ಮಾ.10 ರಿಂದ 20 ಸ್ವರಾಜ್ ಮೈದಾನದಲ್ಲಿ ‘ಕಾರ್ಕಳ ಉತ್ಸವ’

ಕಾರ್ಕಳ ಫೆ.28: ಜೈನ ಕಾಶಿ ಎಂದೇ ಕರೆಯಲ್ಪಡುವ ಕಾರ್ಕಳ ಐತಿಹಾಸಿಕ ಕ್ಷೇತ್ರವಾಗಿದ್ದು ಅಗಾಧ ಸಂಸ್ಕೃತಿ, ಶ್ರೀಮಂತಿಕೆ ಹೊಂದಿದ ತಾಲೂಕಾಗಿದೆ. ಇದು ಹಲವು ಪ್ರೇಕ್ಷಣಿಯ ಸ್ಥಳಗಳನ್ನು ಒಳಗೊಂಡಿದ್ದು, ಇಲ್ಲಿನ ಕಲೆ, ಸಂಸ್ಕೃತಿ, ಕ್ರೀಡೆಗಳಿಗೆ ವಿಶ್ವ ಮನ್ನಣೆ ದೊರಕಿಸುವಲ್ಲಿ ಕಾರ್ಕಳದ ಪ್ರತಿಭೆಗಳ ಸೇವೆ ಅಪಾರವಾಗಿದೆ ಎಂದು ಇಂಧನ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.

ನಿನ್ನೆ ಕಾರ್ಕಳದ ಸ್ವರಾಜ್ ಮೈದಾನದಲ್ಲಿ ನಡೆದ ಕಾರ್ಕಳ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಕಳ ಉತ್ಸವದ ಭಾಗವಾಗಿ ಮಾ.10 ರಿಂದ17ರ ತನಕ ಗಾಂಧಿ ಮೈದಾನದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಮಾ.18 ರಿಂದ 20ರ ತನಕ ಸ್ವರಾಜ್ ಮೈದಾನದಲ್ಲಿ ಉತ್ಸವ ನಡೆಯುತ್ತದೆ. ಉತ್ಸವ ಕೇವಲ ಮನರಂಜನೆಗೆ ಸೀಮಿತವಾಗದೆ ಎಲ್ಲ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಿದ್ದೇವೆ ಎಂದು ತಿಳಿಸಿದರು.

ಹಾಗೂ ಹಿರಿಯರು ಸಾಹಿತ್ಯ ಕೃಷಿ, ಸಾಂಸ್ಕೃತಿಕ ಕೊಡುಗೆಯನ್ನಷ್ಟೇ ಅಲ್ಲ ಧಾರ್ಮಿಕವಾಗಿಯೂ ಕಾರ್ಕಳವನ್ನು ಕಟ್ಟಿದ್ದಾರೆ. ಕಾರ್ಕಳ ಎಲ್ಲರ ಶ್ರಮದಿಂದ ಕಾರ್ಕಳ ಬೆಳೆದಿದೆ. ಇದು ನಮ್ಮ ನಿಮ್ಮೆಲ್ಲರ ಉತ್ಸವ. ಉತ್ಸವದ ಯಶಸ್ಸಿಗಾಗಿ 37 ಸಮಿತಿಗಳು ರಚಿಸಲಾಗಿದ್ದು, ಉತ್ಸವವನ್ನು ಯಶಸ್ಸುಗೊಳಿಸುವ ಮೂಲಕ ದಾಖಲೆ ಬರೆಯಲಿದೆ. ಆದ್ದರಿಂದ ಎಲ್ಲಿಯೂ ಯಾವ ಕುಂದುಕೊರತೆ ಬಾರದಂತೆ ಪ್ರತಿಯೊಬ್ಬರೂ ಗಮನಿಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಮಾತನಾಡಿ, ಕಾರ್ಕಳ ಉತ್ಸವದ ಕಲ್ಪನೆ ಸಾಕಾರಗೊಳ್ಳಲಿ ಇದರಿಂದ ಹಲವಾರು ಪ್ರತಿಭೆಗಳ ಅನಾವರಣಗೊಳ್ಳಲಿ ಎಂದು ಶುಭ ಹಾರೈಸಿದರು. ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ವಿನಯ ಹೆಗ್ಡೆ ಅವರು ಮಾತನಾಡಿ, ಕಾರ್ಕಳದ ಜನ ಶ್ರೇಷ್ಠರು ಸಾಧನಶೀಲ ರಾಗಿದ್ದಾರೆ, ಸಚಿವ ಸುನಿಲ್ ಕುಮಾರ್ ಕ್ಷೇತ್ರಕ್ಕೆ ಅಭಿವೃದ್ಧಿ ಮೂಲಕ ಹೊಸತನವನ್ನು ನೀಡಿದ್ದಾರೆ ಎಂದರು.

ಕಾರ್ಕಳ ಉತ್ಸವದ ಪೂರ್ವ ತಯಾರಿಯಾಗಿ ಸಾವಿರ ಬಲೂನ್‌ಗಳನ್ನು ಆಕಾಶದ ಕಡೆಗೆ ತೇಲಿ ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾಡಿನ ವಿವಿಧ ಕಲಾತಂಡಗಳು ಪ್ರದರ್ಶ ನೀಡಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತ್ತು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಜಂಟಿ ನಿದೇಶಕ ಮಲ್ಲಿಕಾರ್ಜುನ ಸ್ವಾಮಿ, ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕಿ ನಿರ್ದೇಶಕಿ ಪೂರ್ಣಿಮ, ಕುಂದಾಪುರ ವಿಭಾಗ ಸಹಾಯಕ ಕಮಿಷನರ್ ರಾಜು, ತಹಸೀಲ್ದಾರ್‌ ಪುರಂದರ ಕೆ., ಶಿಲ್ಪಿ ಸತೀಶ್ ಆಚಾರ್ಯ ಉದ್ಯಮಿ ಸುಬ್ರಾಯ ಪೈ, ಸಂತೋಷ್ ಡಿಸಿಲ್ವ, ಬಾಲಾಜಿ ಅಯ್ಯಪ್ಪ ಮಂದಿರದ ಬಾಲಕೃಷ್ಣ ಹೆಗ್ಡೆ , ನಿವೃತ್ತ ಶಿಕ್ಷಕ ಮುನಿರಾಜ ರೆಂಜಾಳ ,  ಪ್ರಭಾಕರ ಶೆಟ್ಟಿ, ರಾಜೇಂದ್ರ ಭಟ್  ಉಪಸ್ಥಿತರಿದ್ದರು.

1 thought on “ಮಾ.10 ರಿಂದ 20 ಸ್ವರಾಜ್ ಮೈದಾನದಲ್ಲಿ ‘ಕಾರ್ಕಳ ಉತ್ಸವ’

  1. Why to spoil the nature by flying baloons in the sky, you know how harmful for Birds and nature. Instead plant thousand trees in memory of the program

Leave a Reply

Your email address will not be published. Required fields are marked *

error: Content is protected !!