ಕುಂದಾಪುರ: ಫ್ಲೆಕ್ಸ್ ಅಳವಡಿಸುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಯುವಕ ಸಾವು- ಇನ್ನೋರ್ವ ಗಂಭೀರ
ಕುಂದಾಪುರ, ಫೆ.26: ಇಲ್ಲಿನ ಸೌಕೂರಿನ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಶುಭ ಕೋರುವ ಫ್ಲೆಕ್ಸ್ ಅಳವಡಿಸುತ್ತಿದ್ದ ವೇಳೆ ಫ್ಲೆಕ್ಸ್‌ಗೆ ವಿದ್ಯುತ್ ತಂತಿ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ.
ಸೌಕೂರು ನಿವಾಸಿ ಪ್ರಶಾಂತ ದೇವಾಡಿಗ(26) ಮೃತಪಟ್ಟ ಯುವಕ. ಘಟನೆಯಲ್ಲಿ ಶ್ರೀಧರ ದೇವಾಡಿಗ(45)ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಆಯೋಜಿಸಲಾಗಿತ್ತು. ಆ ಪ್ರಯುಕ್ತ ನಿನ್ನೆ ರಾತ್ರಿ ಜಾತ್ರೋತ್ಸವಕ್ಕೆ ಶುಭಕೋರುವ ಬ್ಯಾನರ್ ಅಳವಡಿಸಲು ಪ್ರಶಾಂತ ಹಾಗೂ ಶ್ರೀಧರ ಅವರು ಬಂದಿದ್ದರು.
ಪ್ಲೆಕ್ಸ್ ಅಳವಡಿಸುತ್ತಿದ್ದ ಸ್ಥಳದ ಸಮೀಪವೇ ವಿದ್ಯುತ್ ತಂತಿ ಹಾದು ಹೋಗಿದ್ದನ್ನು ಗಮನಿಸದೆ ಇಬ್ಬರು ಫ್ಲೆಕ್ಸ್ ಹಾಕಲು ಮುಂದಾಗಿದ್ದಾರೆ. ಈ ವೇಳೆ ಫ್ಲೆಕ್ಸ್ ನ್ನು ಮೇಲಕ್ಕೆತ್ತಿ ಕಟ್ಟುತ್ತಿದ್ದ ವೇಳೆ ಅದು ವಿದ್ಯುತ್ ತಂತಿಗೆ ತಗುಲಿದೆ. ಪರಿಣಾಮ ಪ್ರಶಾಂತ ದೇವಾಡಿಗ ಹಾಗೂ ಶ್ರೀಧರ ದೇವಾಡಿಗ ವಿದ್ಯುತ್ ಆಘಾತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಇಬ್ಬರನ್ನು ರಕ್ಷಿಸುವ ಪ್ರಯತ್ನ ನಡೆಸಲಾಯಿತಾದರೂ ಅಷ್ಟರಲ್ಲಾಗಲೇ ಪ್ರಶಾಂತ ದೇವಾಡಿಗ ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ.