ಕುಂದಾಪುರ: ಚಿಪ್ಪು ವ್ಯಾಪಾರಿಗೆ ಲಕ್ಷಾಂತರ ರೂ. ವಂಚನೆ
ಕುಂದಾಪುರ ಫೆ.28(ಉಡುಪಿ ಟೈಮ್ಸ್ ವರದಿ): ಕುಂದಾಪುರದ ಚಿಪ್ಪು ವ್ಯಾಪಾರಿ ಕೆ.ಹರೀಶ್ ಖಾರ್ವಿ ಅವರಿಗೆ ಲಕ್ಷಾಂತರ ರೂ ವಂಚಿಸಿರುವುದಾಗಿ ಬೆಳಗಾವಿ ಮೂಲದ ರೋಹಿಣಿ ಚಿದಂಬರ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ.
ಚಿಪ್ಪು ವ್ಯಾಪಾರ ಮಾಡಿಕೊಂಡಿರುವ ಕೆ ಹರೀಶ್ ಖಾರ್ವಿ ಅವರೊಂದಿಗೆ ಬೆಳಗಾವಿ ಮೂಲದ ರೋಹಿಣಿ ಚಿದಂಬರ ಮುಸುಂಡೆ ಎಂಬವರು ಹಲವಾರು ವರ್ಷಗಳಿಂದ 41,36,003 ರೂ ನಷ್ಟು ವ್ಯವಹಾರ ಮಾಡಿದ್ದು, ಈ ಪೈಕಿ 39,32,500 ಹಣವನ್ನು ಪಾವತಿಸಲಾಗಿದೆ. ಆದರೆ 2,03,500 ಹಣವನ್ನು ಬಾಕಿ ಇರಿಸಿಕೊಂಡಿದ್ದು ಕೇಳಿದರೂ ಹಣ ಪಾವತಿಸಿರುವುದಿಲ್ಲ. ಅಲ್ಲದೇ ಪುನಃ ಚಿಪ್ಪು ಕಳುಹಿಸಿಕೊಡುವಂತೆ ಹೇಳಿ ನಂತರ ಹಣ ಪಾವತಿ ಮಾಡುವುದಾಗಿ ಹೇಳಿದ್ದು, ಅದರಂತೆ ಕೆ ಹರೀಶ್ ಅವರು ಚಿಪ್ಪು ಕಳುಹಿಸಿಕೊಟ್ಟಿದ್ದಾರೆ. ಆದರೆ ಬಳಿಕ ಚಿಪ್ಪು ಪಡೆದುಕೊಂಡು ಹಣಪಾವತಿಸದೇ ವಂಚಿಸಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.