ಕುಂದಾಪುರ: ಫೆ.27- ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ “ಹುಟ್ಟೂರ ಸನ್ಮಾನ “

ಉಡುಪಿ ಫೆ.26 (ಉಡುಪಿ ಟೈಮ್ಸ್ ವರದಿ)‌: ವಕ್ವಾಡಿಯ ಪ್ರವೀಣ್ ಕುಮಾರ್ ಶೆಟ್ಟಿ ಹುಟ್ಟೂರ ಸನ್ಮಾನ ಸಮಿತಿ ವತಿಯಿಂದ ಪ್ರವೀಣ್ ಕುಮಾರ್ ಶೆಟ್ಟಿ ವಕ್ಕಾಡಿಗೆ ನೀಡಿದ ಕೊಡುಗೆಗಾಗಿ, ಗ್ರಾಮಕ್ಕೆ ಬಂದ ಪ್ರಥಮ ರಾಜ್ಯೋತ್ಸವ ಪ್ರಶಸ್ತಿಯನ್ನು ಅದ್ಧೂರಿಯಾಗಿ ಸಂಭ್ರಮಿಸುವ ಉದ್ದೇಶದಿಂದ ಫೆ.27 ರಂದು ಪ್ರವೀಣ್ ಕುಮಾರ್ ಶೆಟ್ಟಿರಿಗೆ “ಹುಟ್ಟೂರ ಸನ್ಮಾನ ” ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಭಿನಂದನಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮ ದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು ಪ್ರಸಾದ್ ನೇತ್ರಾಲಯಕ್ಕೆ ಆಂಬುಲೆನ್ಸ್ ಹಸ್ತಾಂತರ ಮಾಡಲಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಅವರು ಆರ್ಥಿಕ ಅಶಕ್ತರಿಗೆ ಧನ ಸಹಾಯ ವಿತರಿಸಲಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಬಹುಮಾನ ವಿತರಣೆ ನಡೆಸಲಿದ್ದಾರೆ, ಮಂಗಳೂರಿನ ಶ್ರೀರಾಮಕೃಷ್ಣ ಕಾಲೇಜು ಪ್ರಾಂಶುಪಾಲ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಅಭಿನಂದನಾ ಭಾಷಣ ನೆರವೇರಿಸಲಿದ್ದಾರೆ.

ವಕ್ವಾಡಿ ಪ್ರವೀಣ್ ಶೆಟ್ಟಿ ಹುಟ್ಟೂರ ಸನ್ಮಾನ ಸಮಿತಿ ಅಧ್ಯಕ್ಷ ಬಸ್ರೂರು ಅಪ್ಪಣ್ಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ವಿರೋಧ ಪಕ್ಷದ ಉಪನಾಯಕ ಯು.ಟಿ ಖಾದರ್, ಉಡುಪಿ ಶಾಸಕ ರಘುಪತಿ ಭಟ್, ಬೈಂದೂರು ಶಾಸಕ ಬಿಎಂ ಸುಕುಮಾರ್ ಶೆಟ್ಟಿ, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ವಿಧಾನ ಪರಿಷತ್ ನ ಮಾಜಿ ಸಭಾಪತಿ ಪ್ರತಾಪ್ ಶೆಟ್ಟಿ, ವಿಶ್ವವಾಣಿ ದಿನಪತ್ರಿಕೆ ಹಿರಿಯ ಸಂಪಾದಕ ವಿಶ್ವೇಶ್ವರ ಭಟ್, ಮೂಡಬಿದರೆಯ ಆಳ್ವಾಸ್ ಪ್ರತಿಷ್ಠಾನದ ಮೋಹನ್ ಆಳ್ವ,  ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಕನ್ನಡಿಗಸ್ ಯುಎಇ ಇದರ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀನಿವಾಸ ಎಂ, ವಿಶ್ವಬಂಟರ ಬಳಗ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟ, ಎಂಆರ್ ಜಿ ಗ್ರೂಪ್ ನ ಚೇರ್ಮನ್ ಕೆ ಪ್ರಕಾಶ್ ಶೆಟ್ಟಿ, ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ರೇಡಿಷನ್ ಬ್ಲೂ ಹೋಟೆಲ್ ಬೆಂಗಳೂರು ಇದರ ವ್ಯವಸ್ಥಾಪಕ ಅಧ್ಯಕ್ಷರು ಕೆ ನಾಗರಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದ ಫೆ. 27 ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 10.30 ರ ವರೆಗೆ ವಕ್ವಾಡಿಯ ಫಾರ್ಚೂನ್ ವಿಲೇಜ್ ಹೋಟೆಲ್‌ ಹತ್ತಿರ ನಡೆಯಲಿದ್ದು, ಬೆಳಿಗ್ಗೆ ಉಡುಪಿಯ ಪ್ರಸಾದ ನೇತಾಲಯದ ತಜ್ಞ ವೈದ್ಯರಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಲಿದೆ. ಈ ವೇಳೆ ಅಗತ್ಯವಿರುವವರಿಗೆ ಉಚಿತ ಕನ್ನಡಕ ನೀಡಲಾಗುವುದು ಹಾಗೂ ಶಸ್ತ್ರ ಚಿಕಿತ್ಸೆಯ ಅಗತ್ಯವಿರುವವರಿಗೆ ಉಚಿತ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು. ಹಾಗೂ ಕುಂದಾಪುರ ರೂರಲ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇಲ್ಲಿನ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು, ಈ ಶಿಬಿರದಲ್ಲಿ ಸಾಮಾನ್ಯ ಮತ್ತು ವಿಶೇಷ ಕಾಯಿಲೆಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತದೆ. ಈ ಆರೋಗ್ಯ ತಪಾಸಣಾ ಶಿಬಿರವನ್ನು ಕುಂದಾಪುರ ಶಾಸಕ‌ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಲತಾ ಶೆಟ್ಟಿ ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಲಿದ್ದಾರೆ.

ಈ ವೇಳೆ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸ ಲಿದ್ದಾರೆ. ಮಧ್ಯಾಹ್ನ 2.00 ಗಂಟೆಗೆ ಆಹ್ವಾನಿತ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ. ವಿಜೇತ ತಂಡಕ್ಕೆ ಫಲಕ ಹಾಗೂ ನಗದು ಬಹುಮಾನ ನೀಡಲಾಗುವುದು. ಸಂಜೆ 5 ಗಂಟೆಗೆ ಅಭಿನಂದನಾ ಸಮಾರಂಭ ನಡೆಯಲಿದ್ದು, ಧಾರ್ಮಿಕ, ರಾಜಕೀಯ ನಾಯಕರುಗಳು, ಗಣ್ಯರು ಹಾಗೂ ಚಲನಚಿತ್ರ ನಟರು ಭಾಗವಹಿಸಲಿದ್ದಾರೆ. ರಾತ್ರಿ 8.30 ರಿಂದ ಆಳ್ವಾಸ್ ಪ್ರತಿಷ್ಠಾನ, ಮೂಡಬಿದರೆ ಇಲ್ಲಿನ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದು ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಹುಟ್ಟೂರ ಸನ್ಮಾನ ಸಮಿತಿ ತಿಳಿಸಿದೆ.

ವಕ್ವಾಡಿ ಪುವೀಣ್ ಕುಮಾರ್ ಶೆಟ್ಟಿ ಅವರು ಓರ್ವ ಸಜನಶೀಲ ಉದ್ಯಮಿ, ಆತ್ಮ ಕನ್ನಡಾಭಿಮಾನಿಯಾಗಿದ್ದು, ವಕ್ಕಾಡಿ ಗ್ರಾಮದವರಾದ ಪ್ರವೀಣ್ ಕುಮಾರ್ ಶೆಟ್ಟರು ತನ್ನ ಗ್ರಾಮಕ್ಕೆ ನೀಡಿದ ಕೊಡುಗೆ ಅಪಾರ. ಬದುಕಿನ ಎಲ್ಲಾ ಸಾಧ್ಯತೆಗಳನ್ನು ಸಕಾರಾತ್ಮಕವಾಗಿ ಸಂಪನ್ನಗೊಳಿಸುವ ಛಾತಿಯ ಪುವೀಣ್ ಕುಮಾರ್ ಶೆಟ್ಟರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ. ವಕ್ವಾಡಿಯ ಗ್ರಾಮದೇವತೆ ಮಹಾಲಿಂಗೇಶ್ವರ ದೇವಸ್ಥಾನವು ಶಿಥಿಲವಾಗಿದ್ದಾಗ 2012 ರಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ಪುವೀಣ್ ಕುಮಾರ್ ಶೆಟ್ಟಿರ ಮುಂದಾಳತ್ವದಲ್ಲಿ ದೇವಸ್ಥಾನದ ಜೀರ್ಣೋದ್ವಾರ ನಡೆಸಲಾಯಿತು. ವೈಯುಕ್ತಿಕವಾಗಿ ರೂ.25 ಲಕ್ಷ ದೇಣಿಗೆ ನೀಡಿದ್ದಲ್ಲದೆ, ದೇವಸ್ಥಾನದ ಜೀರ್ಣೋದ್ವಾರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದರು. ಪ್ರವೀಣ್ ಕುಮಾರ್ ಶೆಟ್ಟಿ, ವಕ್ವಾಡಿ ಗ್ರಾಮದ ಆರ್ಥಿಕತೆಯ ಜೀವಾಳವಾಗಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಕಟ್ಟಡಕ್ಕಾಗಿ ರೂ. 5 ಲಕ್ಷ ನೀಡಿ ಗ್ರಾಮದ ಆರ್ಥಿಕತೆಗೆ ನೆರವಾಗಿದ್ದಾರೆ. ವಕ್ವಾಡಿಯ ಕೇಂದ್ರ ಭಾಗದಲ್ಲಿ ಬಸ್ ನಿಲ್ದಾಣ ಹಾಗೂ ಅಂಚೆ ಕಛೇರಿಗೆ ಹೊಸ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ.

ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳರಡಕ್ಕೂ ಅಗತ್ಯ ಮೂಲಭೂತ ಸೌಕರ್ಯಗಳಿಗಾಗಿ ದೇಣಿಗೆ ನೀಡಿದ್ದಾರೆ. ತಾನು ಹಾಗೂ ತನ್ನ ತಂದೆ ಪ್ರಾಥಮಿಕ ಶಿಕ್ಷಣ ಪಡೆದ ಕಾವಡಿ ಹಿರಿಯ ಪ್ರಾಥಮಿಕ ಶಾಲೆಗೆ ಸಭಾಂಗಣ ನಿರ್ಮಿಸಿ ಕೊಟ್ಟಿದ್ದಾರೆ. ವಕ್ಕಾಡಿ ಪ್ರಾಥಮಿಕ ಶಾಲೆಗೆ ಬಡ ಮಕ್ಕಳು ಬರಲು ಉಚಿತ ವಾಹನದ ವ್ಯವಸ್ಥೆ ಮಾಡಿದ್ದಾರೆ. ವಕ್ವಾಡಿಯ ಗ್ರಾಮದ ಯಾವುದೇ ವ್ಯಕ್ತಿ ಕಷ್ಟ ಎಂದಾಗ ಉದಾರವಾಗಿ ಆರ್ಥಿಕ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ ಹಾಗೂ ಊರಿನ ಎಲ್ಲಾ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿದ್ದಾರೆ.

ಈ ಉದ್ದೇಶಕ್ಕಾಗಿ ವಕ್ವಾಡಿಯ ಪ್ರವೀಣ್ ಕುಮಾರ್ ಶೆಟ್ಟಿ, ಹುಟ್ಟೂರ ಸನ್ಮಾನ ಸಮಿತಿಯನ್ನು ರಚಿಸಿಕೊಂಡಿದ್ದು, ಮಾಜಿ ಶಾಸಕರೂ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಸ್ರೂರು ಅಪ್ಪಣ್ಣ ಹೆಗ್ಡೆಯವರು ಸಮಿತಿಯ ಅಧ್ಯಕ್ಷರಾಗಿದ್ದಾರೆ. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಹಾಗೂ ಉದ್ಯಮಿ ಆನಂದ ಕುಂದರ್ ರವರು ಗೌರವಾಧ್ಯಕ್ಷರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!