ಎರಡನೇ ದಿನವೂ ಉಕ್ರೇನ್ ರಾಜಧಾನಿಗೆ ರಷ್ಯಾ ದಾಳಿ- 137 ಜನರು ಸಾವು
ಕೀವ್: ಉಕ್ರೇನ್ ರಾಜಧಾನಿ ಕೀವ್‌ನ ಬೀದಿಗಳಲ್ಲಿ ರಷ್ಯಾ ಮತ್ತು ಉಕ್ರೇನ್ ಸೈನಿಕರ ನಡುವೆ ಶುಕ್ರವಾರ ಕಾಳಗ ನಡೆದಿದೆ. ನಾಗರಿಕರನ್ನು ಗುರಿಯಾಗಿಸಿ ರಷ್ಯಾ ಸೈನಿಕರು ದಾಳಿ ಮಾಡುತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆರೋಪಿಸಿದ್ದಾರೆ. ರಷ್ಯಾ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ಹೇರುವಂತೆ ಅವರು ಒತ್ತಾಯಿಸಿದ್ದಾರೆ.
ಉಕ್ರೇನ್‌ನ ಮೇಲೆ ರಷ್ಯಾ ದಾಳಿ ನಡೆಸಿದ ಎರಡನೇ ದಿನ, ಶುಕ್ರವಾರ ಮುಂಜಾನೆಗೆ ಮುನ್ನವೇ ಕೀವ್ ಮೇಲೆ ದಾಳಿ ಆರಂಭವಾಗಿದೆ. ರಷ್ಯಾ ದಾಳಿ ಮಾಡಿದಾಗಿನಿಂದ 137 ಜನರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ. ಸುಮಾರು ಒಂದು ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ಅಮೆರಿಕ ಮತ್ತು ಅದರ ಮಿತ್ರ ದೇಶಗಳು ಹಲವು ನಿರ್ಬಂಧ ಗಳನ್ನು ಹೇರಿದ್ದರೂ ರಷ್ಯಾ ಅದಕ್ಕೆ ಜಗ್ಗಿಲ್ಲ. ಯುದ್ಧದ ಆರಂಭದಲ್ಲಿಯೇ ಸಿಕ್ಕ ವ್ಯೂಹಾತ್ಮಕವಾಗಿ ಮುಖ್ಯವಾದ ಗೆಲುವಿನ ಅನುಕೂಲ ಪಡೆದುಕೊಳ್ಳುವ ಲೆಕ್ಕಾಚಾರದಲ್ಲಿ ರಷ್ಯಾ ಇದೆ.
ನಾಜಿ ಜರ್ಮನಿಯು 1941ರಲ್ಲಿ ನಡೆಸಿದ ದಾಳಿಯನ್ನು ಝೆಲೆನ್‌ಸ್ಕಿ ಅವರು ನೆನಪಿಸಿಕೊಂಡಿದ್ದಾರೆ. ರಷ್ಯಾ ದಾಳಿಯ ಸಂದರ್ಭದಲ್ಲಿ ದಿಟ್ಟತನ ತೋರಿದ್ದಕ್ಕಾಗಿ ಅವರು ಉಕ್ರೇನ್‌ನ ಜನರನ್ನು ಅಭಿನಂದಿಸಿದ್ದಾರೆ. ಯುದ್ಧದ ಅನುಭವ ಇರುವ ಜನರು ಶಸ್ತ್ರ ಕೈಗೆತ್ತಿಕೊಂಡು ಉಕ್ರೇನ್ ದೇಶವನ್ನು ರಕ್ಷಿಸಬೇಕು. ಪಶ್ಚಿಮ ದೇಶಗಳು ನೆರವು ನೀಡುವ ವಿಚಾರದಲ್ಲಿ ಅತ್ಯಂತ ನಿಧಾನವಾಗಿ ನಿರ್ಧಾರ ಕೈಗೊಳ್ಳುತ್ತಿವೆ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.
ರಷ್ಯಾ ಮತ್ತು ಜಗತ್ತಿನ ನಡುವೆ ಕಬ್ಬಿಣದ ಪರದೆ ನಿರ್ಮಾಣವಾಗಿದೆ. ‘ನಮ್ಮನ್ನು ಏಕಾಂಗಿ ಮಾಡಲಾಗಿದೆ’ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ. ‘ನಮ್ಮ ಜತೆಗೆ ಹೋರಾಡಲು ಯಾರಿದ್ದಾರೆ? ಯಾರೂ ಕಾಣಿಸುತ್ತಿಲ್ಲ’ ಎಂದೂ ಝೆಲೆನ್‌ಸ್ಕಿ ಹೇಳಿದ್ದಾರೆ. ರಷ್ಯಾದ ಮೇಲೆ ಹಲವು ನಿರ್ಬಂಧಗಳನ್ನು ಹೇರುವುದಕ್ಕೆ ಮಾತ್ರ ಅಮೆರಿಕದ ನೆರವು ಸೀಮಿತವಾಗಿದೆ. ಅಮೆರಿಕದ ಸೇನೆಯು ಉಕ್ರೇನ್‌ನಲ್ಲಿ ಯುದ್ಧ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಉಕ್ರೇನ್‌ಗೆ ಸೇನೆ ಕಳುಹಿಸುವುದಿಲ್ಲ ಎಂದು ನ್ಯಾಟೊ ಕೂಡ ದೃಢಪಡಿಸಿದೆ. ಕೀವ್‌ನ ಉತ್ತರದ ಜಿಲ್ಲೆ ಒಬ್ಲೊನ್‌ಸ್ಕಿಯನ್ನು ರಷ್ಯಾ ಸೈನಿಕರು ಧ್ವಂಸ ಮಾಡಿದ್ದಾರೆ. ಈ ಪ್ರದೇಶದಲ್ಲಿ ಗುಂಡು ಹಾರಾಟ, ಸ್ಫೋಟದ ಸದ್ದು ಕೇಳಿದೆ. ಜನರು ಸುರಕ್ಷಿತ ಸ್ಥಳಗಳಿಗೆ ಓಡಿದ್ದಾರೆ. ನಾಗರಿಕ ದಿರಿಸಿನಲ್ಲಿದ್ದ ವ್ಯಕ್ತಿಯ ಮೃತದೇಹವು ನಗರದ ಪಾದಚಾರಿ ಮಾರ್ಗದಲ್ಲಿ ಪತ್ತೆಯಾಗಿದೆ. ಒಬ್ಬ ವ್ಯಕ್ತಿಯ ಕಾರು ಶಸ್ತ್ರಸಜ್ಜಿತ ಯುದ್ಧ ವಾಹನಕ್ಕೆ ಸಿಲುಕಿ ಅಪ್ಪಚ್ಚಿಯಾಗಿದೆ. ನಗರವು ಜನರೇ ಇಲ್ಲದೆ ಬಿಕೋ ಎಂದಿದೆ. ಉಕ್ರೇನ್ ಅನ್ನು ಶೋಷಣೆಯಿಂದ ರಕ್ಷಿಸುವುದು ರಷ್ಯಾದ ಉದ್ದೇಶ. ನಾಗರಿಕರ ಮೇಲೆ ದಾಳಿ ನಡೆಸಿಲ್ಲ ಎಂದು ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲಾವ್ರೊವ್ ಹೇಳಿದ್ದಾರೆ.
ಶರಣಾದರೆ ತಕ್ಷಣ ಮಾತುಕತೆ ರಷ್ಯಾ: ಉಕ್ರೇನ್‌ನ ಸೇನೆಯು ಶರಣಾದರೆ ಮಾತುಕತೆಗೆ ಸಿದ್ಧ ಎಂದು ರಷ್ಯಾದ ವಿದೇಶಾಂಗ ಸಚಿವ ಸರ್ಗೈ ಲಾವ್ರೊವ್ ಹೇಳಿದ್ದಾರೆ. ‘ನಮ್ಮ ಕರೆಗೆ ಉಕ್ರೇನ್ ಓಗೊಟ್ಟು, ಶಸ್ತ್ರಾಸ್ತ್ರ ಕೆಳಗಿಟ್ಟ ಬಳಿಕದ ಯಾವುದೇ ಕ್ಷಣದಲ್ಲಿ ನಾವು ಮಾತುಕತೆಗೆ ಸಿದ್ಧ ಇದ್ದೇವೆ’ ಎಂದು ಲಾವ್ರೊವ್ ಹೇಳಿದ್ದಾರೆ. ಈ ಕಾರ್ಯಾಚರಣೆಯ ಉದ್ದೇಶವನ್ನು ಬಹಿರಂಗವಾಗಿಯೇ ಪ್ರಕಟಿಸಲಾಗಿದೆ. ಉಕ್ರೇನ್‌ಗೆ ಸೇನೆ ಇಲ್ಲದಂತೆ ಮಾಡುವುದು ಮತ್ತು ನಾಜಿಮುಕ್ತ ಮಾಡುವುದು ಕಾರ್ಯಾಚರಣೆಯ ಉದ್ದೇಶ ಎಂದು ಅವರು ಹೇಳಿದ್ದಾರೆ.
ಸರ್ಕಾರವನ್ನು ಪದಚ್ಯುತಗೊಳಿಸಿ: ಉಕ್ರೇನ್ ಸೇನೆಗೆ ಪುಟಿನ್ ಕರೆ: ಉಕ್ರೇನ್ ನಾಯಕತ್ವವನ್ನು ಪದಚ್ಯುತ ಗೊಳಿಸುವಂತೆ ಅಲ್ಲಿನ ಸೇನೆಗೆ ಪುಟಿನ್ ಕರೆ ಕೊಟ್ಟಿದ್ದಾರೆ. ಉಕ್ರೇನ್ ನಾಯಕತ್ವವನ್ನು ‘ಭಯೋತ್ಪಾದಕರು, ಡ್ರಗ್ ವ್ಯಸನಿಗಳು ಮತ್ತು ನವ ನಾಜಿಗಳು’ ಎಂದು ಕರೆದಿದ್ದಾರೆ. ಉಕ್ರೇನ್ ಸೇನೆಯನ್ನು ಉದ್ದೇಶಿಸಿ ಪುಟಿನ್ ಸುದ್ದಿವಾಹಿನಿ ಯಲ್ಲಿ ಭಾಷಣ ಮಾಡಿದ್ದಾರೆ. ‘ಅಧಿಕಾರವನ್ನು ನಿಮ್ಮ ಕೈಗೆ ತೆಗೆದುಕೊಳ್ಳಿ’ ಎಂದು ಸೈನಿಕರಿಗೆ ಕರೆ ಕೊಟ್ಟಿದ್ದಾರೆ.
ತೀವ್ರಗೊಂಡ ವಲಸೆ: ಕಾರುಗಳು ಮತ್ತು ಕಾಲ್ನಡಿಗೆಯಲ್ಲಿ ಜನರು ಉಕ್ರೇನ್ ತೊರೆದು ಹೋಗುತ್ತಿದ್ದಾರೆ. ಹಂಗೆರಿ, ಪೋಲೆಂಡ್ ಮತ್ತು ರೊಮೇನಿಯಾದತ್ತ ನೂರಾರು ಮಂದಿ ಸಾಗಿದ್ದಾರೆ.. ಉಕ್ರೇನ್ ಸಂಘರ್ಷದಲ್ಲಿ ಈವರೆಗೆ ಸಾವಿರಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಹೇಳಿದೆ. ರಷ್ಯಾ ಸೇನೆಗೆ ಬೇರೆ ಯಾವ ಕಾರ್ಯಾಚರಣೆಯಲ್ಲಿಯೂ ಇಷ್ಟೊಂದು ಸಾವು ನೋವು ಸಂಭವಿಸಿಲ್ಲ ಎಂದಿದೆ. ಬ್ರಿಟನ್‌ನ ಬ್ರಿಟಿಷ್ ಏರ್‌ವೇಸ್ ಮೇಲೆ ರಷ್ಯಾ ನಿಷೇಧ ಹೇರಿದೆ. ರಷ್ಯಾದ ಏರೊಫ್ಲೋಟ್ ವಿಮಾನ ಯಾನ ಸಂಸ್ಥೆಗೆ ಬ್ರಿಟನ್ ನಿಷೇಧ ಹೇರಿದ್ದಕ್ಕೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ. ವ್ಲಾಡಿಮಿರ್ ಪುಟಿನ್ ಮತ್ತು ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲಾವ್ರೊವ್ ಅವರ ಆಸ್ತಿ ಮುಟ್ಟುಗೋಲಿನ ನಿರ್ಧಾರವನ್ನು ತಕ್ಷಣ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು 27 ದೇಶಗಳ ಐರೋಪ್ಯ ಒಕ್ಕೂಟವು ಹೇಳಿದೆ