ಉಡುಪಿ: ಬಿಜೆಪಿಯಿಂದ ಹಿಂದೂಗಳ ವಿಭಜನೆಯ ಪ್ರಯತ್ನ- ಅಶೋಕ್ ಕೊಡವೂರು
ಉಡುಪಿ: ಜಾತ್ಯಾತೀತ ಕಲ್ಪನೆಯನ್ನು ಗಾಳಿಗೆ ತೂರಿ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಾ ಮತಗಳಿಕೆಗಾಗಿ ಧರ್ಮಗಳನ್ನು ವಿಭಜಿಸಲು ಹೊರಟಿರುವ ಬಿಜೆಪಿಯ ಷಡ್ಯಂತ್ರ ದೇಶದ ಅಭಿವೃದ್ದಿಗೆ ಮಾರಕವಾಗಲಿದೆ. ಹಿಂದೂ ಕಾರ್ಯಕರ್ತರಿಂದ ತುಂಬಿ ತುಳುಕುತ್ತಿರುವ ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಿರುವುದು ಬಿಜೆಪಿಯ ವ್ಯವಸ್ಥಿತ ಪಿತೂರಿಯ ಭಾಗವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ರವರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಜರಗಿದ ಪಕ್ಷದ ಸದಸ್ಯತ್ವ ನೋಂದಾವಣೆಯ ಜಿ.ಪಂ. ವ್ಯಾಪ್ತಿಯ ಮುಖ್ಯ ನೊಂದಾವಣೆಕಾರರ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು.
ಕಾಂಗ್ರೆಸ್ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ಎಲ್ಲಾ ವರ್ಗಗಳಂತೆ ಹಿಂದೂಗಳ ಬಗ್ಗೆಯೂ ಕಾಳಜಿಯಿಂದ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಇದನ್ನು ಬಿಜೆಪಿ ಜನರಿಂದ ಮರೆಮಾಚಿಸುವ ಪ್ರಯತ್ನದಲ್ಲಿ ತೊಡಗಿದೆ. ಬಿಜೆಪಿಯನ್ನು ಬೆಂಬಲಿಸಿದವರನ್ನು ಮಾತ್ರ ಹಿಂದುಗಳು ಎಂದು ಬಿಂಬಿಸ ಹೊರಟಿರುವ ಬಿಜೆಪಿ ಮನಸ್ಥಿತಿ ದೇಶಕ್ಕೆ ಮಾರಕ. ಕೇಂದ್ರ ರಾಜ್ಯ ಹಾಗೂ ಸ್ಥಳಿಯಾಡಳಿತದಲ್ಲಿ ಬಿಜೆಪಿ ಅಧಿಕಾರ ಹೊಂದಿದ್ದರೂ ಕೇವಲ 6 ವಿದ್ಯಾರ್ಥಿಗಳ ಹಿಜಾಬ್ ಸಮಸ್ಯೆಯನ್ನು ಮೊಳಕೆಯಲ್ಲಿಯೇ ಪರಿಹರಿಸುವ ಪ್ರಯತ್ನ ಬಿಟ್ಟು ಅದಕ್ಕೆವಿರುದ್ಧವಾಗಿ ಶಾಲಾ ಮಕ್ಕಳಿಗೆ ಕೇಸರಿ ಪೇಟ, ಕೇಸರಿ ಶಾಲು ತೊಡಿಸಿ ಸಮಸ್ಯೆಯ ಉಲ್ಬಣಕ್ಕೆ ಕಾರಣಕರ್ತರು ಬಿಜೆಪಿ ಮುಖಂಡರು. ಈ ಸಮಸ್ಯೆ ರಾಷ್ಟ್ರೀಯ ವಿಷಯವಾಗಲು ಸರಕಾರದ ವೈಫಲ್ಯ ಕಾರಣ.
ಶಿವಮೊಗ್ಗ ಹತ್ಯೆ ಪ್ರಕರಣದಲ್ಲಿ ವ್ಯಕ್ತಿಯು ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದು ಹಲವಾರು ಪ್ರಕರಣದಲ್ಲಿ ಆತನ ಹೆಸರು ತುಲುಕುಹಾಕಿಕೊಂಡಿದೆ. ಆಡಳಿತ ವೈಫಲ್ಯದಿಂದ ಆತನ ಹತ್ಯೆಯಾಗಿದ್ದರೂ ಬಿಜೆಪಿ ಆತನ ಹತ್ಯೆಯನ್ನು ವೈಭವೀಕರಿಸುತ್ತಿದೆ. ನಿಷೇದಾಜ್ಞೆಯ ನಡುವೆಯೂ ಬಿಜೆಪಿ ಪ್ರತಿಭಟನೆ ನಡೆಸಿ ಪ್ರಕ್ಷುಬ್ದ ವಾತಾವರಣ ನಿರ್ಮಾಣ ಮಾಡಿ ಅಪಾರ ಕಷ್ಟ ನಷ್ಟಗಳಿಗೆ ಕಾರಣೀಭೂತರಾಗಿದ್ದು ನೋಡಿದರೆ ಬಿಜೆಪಿಗೆ ಕಾನೂನಿನ ಬಗ್ಗೆ ಯಾವುದೇ ಗೌರವ ಇಲ್ಲದಿರುವುದನ್ನು ತೋರ್ಪಡಿಸುತ್ತದೆ. ಈ ಹಿಂದೆ ಬಿಜೆಪಿ ಸಂಘಟನೆಯ ಕಾರ್ಯಕರ್ತರಿಂದ ಅಮಾನುಷವಾಗಿ ಹತ್ಯೆಯಾದ ಹಿಂದೂಗಳ ಬಗ್ಗೆ ಬಿಜೆಪಿ ಮುಖಂಡರು ಗಾಢ ಮೌನ ವಹಿಸಿರುವ ಹಿಂದಿನ ಮರ್ಮವೇನು? ಬಿಜೆಪಿ ಇದಕ್ಕೆ ಮೊದಲು ಸ್ಪಷ್ಟೀಕರಣ ನೀಡಬೇಕಾಗಿದೆ ಎಂದರು.