ಕುಂದಾಪುರ: ಪತ್ನಿಗೆ ಚಿತ್ರಹಿಂಸೆ ನೀಡಿದ ವಿಡಿಯೋ ವೈರಲ್- ಪತಿ ಅರೆಸ್ಟ್
ಕುಂದಾಪುರ ಮಾ.1(ಉಡುಪಿ ಟೈಮ್ಸ್ ವರದಿ): ಪ್ರೀತಿಸಿ ಮದುವೆಯಾದ ಬಳಿಕ ಪತ್ನಿಗೆ ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡಿ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪತಿರಾಯನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬರೆಕಟ್ಟು ಸಮೀಪದ ಪ್ರದೀಪ ಬಂಧಿತ ಆರೋಪಿ. ಬೀಜಾಡಿ ಗ್ರಾಮದ ಪ್ರಿಯಾಂಕ ಅವರು ತನ್ನ ಪತಿಯ ವಿರುದ್ಧ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಇದೀಗ ಆರೋಪಿ ಪತ್ನಿ ಪೀಡಕನನ್ನು ಬಂಧಿಸಿದ್ದಾರೆ.
2021 ರ ಅ.25 ರಂದು ಕೊಲ್ಲೂರಿನಲ್ಲಿ ಪ್ರಿಯಾಂಕ ಅವರನ್ನು ಮದುವೆಯಾಗಿದ್ದ ಪ್ರದೀಪ, ದಿನ ಕಳೆದಂತೆ ಪ್ರಿಯಾಂಕ ಅವರಿಗೆ ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡುತ್ತಿದ್ದ ಹಾಗೂ ದೈಹಿಕವಾಗಿ ಹಲ್ಲೆ ಮಾಡಿ ಹಿಂಸಿಸುತ್ತಿದ್ದ. ಮಾತ್ರವಲ್ಲದೆ ವರದಕ್ಷಿಣೆ ರೂಪದಲ್ಲಿ ಚಿನ್ನ ಮತ್ತು ಹಣ ತೆಗೆದುಕೊಂಡು ಬರುವಂತೆ ಒತ್ತಾಯಿಸಿ ವರದಕ್ಷಿಣೆ ತರದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಇಷ್ಟು ಸಾಲದೆಂಬಂತೆ ಈ ಕೃತ್ಯದ ವೀಡಿಯೋ ರೆಕಾರ್ಡ್ ಮಾಡಿ ಪತ್ನಿಯ ತಂದೆ ತಾಯಿಗೆ ಕಳುಹಿಸಿ 2 ಲಕ್ಷ ರೂಪಾಯಿ ಹಣ ಹಾಗೂ 4 ಪವನ್ ಚಿನ್ನ ನೀಡುವಂತೆ ಪೀಡಿಸಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಘಟನೆಗೆ ಸಂಬಂಧಿಸಿ ಪತ್ನಿಗೆ ಸಿಗೇರಟಿನಿಂದ ಚುಚ್ಚಿ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.