| ಉಡುಪಿ, ಮಾ.1: ಉಕ್ರೇನ್ ನಲ್ಲಿ ಸಿಲುಕಿರುವ ಉಡುಪಿಯ ಏಳು ಮಂದಿ ವಿದ್ಯಾರ್ಥಿಗಳ ಪೈಕಿ ಉದ್ಯಾವರದ ಮೃಣಾಲ್ ಸುರಕ್ಷಿತವಾಗಿ ಮನೆ ಸೇರಿದ್ದಾರೆ.
ಉದ್ಯಾವರ ಸಂಪಿಗೆನಗರ ಸಾಲ್ಮರದ ನಿವಾಸಿ ರಾಜೇಶ್ ಹಾಗೂ ಸಂಧ್ಯಾ ದಂಪತಿ ಪುತ್ರ ಮೃಣಾಲ್ ಉಕ್ರೇನ್ ದೇಶದ ಇವಾನೋದ ನ್ಯಾಶನಲ್ ಮೆಡಿಕಲ್ ಯುನಿವರ್ಸಿಟಿಯ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಯಾಗಿದ್ದಾರೆ. ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಉಡುಪಿಗೆ ಆಗಮಿಸಿದ ಅವರು, ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ತನ್ನ ಮನೆ ತಲುಪಿದ್ದಾರೆ.
ಮನೆಗೆ ತೆರಳಿದ ಮೃಣಾಲ್‌ನನ್ನು ತಂದೆತಾಯಿ ಆತ್ಮೀಯವಾಗಿ ಬರಮಾಡಿಕೊಂಡರು. ಮೃಣಾಲ್ ಅವರ ಅಜ್ಜಿ ವಸಂತಿ ಕೂಡ ತನ್ನ ಮೊಮ್ಮಗನನ್ನು ನೋಡಿ ಸಂತಸ ಪಟ್ಟರು. ಉಕ್ರೇನ್ ನಲ್ಲಿ ತಾವು ಇದ್ದ ಪರಿಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡ ಮೃಣಾಲ್ ಅವರು, ‘ಖಾರ್ಕಿವ್ ಮತ್ತು ಕ್ವಿವ್‌ಗೆ ಹೋಲಿಸಿದರೆ, ಇವಾನೊದಲ್ಲಿ ಪರಿಸ್ಥಿತಿ ಅಷ್ಟು ಕೆಟ್ಟದಾಗಿರಲಿಲ್ಲ. ಫೆ.24ರಂದು ಇವಾನೊದಲ್ಲಿನ ತನ್ನ ಅಪಾರ್ಟ್‌ಮೆಂಟ್‌ನಿಂದ ಕೇವಲ ಐದು ಕಿ.ಮೀ ದೂರದಲ್ಲಿರುವ ವಿಮಾನ ನಿಲ್ದಾಣದ ಮೇಲೆ ರಷ್ಯಾ ಪಡೆ ಬಾಂಬ್ ದಾಳಿ ನಡೆದ ನಂತರ ನಾವೆಲ್ಲ ಹೆಚ್ಚು ಆತಂಕಕ್ಕೆ ಒಳಗಾದೆವು. ಆದ್ದರಿಂದ ನಾವು ಪೋಲೆಂಡ್ ಗಡಿಗೆ ಹೋಗಲು ನಿರ್ಧರಿಸಿದೆವು. ಆದರೆ ಪೋಲೆಂಡ್ ಗಡಿ ಆಗಲೇ ತುಂಬಿ ಹೋಗಿದ್ದುದರಿಂದ ನಾವು ರೊಮೇನಿಯಾ ಗಡಿಯತ್ತ ತೆರಳಲು ನಿರ್ಧರಿಸಿದೆವು’ ಎಂದು ಹೇಳಿದ್ದಾರೆ.
ಉಕ್ರೇನ್‌ನಲ್ಲಿದ್ದ ಪರಿಸ್ಥಿತಿಯ ಪ್ರಕಾರ ಇಷ್ಟು ಬೇಗ ನಮ್ಮನ್ನು ಏರ್‌ಲಿಫ್ಟ್ ಮಾಡುತ್ತಾರೆ ಎಂದು ಅಂದು ಕೊಂಡಿರಲಿಲ್ಲ. ಅದರಲ್ಲೂ ಮೊದಲ ವಿಮಾನದಲ್ಲಿ ನಾನು ಬರುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ ಎನ್ನುವ ಮೃಣಾಲ್ ಅವರು, ಟ್ರಾಫಿಕ್ ಸಮಸ್ಯೆಯಿಂದ ರೊಮೇನಿಯನ್- ಸೈರೆಟ್ ಗಡಿಯವರೆಗೆ ಬಸ್ಸಿನಲ್ಲಿ ಬರಲು ಸಾಧ್ಯವಾಗದ ಕಾರಣ, ನಾನು ಸೇರಿದಂತೆ ಹಲವು ವಿದ್ಯಾರ್ಥಿ ಗಳು ಕಠಿಣ ಚಳಿಯ ವಾತಾವರಣದಲ್ಲೂ ಸುಮಾರು ಆರು ಕಿ.ಮೀ. ನಡೆದು ಕೊಂಡೆ ಆಗಮಿಸಿ ಗಡಿ ತಲುಪಿದೆವು. ಸೈರೆಟ್ ಗಡಿ ದಾಟಿದ ನಂತರ, ರೊಮೇನಿಯನ್ ಸರಕಾರ ನಮಗೆ ಹೆಚ್ಚು ಮಾನವೀಯತೆಯನ್ನು ತೋರಿಸಿತು. ಅಲ್ಲಲ್ಲಿ ಆಹಾರ ಮತ್ತು ನೀರಿನ ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು. ಅದನ್ನು ಎಲ್ಲರಿಗೂ ಉಚಿತವಾಗಿ ನೀಡಲಾಯಿತು.
ರೊಮೇನಿಯಾದಲ್ಲಿ ಎಲ್ಲವೂ ಉಚಿತವಾಗಿ ದೊರೆಯುತ್ತಿದ್ದ ಹಿನ್ನೆಲೆಯಲ್ಲಿ ನಮಗೆ ಕರೆನ್ಸಿ ವಿನಿಮಯದ ಅಗತ್ಯವೇ ಬರಲಿಲ್ಲ’ ರೊಮೇನಿಯಾ ಗಡಿಯನ್ನು ತಲುಪಿದ ಭಾರತೀಯ ವಿದ್ಯಾರ್ಥಿಗಳನ್ನು ಬುಕಾರೆಸ್ಟ್ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ಭಾರತೀಯ ರಾಯಭಾರ ಕಚೇರಿಯ ಬಸ್‌ಗಳು ಅಲ್ಲಿಸಿದ್ಧವಾಗಿದ್ದವು. ಬುಕಾರೆಸ್ಟ್‌ನಿಂದ ದೆಹಲಿ ಮತ್ತು ಅಲ್ಲಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸರಕಾರವೇ ವಿಮಾನದ ಶುಲ್ಕವನ್ನು ಭರಿಸಿದೆ. ಹಾಗಾಗಿ ನಾನು ಸರಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
”ಗಡಿಭಾಗದಲ್ಲಿ ತುಂಬಾ ಸಮಸ್ಯೆ ಆಯಿತು. ಹತ್ತು ನಿಮಿಷದ ಕೆಲಸಕ್ಕೆ 12 ಗಂಟೆ ಕಾಯಬೇಕಾಯಿತು. ರೊಮೇನಿಯ ಗಡಿ ದಾಟುವವರೆಗೆ ತುಂಬಾ ಕಷ್ಟ ಪಟ್ಟೆವು. ಚಳಿ, ಹಸಿವು ನಿದ್ದೆಯಿಂದ ಕಂಗಾಲಾಗಿದ್ದೆವು. ಯುದ್ಧದ ಹಿಂದಿನ ರಾತ್ರಿ ಮೆಸ್ನಲ್ಲಿ ಫುಡ್ ಕೊಟ್ಟಿದ್ದರು. ಯುದ್ಧದ ವಾತಾವರಣದಿಂದ ಮಾರ್ಕೆಟ್‌ಗೆ ಹೋಗಲು ಆಗಲಿಲ್ಲ. 50 ರೂ. ಟೊಮೆಟೊಗೆ 300ರೂ. ಆಗಿತ್ತು. ಅಕ್ಕಿ, ಹಣ್ಣು, ಎಣ್ಣೆ, ನೀರು ಸಿಗುತ್ತಿರಲಿಲ್ಲ” ಎಂದು ತಾವು ಸೇರಿದಂತೆ ಉಕ್ರೆನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಕಷ್ಟವನ್ನು ವಿವರಿಸಿದರು.
ಇದೇ ವೇಳೆ ಅವರು, ರಷ್ಯಾ ಮತ್ತು ಉಕ್ರೇನ್‌ನಲ್ಲಿ ಭಾರತದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಲ್ಲಿಯ ಶಿಕ್ಷಣದ ಗುಣಮಟ್ಟ ಚೆನ್ನಾಗಿರುವುದ ರಿಂದ ನಾವು ಅಲ್ಲಿಗೆ ಹೋಗಿದ್ದೇವೆ. ಯುದ್ಧದ ವಾತಾವರಣ ತಣ್ಣಗಾದ ಕೂಡಲೇ ನಾನು ಉಕ್ರೇನ್ಗೆ ಹೋಗಲು ಬಯಸುತ್ತೇನೆ. ನನ್ನ ಶಿಕ್ಷಣಕ್ಕಾಗಿ ಪೋಷಕರು ಈಗಾಗಲೇ 7.5 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಆದ್ದರಿಂದ ಅವರಿಗೆ ನನ್ನ ಮುಂದಿನ ಭವಿಷ್ಯದ ಬಗ್ಗೆ ಸ್ವಲ್ಪಚಿಂತೆಯಾಗಿದೆ. ಮುಂದಿನ ವಿದ್ಯಾಭ್ಯಾಸಕ್ಕಾಗಿ ಮತ್ತೆ ಉಕ್ರೇನ್ ಹೋಗಲು ಇಚ್ಚಿಸುತ್ತಿರುವುದಾಗಿ ತಿಳಿಸಿದ್ದಾರೆ.
| |