂಬ ಮಾತು ಕೂಡ ಜಿಲ್ಲಾ ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ.
ಉಡುಯಲ್ಲಿ ಬಟ್ರನ್ನು ತೆಗೆದು ಬೀಸಾಕ ಬೇಕಾದರೆ ಪ್ರಮೋದ್ ಮದ್ವಾರಾಜ್ ಸೂಕ್ತ ವ್ಯಕ್ತಿ. ಉಡುಪಿ ತಾಲೂಕು ನಲ್ಲಿ ಕಾಂಗ್ರೆಸ್ ಇನ್ನೆಡೆಯಾಗಲು ಕಾರಣ ಅನುಭವ ಇಲ್ಲದ ಅದ್ಯಕ್ಷರು ಮತ್ತು ಒಳಜಗಳ ಅಷ್ಟೇ. ಮುಂದಿನ ಚುನಾವಣೆಯಲ್ಲಿ ಪ್ರಮೋದ್ ಮದ್ವಾರಾಜ್ ಗೆಲುವು ಖಚಿತ