ದಲಿತ ಕೂಲಿ ಕಾರ್ಮಿಕರ ಹತ್ಯೆ ಪ್ರಕರಣ- ಬಿಜೆಪಿ ಕಾರ್ಯಕರ್ತ ಪೊಲೀಸ್ ವಶಕ್ಕೆ

ಉಜಿರೆ, ಫೆ.26: ಕನ್ಯಾಡಿಯ ಕೂಲಿ ಕಾರ್ಮಿಕ, ದಲಿತ ಸಮುದಾಯದ ದಿನೇಶ್ ಎಂಬವರ  ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಜರಂಗದಳ, ಬಿಜೆಪಿ ಕಾರ್ಯಕರ್ತ ಕಿಟ್ಟಿ ಯಾನೆ ಕೃಷ್ಣ ಡಿ. ಎಂಬಾತನನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಕೃಷ್ಣ ದಿನೇಶ್ ಗೆ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದ್ದ.‌ ಪರಿಣಾಮ ಗಂಭೀರವಾಗಿ ಹಲ್ಲೆಗೊಳಗಾದ ದಿನೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ  ಫಲಿಸದೆ ಸಾವನ್ನಪ್ಪಿದ್ದರು. ತನ್ನ ಪುತ್ರನಿಗೆ ಹಲ್ಲೆ ನಡೆಸಿದ್ದಾರೆ ಎಂದು ಮೃತರ ತಾಯಿ ಪದ್ಮಾವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಧರ್ಮಸ್ಥಳ ಪೊಲೀಸರು ಆರೋಪಿ ಕೃಷ್ಣನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಕನ್ಯಾಡಿಯ ದಿನೇಶ್ (40) ಕೊಲೆಯಾದ ವ್ಯಕ್ತಿ. ಧರ್ಮಸ್ಥಳ ನಿವಾಸಿ ಕಿಟ್ಟ ಯಾನೆ ಕೃಷ್ಣ ಡಿ. ಆರೋಪಿ ಯಾಗಿದ್ದು ತಲೆಮರೆಸಿಕೊಂಡಿದ್ದಾನೆ. ಬುಧವಾರ ಬೆಳಿಗ್ಗೆ 11 ಗಂಟೆಗೆ ಕನ್ಯಾಡಿಯ ದಿನೇಶ್ ಅವರ ಅಂಗಡಿ ಬಳಿ ಬಂದ ಕೃಷ್ಣ, ಜಾಗದ ದಾಖಲೆಗಳ ವಿಚಾರದಲ್ಲಿ ಜಗಳ ತೆಗೆದು, ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಅದೇ ದಿನ ರಾತ್ರಿ ದಿನೇಶ್‌ ತೀವ್ರ ಹೊಟ್ಟೆನೋವಿನಿಂದ ಬಳಲಿದ್ದರು. ಮರುದಿನ ಆರೋಪಿ ಕೃಷ್ಣನ ಮನೆಗೆ ಬಂದ ದಿನೇಶ್‌ ಕುಟುಂಬದವರು ‘ನೀನೇ ಹಲ್ಲೆ ನಡೆಸಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗು’ ಎಂದು ಒತ್ತಾಯಿಸಿದ್ದರು.

ಅದರಂತೆ ಫೆ. 24ರಂದು ದಿನೇಶ್‌ ಅವರನ್ನು ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿದ ಕೃಷ್ಣ, ‘ಈತ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾನೆ’ ಎಂದು ವೈದ್ಯರ ಬಳಿ ಹೇಳಿದ್ದ. ಆದರೆ, ದಿನೇಶ್‌ ಅವರ ಪತ್ನಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಕೃಷ್ಣನೇ ದಿನೇಶ್‌ ಮೇಲೆ ಹಲ್ಲೆ ಮಾಡಿರುವುದಾಗಿ ತಿಳಿಸಿದ್ದಾರೆ. ಗುರುವಾರ ಮಧ್ಯರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ದಿನೇಶ್‌ ಮೃತಪಟ್ಟಿದ್ದಾರೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಕೃಷ್ಣ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ, ಸೋತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಯುವಕನ ಹತ್ಯೆ ಸಿದ್ದರಾಮಯ್ಯ ಖಂಡನೆ: ‘ಧರ್ಮಸ್ಥಳದಲ್ಲಿ ನಡೆದಿರುವ ದಲಿತ ಯುವಕ‌ ದಿನೇಶ್ ಹತ್ಯೆ ಖಂಡನೀಯ. ಕೊಲೆ ಆರೋಪಿ ಬಜರಂಗ ದಳದ ನಾಯಕ‌ ಆಗಿರುವುದರಿಂದ ಮೃತನ ಕುಟುಂಬ ಆತಂಕಕ್ಕೀಡಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಪೊಲೀಸರು ರಾಜಕೀಯ ಪ್ರಭಾವಕ್ಕೆ‌‌ ಮಣಿಯದೆ ಕೊಲೆ ಆರೋಪಿಯ‌ನ್ನು ತಕ್ಷಣ ಬಂಧಿಸಬೇಕು ಮತ್ತು ಮೃತ ಯುವಕನ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಹಿಂದುಗಳ ರಕ್ಷಣೆಯ ಮಂತ್ರ ಜಪಿಸುತ್ತಿರುವ ಬಿಜೆಪಿ, ಧರ್ಮಸ್ಥಳದ ದಲಿತ ಯುವಕನನ್ನು ಹತ್ಯೆ ಮಾಡಿರುವ ಕೊಲೆಗಾರನ ರಕ್ಷಣೆಗೆ ನಿಂತಿರುವುದು ಆತ್ಮವಂಚನೆಯ ನಡವಳಿಕೆ. ಸಾವಿನ ರಾಜಕೀಯ ಮಾಡದೆ ಮೃತ ಯುವಕನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದ್ದಾರೆ 

Leave a Reply

Your email address will not be published. Required fields are marked *

error: Content is protected !!