| ಉಡುಪಿ, ಫೆ.28: ಉಕ್ರೇನ್‌ನಲ್ಲಿ ಸಿಲುಕಿದ್ದ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳ ಪೈಕಿ ಉದ್ಯಾವರದ ಮೃಣಾಲ್ ತಾಯ್ನಾಡಿಗೆ ಮರಳಿದ್ದಾರೆ.
ಉಕ್ರೇನ್ ನಲ್ಲಿ ಸಿಲುಕಿರುವ ಉಡುಪಿ ಜಿಲ್ಲೆಗೆ ಸೇರಿದ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಮೃಣಾಲ್ ಅವರು ನಿನ್ನೆ ಸಂಜೆ ರೊಮೇನಿಯಾ ಮೂಲಕ ಹೊಸದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ ಎಂದು ತಿಳಿದು ಬಂದಿದೆ.
ಉದ್ಯಾವರ ಸಾಲ್ಮರದ ರಾಜೇಶ್ ಎಂಬವರ ಪುತ್ರ ಮೃಣಾಲ್ ಜಿಲ್ಲೆಯಲ್ಲೇ ಮೊದಲಿಗರಾಗಿ ನಿನ್ನೆ ಸಂಜೆ 6:00 ಗಂಟೆಗೆ ಹೊಸದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಉಕ್ರೇನಿನಿಂದ ಆಗಮಿಸಿದ ಭಾರತೀಯ ವಿದ್ಯಾರ್ಥಿಗಳೇ ತುಂಬಿದ್ದ ಈ ವಿಮಾನದಲ್ಲಿ ಕರ್ನಾಟಕದ ಏಕೈಕ ವಿದ್ಯಾರ್ಥಿ ಇವರಾಗಿದ್ದರು. ಯುದ್ಧಗ್ರಸ್ಥ ಉಕ್ರೇನಿನಿಂದ ಆಗಮಿಸಿದ ಉಳಿದೆಲ್ಲಾ ರಾಜ್ಯಗಳ ವಿದ್ಯಾರ್ಥಿಗಳನ್ನು ಸ್ವಾಗತಿಸಲು, ಅವರಿಗೆ ಹುಟ್ಟೂರಿಗೆ ತೆರಳಲು ವಿಮಾನ ಸೇರಿದಂತೆ ಇತರ ವ್ಯವಸ್ಥೆ ಕಲ್ಪಿಸಲು ಆಯಾ ರಾಜ್ಯಗಳ ಅಧಿಕಾರಿಗಳು ವಿಮಾನ ನಿಲ್ದಾಣ ದಲ್ಲಿದ್ದರೂ, ಆದರೆ ಮೃಣಾಲ್ ಅವರಿಗೆ ಮಾರ್ಗದರ್ಶನ ನೀಡಲು, ಸ್ವಾಗತಿಸಲು ಕರ್ನಾಟಕದಿಂದ ಯಾವೊಬ್ಬ ಅಧಿಕಾರಿಯೂ ಅಲ್ಲಿ ಉಪಸ್ಥಿತರಿರಲಿಲ್ಲ ಎಂದು ತಿಳಿದುಬಂದಿದೆ. ಬಳಿಕ ರಾತ್ರಿಯ ವೇಳೆ ಕರ್ನಾಟಕದ ಅಧಿಕಾರಿಗಳು ಮೃಣಾಲ್ ರನ್ನು ಸಂಪರ್ಕಿಸಿದ್ದು ತಡ ರಾತ್ರಿಯೇ ಬೆಂಗಳೂರಿಗೆ ಪ್ರಯಾಣಿಸಲು ವ್ಯವಸ್ಥೆ ಮಾಡಿದ್ದಾರೆ. ಇಂದು ಬೆಳಗ್ಗಿನ ಜಾವ ಅವರು ಬೆಂಗಳೂರು ತಲುಪಲಿದ್ದು, ಬೆಂಗಳೂರಿನಿಂದ ಮೊದಲ ವಿಮಾನದಲ್ಲಿ ಮಂಗಳೂರಿಗೆ ಬರಲು ವ್ಯವಸ್ಥೆ ಮಾಡಲಾಗಿದೆ ಎಂದು ಮೃಣಾಲ್ ಅವರ ತಂದೆ ರಾಜೇಶ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಇನ್ನುಳಿದ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸುರಕ್ಷಿತವಾಗಿದ್ದು, ದೇಶ ತೊರೆಯುವ ಬಗ್ಗೆ ಮಾಹಿತಿಗಾಗಿ ಕಾಯುತಿದ್ದಾರೆ ಎಂದು ಜಿಲ್ಲಾಡಳಿತ ನೀಡಿರುವ ಮಾಹಿತಿ ತಿಳಿಸಿದೆ.ಈ ಪೈಕಿ ಹೊಸದಿಲ್ಲಿಯ ಕರ್ನಾಟಕ ಭವನದ ವ್ಯವಸ್ಥಾಪಕರಾಗಿರುವ ಪರ್ಕಳ ನಿವಾಸಿ ಬಿ ವಿ ರಾಘವೇಂದ್ರ ಅವರ ಪುತ್ರ ನಿಯಮ್ ರಾಘವೇಂದ್ರ ಅವರು ರೊಮೇನಿಯಾ ಗಡಿಯ ಮೂಲಕ ಉಕ್ರೇನ್ ತೊರೆದಿದ್ದು, ರೊಮೇನಿಯಾದಿಂದ ಶೀಘ್ರವೇ ಭಾರತದತ್ತ ಪ್ರಯಾಣ ಬೆಳೆಸುವ ನಿರೀಕ್ಷೆ ಇದೆ.
| |