ಪ್ರಮೋದ್ ಮಧ್ವರಾಜ್ ನಡೆಯಿಂದ ಪಕ್ಷ ಸಂಘಟನೆಗೆ ಹಿನ್ನಡೆ- ಬ್ಲಾಕ್ ಸಭೆಯಲ್ಲಿ ಕಾರ್ಯಕರ್ತರ ಆಕ್ರೋಶ

ಉಡುಪಿ ಫೆ.28 (ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಿತಿ ಸಭೆಯಲ್ಲಿ ನಾಯಕತ್ವದ ಪ್ರಶ್ನೆ ಮತ್ತೆ ಎದುರಾಗಿದೆ. ಹಲವು ಸಮಯಗಳಿಂದ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ ತೊರೆಯುತ್ತಾರೆ ಎಂಬ ಊಹಾಪೋಹಗಳ ಬಗ್ಗೆ ನಿನ್ನೆ ನಡೆದ ಸಭೆಯಲ್ಲಿ ಕಾರ್ಯಕರ್ತರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಪ್ರಮೋದ್ ಮಧ್ವರಾಜ್ ಅವರು ಕಳೆದ ಹಲವು ಸಮಯದಿಂದ ಪಕ್ಷದ ಪರವಾಗಿ ಯಾವುದೇ ಹೇಳಿಕೆ ನೀಡಿದೆ ತಟಸ್ಥವಾಗಿದ್ದು, ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಕೊಳ್ಳದಿರುವುದು ಹಲವು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಇದೀಗ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಪಕ್ಷದ ನಾಯಕತ್ವದ ಕೊರತೆ ಎದ್ದುಕಾಣುತ್ತಿದ್ದು, ಈ ಬಗ್ಗೆ ಪಕ್ಷ ನಾಯಕರು ಸೂಕ್ತ ಕ್ರಮ ಕೈಕೊಳ್ಳಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ನಿನ್ನೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆಯಾಗಿದ್ದರೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್‍ನ ಕಾರ್ಯಕರ್ತರು ಸಭೆಗೆ ಆಗಮಿಸಿ ನಾಯಕತ್ವದ ಕೊರತೆ ಕುರಿತು ಅಸಮಾಧಾನ ಹೊರ ಹಾಕಿದರು. ಹಾಗೂ ಮುಂದಿನ ವಿಧಾನ ಸಭಾ ಚುನಾವಣೆಗೆ ಪಕ್ಷದ ನಾಯಕರು ಯಾರನ್ನೂ ಸೂಚಿಸುತ್ತಾರೋ ಅವರಿಗೆ ಬೆಂಬಲ ನೀಡುವುದಾಗಿ ತಿಳಿಸಿದರು. ಈ ವೇಳೆ ಉಡುಪಿ ಬ್ಲಾಕ್ ಕಾಂಗ್ರೆಸ್ ನ ಕಾರ್ಯಕರ್ತರೂ ಕೂಡಾ ಇದಕ್ಕೆ ಸಹಮತ ಸೂಚಿಸಿ, ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಮೊದಲಿನಿಂದಲೂ ಮೊಗವೀರ ಸಮುದಾಯದ ಅಭ್ಯರ್ಥಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಹಾಕಲಾಗುತ್ತಿತ್ತು. ಈ ನಿಟ್ಟಿನಲ್ಲಿ ಮಾಜಿ ಜಲ್ಲಾ ಪಂಚಾಯತ್ ಸದಸ್ಯ ದಿವಾಕರ್ ಕುಂದರ್ ಅವರ ಹೆಸರನ್ನು ಮುಂದಿನ ಚುನಾವಣೆಗೆ ಸೂಚಿಸಿ, ಪಕ್ಷದ ನಿರ್ಧಾರವನ್ನು ಬೆಂಬಲಿಸುವುದಾಗಿ ಕಾರ್ಯಕರ್ತರು ಒಮ್ಮತ ಸೂಚಿಸಿದರು.

10 ನಿಮಿಷ ಮೊದಲು ಬಂದು ಸಭೆಯಿಂದ ಕಾಲ್ಕಿತ್ತ ಪ್ರಮೋದ್: ನಿನ್ನೆ 4 ಗಂಟೆಗೆ ನಡೆಯುಬೇಕಿದ್ದ ಸಭೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು 15 ನಿಮಿಷ ಮುಂಚಿತವಾಗಿ ಬಂದು ಅತಿಥಿಗಳಂತೆ 10 ನಿಮಿಷ ಇದ್ದು ತೆರಳಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಅಸಮಧಾನ ಹೊರಹಾಕಿದ್ದಾರೆ. ಹಾಗೂ ಪಕ್ಷ ಬಿಡುವವರು ಬಿಡುವುದಾದರೆ ಬಿಡಲಿ ಪಕ್ಷ ಯಾರನ್ನೂ ಸೂಚಿಸಿದರೂ ನಾವು ಅವರಿಗೆ ಬೆಂಬಲ ವ್ಯಕ್ತಪಡಿಸುತ್ತೇವೆ. ಆದಷ್ಟು ಬೇಗ ಈ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಹಾಗೂ ಈಗಾಗಲೇ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವ ಹಾಗೂ ಮುನ್ನಡೆಸಲು ನಾಯಕತ್ವದ ಕೊರತೆ ಇರುವುದರಿಂದ ಯುವ ಕಾರ್ಯಕರ್ತರು ಪಕ್ಷ ಸೇರ್ಪಡೆಗೊಳ್ಳುವುದೂ ಕಡಿಮೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಸಭೆಯಲ್ಲಿ ಹಾಜರಿದ್ದ ವಿಧಾನ ಸಭೆಯ ವಿರೋಧ ಪಕ್ಷದ ಉಪ ನಾಯಕ ಯುಟಿ ಖಾದರ್, ನೂತನ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾ ಅಧ್ಯಕ್ಷ ಅಶೋಕ್ ಕೊಡವೂರು ಅವರಲ್ಲಿಯೂ ತಮ್ಮ ಅಭಿಪ್ರಾಯವನ್ನು ಕಾರ್ಯಕರ್ತರು ಸೂಚಿಸಿದರು. ಈ ನಡುವೆ ಕೆಲ ಕಾಂಗ್ರೆಸ್ಸಿಗರು ಜಿಲ್ಲಾ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೆ ಪಕ್ಷದ ಅನೇಕ ಸದಸ್ಯರು ಈಗಲೂ ಪ್ರಮೋದ್ ಮಧ್ವರಾಜ್ ಅವರನ್ನು ತಮ್ಮ ನಾಯಕ ಎಂದು ಪರಿಗಣಿಸಿದ್ದಾರೆ ಮತ್ತು ಅವರ ನೇತೃತ್ವದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂಬೂದು ತಿಳಿದು ಬಂದಿದೆ.

ಮತ್ತೊಂದೆಡೆ ಉಡುಪಿ ಜಿಲ್ಲಾ ಕಾಂಗ್ರೆಸ್‍ಗಿಂತ ಪ್ರಮೋದ್ ಮಧ್ವರಾಜ್ ರಾಜ್ಯ ರಾಜಕಾರಣಕ್ಕೆ ಸೇರಲು ಹೆಚ್ಚು ಒತ್ತು ನೀಡುತ್ತಿರುವಂತೆ ಕಾಣುತ್ತಿದೆ. ಹಾಗೂ ಅವರಿಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ರಾಜ್ಯ ನಾಯಕರೇ ತೆಗೆದು ಕೊಳ್ಳುತ್ತಿದ್ದಾರೆ ಎಂಬ ಮಾತುಗಳೂ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ಉಡುಪಿ ಕಾಂಗ್ರೆಸ್ ನಲ್ಲಿ ಮತ್ತೆ ಭಿನ್ನಮತ ಎದ್ದಿರುವುದು ಬಹಿರಂಗ ಪಡಿಸುತ್ತಿರುವಂತಿದೆ. ಇತ್ತ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ನಂತರ ಉಡುಪಿ ಕಾಂಗ್ರೆಸ್‍ನ ಪ್ರಮುಖ ನಾಯಕರಾಗಿದ್ದ ‘ಪ್ರಮೋದ್ ಮಧ್ವರಾಜ್’ ಅವರು ತೆರೆಗೆ ಮರೆಗೆ ಸರಿದಂತಾಗಿದ್ದು, ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ.

ಪ್ರಸ್ತುತ ಪಕ್ಷದಲ್ಲಿ ಉದ್ಭವವಾಗಿರು ನಾಯಕತ್ವದ ಕೊರತೆಯಿಂದ ಮುಂಬರುವ ಚುನಾವಣೆಯ ಸಂಧರ್ಭದಲ್ಲಿ ಯಾವ ನಾಯಕರ ನೇತೃತ್ವದಲ್ಲಿ ಕೆಲಸ ಮಾಡುವುದು ಎಂಬ ಪ್ರಶ್ನೆ ಪಕ್ಷದ ಕಾರ್ಯಕರ್ತರಿಗೆ ಕಾಡುತ್ತಿದೆ. ಸದ್ಯ ಎದ್ದಿರುವ ನಾಯಕತ್ವದ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಯಾವ ರೀತಿಯ ಬದಲಾವಣೆಗೆ ದಾರಿ ಮಾಡಿಕೊಡಲಿದೆ ಎಂಬ ಪ್ರಶ್ನೆಯೂ ಕಾಡುತ್ತಿದೆ.  

Leave a Reply

Your email address will not be published. Required fields are marked *

error: Content is protected !!