‘ಆಳಂದ ಚಲೋ’ ಕಾರ್ಯಕ್ರಮದ ತೆರಳುತ್ತಿದ್ದ ಚೈತ್ರಾ ಕುಂದಾಪುರ ಪೊಲೀಸ್ ವಶಕ್ಕೆ
ಕಲಬುರಗಿ ಮಾ.1: ಆಳಂದ ಚಲೋ ಕಾರ್ಯಕ್ರಮದ ಹಿನ್ನಲೆಯಲ್ಲಿ ಕಲಬುರಗಿಗೆ ಆಗಮಿಸುತ್ತಿದ್ದ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಜಿಲ್ಲೆಯ ಶಹಬಾದ್ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಫೆ.27 ರಿಂದ ಮಾ.3ರ ವರೆಗೆ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಹಾಗೂ ಚೈತ್ರಾ ಕುಂದಾಪುರ ಅವರಿಗೆ ಜಿಲ್ಲೆಯನ್ನು ಪ್ರವೇಶಿಸದಂತೆ ಜಿಲ್ಲಾಧಿಕಾರಿ ನಿಬರ್ಂಧಗಳನ್ನು ಹೇರಿದ್ದರು. ಈ ನಡುವೆ ಆಳಂದ ಚಲೋ ಕಾರ್ಯಕ್ರಮದಲ್ಲಿ ಬಾಗವಹಿಸುವ ಹಿನ್ನಲೆಯಲ್ಲಿ ಚೈತ್ರಾ ಅವರು ಕಲಬುರಗಿಗೆ ಆಗಮಿಸುತ್ತಿದ್ದರು. ಈ ವೇಳೆ ಯಾದಗಿರಿ ಮಾರ್ಗವಾಗಿ ಕಲಬುರಗಿಗೆ ಆಗಮಿಸುವಾಗ ಪೊಲೀಸರು ಅವರನ್ನು ವಶಕ್ಕೆ ಪಡೆದು ಯಾದಗಿರಿ ಜಿಲ್ಲೆಯ ಗಡಿ ದಾಟಿಸಿ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸಿಆರ್‍ಪಿಸಿ ಕಾಯ್ದೆ-1973ರ ಕಲಂ-132,143,144 ಹಾಗೂ 144ಎ ಅನ್ವಯ ನಿಬರ್ಂಧ ಹೇರಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಭಾನುವಾರ ಆದೇಶ ಹೊರಡಿಸಿದ್ದರು. ಇದಲ್ಲದೆ ಜೇವರ್ಗಿ ತಾಲೂಕಿನ ಆಂದೋಲದ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರನ್ನು ಸಹ ಫೆ.27 ರಿಂದ ಮಾ.3ರ ವರೆಗೆ ಆಳಂದ ತಾಲೂಕು ಪ್ರವೇಶಿಸದಂತೆ ನಿಬರ್‍ಂಧ ವಿಧಿಸಲಾಗಿತ್ತು.